ಧೀಮಂತ, ಅಪರೂಪದ ಪ್ರಧಾನ ಸೇವಕ ನರೇಂದ್ರ ಮೋದಿ : ಚಕ್ರವರ್ತಿ ಸೂಲಿಬೆಲೆ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ :
ಕಳೆದ ಹತ್ತು ವರ್ಷದಿಂದ ಒಂದೂ ರಜೆ ಪಡೆಯದೇ ಕೆಲಸ ಮಾಡಿದ ಧೀಮಂತ, ಅಪರೂಪದ ಪ್ರಧಾನ ಸೇವಕ ಅಂದರೆ ಅದು ನರೇಂದ್ರ ಮೋದಿ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಅವರು ಬುಧವಾರ ಸಂಜೆ ಚಿಕ್ಕೋಡಿ ನಗರದ ಕಿವಡ ಮೈದಾನದಲ್ಲಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲೇ ನಮೋ ಬ್ರಿಗೇಡ್ ಕಟ್ಟಿದ್ದೆವು. ನಮ್ಮ ಗುರಿ ಉದ್ದೇಶ ಒಂದೇ. ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದು ಎಂದು ಸೂಲಿಬೆಲೆ ವಿಶ್ವಾಸ ಹೇಳಿದರು.
ಸಾರ್ಕ್ ಪ್ರಮುಖರನ್ನು ಕರೆದು ಪ್ರಮಾಣ ವಚನ ಸ್ವೀಕಾರ ಮಾಡಿದ್ರು. ದೇಶದ ಜನರನ್ನ ರೇಡಿಯೋ ಮೂಲಕ ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ಮುಟ್ಟಿದ್ದಾರೆ. ಮೋದಿ ಅವರು ವಿಶ್ವದ ಯಾವುದೇ ಮೂಲೆಗೆ ಹೋದರೂ ಹಿಂದುತ್ವ ಬಿಡಲಿಲ್ಲ. ಶ್ವೇತಭವನಕ್ಕೆ ಹೋದರೂ ನವರಾತ್ರಿ ಉಪವಾಸ ಬಿಡಲಿಲ್ಲ. ಮುಸಲ್ಮಾನರ ಮನಸ್ಸನ್ನು ಕೂಡ ಮೋದಿ ಗೆದ್ದಿದ್ದಾರೆ. ದೀಪಾವಳಿಯನ್ನ ಸೈನಿಕರೊಂದಿಗೆ ಆಚರಣೆ ಮಾಡಿದ್ದಾರೆ. ಪೌರ ಕಾರ್ಮಿಕರ ಕಾಲು ತೊಳೆದು ಗೌರವಿಸಿದ ಮೊದಲ ಪ್ರಧಾನಿ ಮೋದಿ ಎಂದರು.
ದೇಶದ ಆರ್ಥಿಕತೆಗಾಗಿ ಡಿಮೋನಟೈಜೆಶನ್ ಮಾಡಿದ ಮೊದಲ ಪ್ರಧಾನಿ ಮೋದಿ. ಡಿಮೋನಟೈಜೆಶನ್ ನಂತರ ವಿಶ್ವದ ೫ನೇ ಶ್ರೀಮಂತ ರಾಷ್ಟ್ರ ಆಯ್ತು ಭಾರತ. ಪಾಕಿಸ್ತಾನ ಇದೀಗ ಭಿಕ್ಷೆ ಬೇಡುವ ಪರಿಸ್ಥಿತಿಗೆ ಬಂದಿದೆ. ಪಾಕಿಸ್ಥಾನಕ್ಕೆ ಯಾಕೆ ಈ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್ ಅವರಿಗೆ ಕೇಳಬೇಕು. ಆರ್ಟಿಕಲ್ ೩೭೦ ಕಿತ್ತು ಬಿಸಾಡುವ ಸಾಹಸ ತೋರಿದ್ದು ಪ್ರಧಾನಿ ಮೋದಿ ಎಂದು ಹಾಡಿ ಹೊಗಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ನವರು ಚಕ್ರವರ್ತಿ ಸುಳ್ಳು ಹೇಳುತ್ತಾರೆ ಎಂದು ಸಾಕಷ್ಟು ಬಾರಿ ಹೇಳಿದ್ದಾರೆ. ನನ್ನ ಭಾಷಣದ ಒಂದು ತುಣುಕನ್ನು ತೆಗೆದು ಅಪಪ್ರಚಾರ ಮಾಡಿದ್ದಾರೆ. ವಿಕೃತ ಪ್ರಚಾರ ಮಾಡಿ ಕಲ್ಲು ಹೊಡೆದರು. ಎರಡು ವರ್ಷ ನಾನು ಕಾಂಗ್ರೆಸ್ನವರಿಗೆ ಉತ್ತರ ಕೊಡಲಿಲ್ಲ. ಆದರೆ ಇತ್ತೀಚೆಗೆ ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳಿದ್ದಾರೆ. ಬಿಜೆಪಿ ೪೦೦ ಸ್ಥಾನಗಳನ್ನು ಗೆಲ್ಲುತ್ತದೆ ಎಂದು. ಹೀಗಾಗಿ ಅವರೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಮೋದಿ ಅಲೆ ಹೇಗಿದೆ ಅಂದ್ರೆ ಮಂತ್ರಿಗಳೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಹೆದರುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇವತ್ತು ಕಾಶ್ಮೀರದಲ್ಲಿ ನಿರ್ಭಯವಾಗಿ ಗಲ್ಲಿ ಗಲ್ಲಿಯಲ್ಲಿ ಕ್ರಿಕೆಟ್ ಆಡಬಹುದು. ಅದಕ್ಕೆ ಕಾರಣ ನರೇಂದ್ರ ಮೋದಿ. ಕಳೆದ ಐದುನೂರು ವರ್ಷದಲ್ಲಿ ಇಂತಹ ರಾಜ ಬರಲಿಲ್ಲ. ೭೫ ವರ್ಷಗಳಲ್ಲಿ ಶ್ರೇಷ್ಠ ಪ್ರಧಾನಿ ಅನ್ನುವುದಕ್ಕಿಂತ ರಾಜ ಅನ್ನಬಹುದು. ರಾಮಮಂದಿರಕ್ಕೆ ಬರಲು ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಅಹ್ವಾನ ಕೊಟ್ಟರೂ ಮುಸ್ಲಿಂರ ತುಷ್ಟೀಕರಣಕ್ಕಾಗಿ ಬರಲಿಲ್ಲ. ರಾಮಮಂದಿರ ನಮ್ಮ ಪ್ರೇರಣೆ ಮಂದಿರ. ಕಾಂಗ್ರೆಸ್ನವರಿಗೆ ಇದೆಲ್ಲ ಹೇಳಿದ್ರೆ ಟೆನ್ಸನ್ ಆಗುತ್ತಾರೆ. ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಯಾಕೆ ಭಾರತ ರತ್ನ ಕೊಡಲಿಲ್ಲ. ಬಾಬಾಸಾಹೇಬರಿಗೆ ಪಂಚತೀರ್ಥ ಅರ್ಪಿಸಿದ್ದು ಮೋದಿ ಅವರು. ಆದರೆ ಅಂಬೇಡ್ಕರ್ ಅವರಿಗೆ ಮೋದಿ ಏನು ಮಾಡಿದ್ರು ಎಂದು ಕಾಂಗ್ರೆಸ್ ನವರು ಪ್ರಶ್ನೆ ಮಾಡುತ್ತಾರೆ. ದೇಶದ ಬದಲಾವಣೆಯ ಹರಿಕಾರ ಮೋದಿ. ೨೨ ವರ್ಷಗಳ ಅಧಿಕಾರದ ಅವಧಿಯಲ್ಲಿ ಒಂದು ಭ್ರಷ್ಠಾಚಾರದ ಆರೋಪ ಇಲ್ಲ. ಸ್ಕ್ಯಾಮ್ಗಳ ದೇಶವನ್ನ ಕಾಂಗ್ರೆಸ್ ಮಾಡಿ ಇಟ್ಟಿದ್ದರು ಎಂದು ವಾಗ್ದಾಳಿ ನಡೆಸಿದರು.
ಯಾರು ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಾರೋ ಅವರನ್ನ ಸಮರ್ಥನೆ ಮಾಡಿಕೊಳ್ಳುತ್ತಾರೋ ಅವರಿಗೆ ನಯಾ ಪೈಸಾ ಕಿಮ್ಮತಿಲ್ಲ. ನಾವು ಜಗತ್ತಿನ ೨೦ ರಾಷ್ಟ್ರಗಳಿಗೆ ಉಚಿತವಾಗಿ ವ್ಯಾಕ್ಸಿನ್ ಕೊಟ್ಟಿದ್ದೇವೆ. ನೂರು ರಾಷ್ಟ್ರಗಳಿಗೆ ೩೦ ಕೋಟಿ ವ್ಯಾಕ್ಸಿನ್ ಕಳುಹಿಸಿದ್ದಾರೆ. ಮೋದಿ ಅವರ ಬಗ್ಗೆ ನನಗೆ ಗೊತ್ತಿರುವ ವಿಚಾರಗಳನ್ನ ಹೇಳುತ್ತಿದ್ದೇನೆ. ಕಾಂಗ್ರೆಸ್ ನವರ ಮೇಲೆ ಯಾಕೆ ಬೇಜಾರು ಅಂದರೆ ಕಾಂಗ್ರೆಸ್ ಎಂಎಲ್ಎ ಮನೆಗೆ ಬೆಂಕಿ ಹಚ್ಚಿದವರನ್ನ ಬ್ರದರ್ ಅನ್ನುತ್ತಾರೆ ಎಂದು ಹೆಸರೇಳದೇ ಕಾಂಗ್ರೇಸ್ನವರನ್ನು ತಿವಿದರು.
ಕಲ್ಬುರ್ಗಿ ಇಎಸ್ಐ ಆಸ್ಪತ್ರೆ ನಿರ್ಮಾಣದ ವಿಚಾರವಾಗಿ ಖರ್ಗೆ ಕುಟುಂಬದ ವಿರುದ್ಧವೂ ವಾಗ್ದಾಳಿ ನಡೆಸಿದ ಚಕ್ರವರ್ತಿ ಸೂಲಿಬೆಲೆ, ಖರ್ಗೆ ಸಾಹೇಬರ ಕಾಲದಲ್ಲಿ ಇಎಸ್ಐ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಆಸ್ಪತ್ರೆ ಮೇಲ್ಭಾಗದಲ್ಲಿ ಡ್ರೋನ್ ಕ್ಯಾಮರಾದಿಂದ ನೋಡಿದ್ರೆ ಈ ಚಿತ್ರ ಕಾಣ್ತದೆ. ಮೊದಲ ಅಕ್ಷರ ಖ, ಎರಡನೇ ಅಕ್ಷರ ಗೆ, ಆ ಮೇಲೆ ಅರ್ಧ ಅಕ್ಷರ ಖರ್ಗೆ ಅಂತ. ಅವರು ಕಟ್ಟಿದ ಬಿಲ್ಡಿಂಗ್ ಮೇಲೆ ಖರ್ಗೆ ಅಂತ ಕಾಣಬೇಕು. ಕಟ್ಟಡ ಇರೋವರೆಗೆ ಅವರ ಹೆಸರು ಉಳಿಬೇಕು ಅಂತ. ಸ್ವಂತ ದುಡ್ಡಲ್ಲ, ಪಾರ್ಟಿ ದುಡ್ಡಲ್ಲ ಜನರ ತೆರಿಗೆ ದುಡ್ಡಲ್ಲಿ ತಮ್ಮ ಹೆಸರು ಶಾಶ್ವತಗೊಳಿಸುವಂತ ಅಯೋಗ್ಯರಿದ್ದಾರೆ ಎಂದು ಜರಿದರು.
ನರೇಂದ್ರ ಮೋದಿಯವರು ಯಾವತ್ತಾದರೂ ತಮ್ಮ ಹೆಸರು ಉಳಿಸಿಕೊಂಡಿದ್ದಾರಾ ? ಗುಜರಾತ್ನಲ್ಲಿ ಸ್ಟೇಡಿಯಂಗೆ ತಮ್ಮ ಹೆಸರು ಇಟ್ಟುಕೊಂಡ್ರು. ಇವತ್ತಿಗೂ ಕಾಂಗ್ರೆಸ್ ನಾಯಕರು ಬಾಯಿ ಬಡಿದುಕೊಳ್ತಾರೆ. ಏ ಪುಣ್ಯಾತ್ಮ ನಿನ್ನ ಹೆಸರಲ್ಲಿ ಒಂದು ಆಸ್ಪತ್ರೆ ಕಟ್ಟಿಸಿಕೊಂಡಿದಿ ಅಲ್ವಾ, ನಾಚಿಕೆ ಆಗಲ್ವಾ ? ಎಂದು ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ಮಾಡಿದರು.
ವಾಜಪೇಯಿ ಅವರು ಸುವರ್ಣ ಚತುಷ್ಪತ ರಸ್ತೆಯಂತ ಮಾಡಿದ್ರು. ಸುವರ್ಣ ಚತುಷ್ಪತ ರಸ್ತೆ ಅಂದ್ರೆ ಚಿನ್ನದ ರಸ್ತೆಯಂತ. ವಾಜಪೇಯಿಗೂ ಮುಂಚೆ ಕಾಂಗ್ರೆಸ್ ನಾಯಕರಿಗೆ ಇಂತಹ ಕಲ್ಪನೆಯೇ ಇರಲಿಲ್ಲ. ರಾಜ್ಯದಲ್ಲಿ ಮುಂದೆಯೂ ಬಿಟ್ಟಿ ಭಾಗ್ಯ ಮುಂದುವರಿದ್ರೆ ರೋಡ್ ಸಹ ಆಗಲ್ಲ. ಟ್ಯಾಕ್ಸ್ ಕಲೆಕ್ಟ್ ಮಾಡಿ ಹಂಚಿ ಅನ್ನೋದಕ್ಕೆ ಈ ಸರಕಾರವಿದೆ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆಯೂ ವ್ಯಂಗ್ಯ ಮಾಡಿದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಮಾಜಿ ಸಚಿವೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಪ್ರವೀಣ ಕಾಂಬಳೆ, ಸಂಜಯ ಕವಟಗಿಮಠ, ಮಲ್ಲಿಕಾರ್ಜುನ ಕವಟಗಿಮಠ, ಶಾಂಭವಿ ಅಶ್ವಥಪೂರ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಜಯಾನಂದ ಜಾಧವ, ಅಪ್ಪಾಸಾಹೇಬ ಚೌಗಲಾ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ