Karnataka NewsLatestPolitics

*ಕೋಮುಗಲಭೆ ಮಾಡಿದ ಆರೋಪಿಗಳ ಕೇಸ್ ವಾಪಸ್‌; ರಾಜ್ಯದ ಭದ್ರತೆಗೆ ಅಪಾಯ ತಂದಿದೆ: ಪ್ರತಿಪಕ್ಷ ನಾಯಕ ಆರ್‌.ಅಶೋಕ್*

ಪ್ರಗತಿವಾಹಿನಿ ಸುದ್ದಿ: ಕಲಬುರ್ಗಿಯಲ್ಲಿ ಕೋಮುಗಲಭೆ ಮಾಡಿದ ಆರೋಪಿಗಳ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್‌ ಸರ್ಕಾರ ಮತ್ತೆ ಮತಬ್ಯಾಂಕ್‌ ರಾಜಕಾರಣ ಮಾಡಿದೆ. ಇದು ರಾಜ್ಯದ ಭದ್ರತೆಗೆ ಅಪಾಯ ತಂದೊಡ್ಡಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯ ಆಳಂದದ ಲಾಡ್ಲೆ ಮಶಾಕ್ ದರ್ಗಾ ಬಳಿ ಪೊಲೀಸರ ಮೇಲೆ ಹಲ್ಲೆ ಮಾಡಿರುವವರ, ಸಚಿವರ ಕಾರಿನ ಮೇಲೆ ದಾಳಿ ಮಾಡಿರುವವರ, ದರ್ಗಾ ಹೆಸರಲ್ಲಿ ಕೋಮುಗಲಭೆ ಮಾಡಿರುವವರ ವಿರುದ್ಧ ಇದ್ದ ಪ್ರಕರಣಗಳನ್ನು ಕಾಂಗ್ರೆಸ್‌ ಸರ್ಕಾರ ವಾಪಸ್‌ ಪಡೆದಿದೆ. ಈ ಪ್ರಕರಣದಲ್ಲಿ ಪಾಪ್ಯುಲರ್‌ ಫ್ರಂಟ್‌ ಸೇರಿದಂತೆ ಸುಮಾರು 150 ಮಂದಿಯ ಮೇಲಿದ್ದ ಕೇಸುಗಳನ್ನು ತೆಗೆದುಹಾಕಿ ವೋಟ್‌ ಬ್ಯಾಂಕ್‌ ರಾಜಕೀಯ ಮಾಡಲಾಗಿದೆ. ಸಂವಿಧಾನಬದ್ಧವಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಹಾಗೂ ಮುಖ್ಯಮಂತ್ರಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಮತ ನೀಡಿದರೆ ಸಾಕು, ಭಯೋತ್ಪಾದನೆ ಮಾಡಿದರೂ ಬೆಂಬಲಿಸುತ್ತೇವೆ ಎಂಬ ಸಂದೇಶವನ್ನು ಕಾಂಗ್ರೆಸ್‌ ನೀಡಿದೆ. ಇಂತಹ ಕ್ರಮಗಳಿಂದಾಗಿ ದೇಶದ ಭದ್ರತೆಗೆ ಅಪಾಯ ಬರುತ್ತದೆ ಎಂದರು.

ಬಾಂಗ್ಲಾ ಪ್ರಜೆಗಳು ದೇಶದೊಳಗೆ ನುಗ್ಗಿ ದೇಶದ್ರೋಹಿ ಕೆಲಸಗಳನ್ನು ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ಕೆಲವರು ಕೋಮುಗಲಭೆ ಮಾಡುತ್ತಿದ್ದಾರೆ. ಈ ಕ್ರಮದಿಂದ ಹಿಂದೆ ಸರಿಯದೇ ಇದ್ದರೆ ಬಿಜೆಪಿ ಹೋರಾಟ ಮಾಡಲಿದೆ. ಇತ್ತೀಚೆಗೆ ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ಅವಕಾಶ ನೀಡಲಾಗಿದೆ ಹಾಗೂ ಮುಸ್ಲಿಮ್‌ ಸಮುದಾಯಕ್ಕೆ ಸುಮಾರು 600 ಕೋಟಿ ರೂ. ಅನುದಾನ ನೀಡಲಾಗಿದೆ. ಈ ಮೂಲಕ ಕೇವಲ ಮತಕ್ಕಾಗಿ ಮುಸ್ಲಿಮರಿಗೆ ಬಂಪರ್‌ ಬಹುಮಾನಗಳನ್ನು ನೀಡಿ ಓಲೈಕೆ ಮಾಡಲಾಗಿದೆ. ರೈತರು, ಕನ್ನಡಪರ ಹೋರಾಟಗಾರರ ಪ್ರಕರಣಗಳನ್ನು ಹಿಂಪಡೆದಿರುವುದು ಸರಿ ಇದೆ. ಆದರೆ ಕೋಮುಗಲಭೆ ಮಾಡಿರುವವರು ಯಾರ ಪರವಾಗಿ ಹೋರಾಟ ಮಾಡಿದ್ದಾರೆ? ಇದು ಬಹುಸಂಖ್ಯಾತರಿಗೆ ದ್ರೋಹ ಬಗೆದ ಕ್ರಮ ಎಂದರು.

ಆನೇಕಲ್‌ನಲ್ಲಿ ರೈತರು, ಪರಿಸರವಾದಿಗಳ ವಿರೋಧದ ನಡುವೆಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವನ್ನು ವರ್ಷಕ್ಕೆ ಕೇವಲ ನಾಲ್ಕೈದು ಬಾರಿ ತೆರೆಯಲಾಗುತ್ತದೆ. ಇಂತಹ ಸ್ಥಿತಿ ಇರುವಾಗ ಯಾವ ಕಾರಣಕ್ಕೆ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ? ಕ್ರೀಡಾಂಗಣದ ಸುತ್ತ ಜಮೀನು ಮಾರಾಟ ಮಾಡಲು, ಅದರಿಂದ ಕಮಿಶನ್‌ ಹೊಡೆಯಲು ಈ ಯೋಜನೆ ರೂಪಿಸಲಾಗಿದೆ. ಆನೇಕಲ್‌ನ ಯಾರಾದರೂ ಕ್ರೀಡಾಪಟು ಸರ್ಕಾರದ ಬಳಿ ಬಂದು ಇದಕ್ಕೆ ಮನವಿ ಮಾಡಿದ್ದಾರೆಯೇ? ಏಕಾಏಕಿ ಈ ಯೋಜನೆ ರೂಪಿಸಿದ್ದಾರೆ ಎಂದರೆ ಇದು ಖಂಡಿತವಾಗಿ ಹಣ ಸಂಪಾದಿಸಲು ಮಾಡಿರುವ ಯೋಜನೆಯಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ತರಬೇತಿಗೆ ಅವಕಾಶ ನೀಡುವ ಉದ್ದೇಶವಿತ್ತು. ಆದರೆ ಯಾವುದೇ ಹೊಸಬರಿಗೆ ಇಲ್ಲಿ ತರಬೇತಿ ನೀಡುವುದಿಲ್ಲ. ಕೋಟಗಟ್ಟಲೆ ಹಣ ಬರುವ ಐಪಿಎಲ್‌ಗೆ ಮಾತ್ರ ಇಲ್ಲಿ ಅವಕಾಶವಿದೆ ಎಂದರು.

Home add -Advt

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳದಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿಯಾಗಿ ನಯಾಪೈಸೆ ತೆರಿಗೆ ಬರುವುದಿಲ್ಲ. ಆದರೆ ರಾಜ್ಯ ಸರ್ಕಾರಕ್ಕೆ ಸುಮಾರು ವಾರ್ಷಿಕ 7,000 ಕೋಟಿ ರೂ. ಆದಾಯ ಬರಲಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಜನರ ಬಗ್ಗೆ ಗೌರವವಿದ್ದರೆ ಅದನ್ನು ಬಿಡಲು ತಯಾರಿದ್ದೇವೆ ಎಂದು ಹೇಳಬೇಕು. ಕೇವಲ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಸರಿಯಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗಿರುವ ದರ ಏರಿಕೆಯಿಂದಾಗಿ ತೈಲ ಕಂಪನಿಗಳು ದರ ಏರಿಕೆ ಮಾಡಿವೆ. ಯುದ್ಧ ನಡೆಯುತ್ತಿರುವುದರಿಂದ ಎಲ್ಲ ದೇಶಗಳಲ್ಲಿ ತೈಲ ದರ ಹೆಚ್ಚಳವಾಗಿದೆ. ದೇಶದ ಕಷ್ಟಕಾಲದಲ್ಲಿ ನಾವು ಸಹಕಾರ ನೀಡಿದ್ದೇವೆ ಎಂದು ಚಿತ್ರನಟ ಕಮಲ್‌ ಹಾಸನ್‌ ಹೇಳಿದ್ದಾರೆ. ಡಿಎಂಕೆ ಪಕ್ಷಕ್ಕೆ ಬುದ್ಧಿ ಬಂದರೂ ಕಾಂಗ್ರೆಸ್‌ಗೆ ಇನ್ನೂ ಬುದ್ಧಿ ಬಂದಿಲ್ಲ. ಕಾಂಗ್ರೆಸ್‌ ಸರ್ಕಾರಕ್ಕೆ ಬರುತ್ತಿರುವ ತೆರಿಗೆಯ ಹಣದಲ್ಲಿ ಕಡಿತ ಮಾಡಲಿ ಎಂದು ಆಗ್ರಹಿಸಿದರು.

ʼಕಾಕ್ರೋಚ್ ಪಾರ್ಟಿʼ ಎಂಬುದು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದವರ ಕುತಂತ್ರದ ರಾಜಕಾರಣ. ಇದು, ಕೆಲಸವಿಲ್ಲದ ಕಾಂಗ್ರೆಸ್ ಹಾಗೂ ಅಧಿಕಾರವಿಲ್ಲದ ಆಮ್ ಆದ್ಮಿ ಪಕ್ಷ ಸೇರಿ ಮಾಡುತ್ತಿರುವ ಅವಾಂತರವಾಗಿದೆ. ನ್ಯಾಯಾಂಗದ ವಿರುದ್ಧ ಮಾತನಾಡುವುದು ಸರಿಯಲ್ಲ. ನ್ಯಾಯಾಲಯದ ತೀರ್ಪು ಮತ್ತು ಅಭಿಪ್ರಾಯಗಳಿಗೆ ಎಲ್ಲರೂ ಗೌರವ ನೀಡಬೇಕು, ನ್ಯಾಯಾಂಗದ ವಿರುದ್ಧ ಇಂತಹ ವಿಲಕ್ಷಣ ನಡೆ ಸರಿಯಲ್ಲ ಎಂದರು.

Related Articles

Back to top button