*ಬೆಳಗಾವಿ ಹವ್ಯಕ ಸಂಘದಿಂದ ಭಕ್ತಿಭಾವದ ಯಜ್ಞೋಪವೀತ ಧಾರಣೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಬೆಳಗಾವಿ ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಯಜ್ಞೋಪವೀತ ಧಾರಣೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮವನ್ನು ಶುಕ್ರವಾರ ಭಕ್ತಿಭಾವ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಯಿತು.
ಕೊಲ್ಲಾಪುರ ಸರ್ಕಲ್ ಬಳಿಯ ಗೀತಗಂಗಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು. ಧಾರ್ಮಿಕ ಆಚರಣೆಗಳೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದ್ದು, ಕಾರ್ಯಕ್ರಮವು ಹವ್ಯಕ ಸಮುದಾಯದ ಸಂಪ್ರದಾಯ, ಸಂಸ್ಕೃತಿ ಹಾಗೂ ಕುಟುಂಬದ ಬಾಂಧವ್ಯವನ್ನು ಪ್ರತಿಬಿಂಬಿಸಿತು. ಕಾರ್ಯಕ್ರಮದ ಅಂಗವಾಗಿ ಯಜ್ಞೋಪವೀತ ಧಾರಣೆ ಹಾಗೂ ರಕ್ಷಾ ಬಂಧನದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಸಂಪ್ರದಾಯದ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೂ ನಮ್ಮ ಆಚರಣೆಗಳು ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಸಂಘದ ಹಿರಿಯ ಸದಸ್ಯರಾದ ಎ.ಕೆ.ಭಟ್, ವಿ.ಎನ್.ಹೆಗಡೆ, ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಮಹಿಳೆಯರಿಂದ ಭಗವದ್ಗೀತೆಯ ಶ್ಲೋಕ ಪಠಣ ನಡೆಯಿತು. ಭಗವದ್ಗೀತೆಯ ಶ್ಲೋಕಗಳ ಸಾಮೂಹಿಕ ಪಠಣ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಇದೇ ಸಂದರ್ಭದಲ್ಲಿ ಹಳೆಯ ಹಾಡುಗಳ ಗಾಯನ ಕಾರ್ಯಕ್ರಮವೂ ನಡೆಯಿತು. ಸದಸ್ಯರು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಮಕ್ಕಳಿಗಾಗಿ ವಿಶೇಷವಾಗಿ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಮಕ್ಕಳ ವಿವಿಧ ಪ್ರತಿಭಾ ಪ್ರದರ್ಶನಗಳು ನೆರೆದಿದ್ದವರ ಗಮನ ಸೆಳೆದವು. ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಆಸಕ್ತಿ ಬೆಳೆಸುವುದರ ಜೊತೆಗೆ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವೂ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು. ಸಂಘದ ವತಿಯಿಂದ ನಿಯಮಿತವಾಗಿ ಭಗವದ್ಗೀತೆ ತರಗತಿಗಳನ್ನು ನಡೆಸುತ್ತಿರುವ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸದಸ್ಯರ ಸೇವೆಯನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಕೃಷ್ಣ ಭಟ್ ಮತ್ತು ಪಂಕಜಾ ಭಟ್ ಅವರ ಕುಟುಂಬದ ವತಿಯಿಂದ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಪ್ರಸಾದ ಸ್ವೀಕರಿಸಿದರು.

ಸಂಘದ ಅಧ್ಯಕ್ಷೆ ಪೂರ್ಣಿಮಾ ಹೆಗಡೆ ಅವರು ಸ್ವಾಗತಿಸಿ, ಸಂಘದ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ವಿವಿಧ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾತನಾಡಿದರು. ಸಂಘದ ಕಾರ್ಯಚಟುವಟಿಕೆಗಳಿಗೆ ಸದಸ್ಯರ ಸಹಕಾರ ಹಾಗೂ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಹೇಳಿದರು.
ಕಾರ್ಯದರ್ಶಿ ಚಂದ್ರಶೇಖರ ಶಾಸ್ತ್ರಿ ಅವರು ಸಂಘದ ವಾರ್ಷಿಕ ವರದಿಯನ್ನು ವಾಚಿಸಿ, ಸಂಘದ ವತಿಯಿಂದ ಕೈಗೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪರಮೇಶ್ವರ ಹೆಗಡೆ ಮತ್ತು ಗೀತಾ ಹೆಗಡೆ ಪೂಜೆ ನೆರವೇರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಕೆ. ಹೆಗಡೆ, ಸೀತಾರಾಮ ಭಾಗ್ವತ, ವಸುಮತಿ ಹೆಗಡೆ ಅವರು ಕಾರ್ಯಕ್ರಮದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ಸಹಕರಿಸಿದರು.
ಸುಬ್ರಹ್ಮಣ್ಯ ಭಟ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಗಣೇಶ ಹೆಗಡೆ ಅವರು ವಂದಿಸಿದರು. ಧಾರ್ಮಿಕ ಆಚರಣೆ, ಭಗವದ್ಗೀತೆಯ ಶ್ಲೋಕ ಪಠಣ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ಸದಸ್ಯರ ಆತ್ಮೀಯ ಭಾಗವಹಿಸುವಿಕೆಯಿಂದ ಬೆಳಗಾವಿ ಹವ್ಯಕ ಕ್ಷೇಮಾಭಿವೃದ್ಧಿ ಸಂಘದ ಯಜ್ಞೋಪವೀತ ಧಾರಣೆ ಮತ್ತು ರಕ್ಷಾ ಬಂಧನ ಕಾರ್ಯಕ್ರಮವು ಅರ್ಥಪೂರ್ಣವಾಗಿ ನೆರವೇರಿತು.




