Kannada News
ಪರೀಕ್ಷಾ ಭಯದಿಂದ ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಸೋಮವಾರದಿಂದ ಆರಂಭಗೊಂಡ ದ್ವಿತೀಯ ಪಿಯು ಪರೀಕ್ಷೆಯ ಭಯದಿಂದ
ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ
ಪಟ್ಟಣದ ಹೊರವಲಯದ ಹೊಣಕಲ್ ಗ್ರಾಮದಲ್ಲಿ ಸೋಮವಾರ ಮುಂಜಾನೆ ವರದಿಯಾಗಿದೆ.
ಗ್ರಾಮದ ಚೇತನ ರಮೇಶ ತೋರಾಳಕರ (18) ಮೃತ ವಿದ್ಯಾರ್ಥಿ. ಈತ ಪಟ್ಟಣದ ಖಾಸಗಿ ಪಿಯು
ಕಾಲೇಜಿನಲ್ಲಿ ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ. ಭಾನುವಾರ ರಾತ್ರಿ
ತನ್ನ ಕೊಠಡಿಯಲ್ಲಿ ಓದಿಕೊಳ್ಳುವುದಾಗಿ ಪೋಷಕರಿಗೆ ಹೇಳಿ ಒಳಗಿನಿಂದ ಬಾಗಿಲು
ಹಾಕಿಕೊಂಡಿದ್ದ ಚೇತನ ಬೆಳಗ್ಗೆ ಪರೀಕ್ಷೆಯ ಸಮಯವಾಗುತ್ತ ಬಂದರೂ ಬಾಗಿಲು
ತೆಗೆಯದ್ದರಿಂದ ಅನುಮಾನಗೊಂಡ ಪೋಷಕರು ಬಾಗಿಲು ಒಡೆದು ಗಮನಿಸಿದಾಗ ಆತ ಆತ್ಮಹತ್ಯೆ
ಮಾಡಿಕೊಂಡದ್ದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಖಾನಾಪುರ ಠಾಣೆಯ ಪೊಲೀಸರು ಭೇಟಿ
ನೀಡಿ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.


