ಪ್ರಗತಿವಾಹಿನಿ ಸುದ್ದಿ; ಉಡುಪಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ಸಿಕ್ಕಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಬಿ ರಿಪೊರ್ಟ್ ಸಲ್ಲಿಸಿದ್ದು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಾಕ್ಷಾಧಾರಗಳ ಕೊರತೆಯಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವಂತಹ ಅಂಶಗಳಲ್ಲಿ ಈಶ್ವರಪ್ಪ ಭಾಗಿಯಾದ ಬಗ್ಗೆ ಸೂಕ್ತ ಸಾಕ್ಷಾಧಾರಗಳು ಲಭ್ಯವಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಗುತ್ತಿಗೆದಾರ ಸಂತೋಷ್ ಪಾಟೀಲ್, ಡೆತ್ ನೋತ್ ಬರೆದಿಟ್ಟು ಏಪ್ರಿಲ್ 11ರಂದು ಉಡುಪಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್ ನಲ್ಲಿ ಈಶ್ವರಪ್ಪ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಪ್ರಕರಣದ ಬೆನ್ನಲ್ಲೇ ವಿಪಕ್ಷಗಳ ಒತ್ತಡಕ್ಕೆ ಮಣಿದು ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಪ್ರಕರಣದಲ್ಲಿ ಈಶ್ವರಪ್ಪನವರಿಗೆ ಬಿಗ್ ರಿಲೀಫ್ ಸಿಕ್ಕಿದೆ ಎನ್ನಲಾಗಿದೆ.
ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ಬೆಳಗಾವಿಯ ಹಿಂಡಲಗಾ ಗ್ರಾಮದಲ್ಲಿ ರಸ್ತೆ ಮತ್ತಿತರ ಒಟ್ಟು 108 ಕಾಮಗಾರಿಗಳನ್ನು ಈಶ್ವರಪ್ಪ ಅವರ ಭರವಸೆಯ ಮೇರೆಗೆ ಮಾಡಿದ್ದೇನೆ, ಆದರೆ ಈ ಕಾಮಗಾರಿಗಳ ಕ್ರಿಯಾದೇಶ ಆಗದೇ ಹಣ ಪಾವತಿ ಆಗಿಲ್ಲ , ಸಚಿವ ಈಶ್ವರಪ್ಪ ಅವರು ತಮ್ಮ ಆಪ್ತರ ಮೂಲಕ 40 ಪರ್ಸೆಂಟ್ ಕಮೀಷನ್ ಕೇಳುತ್ತಿದ್ದಾರೆ ಎಂದು ಸಂತೋಷ ಪಾಟೀಲ್ ಆರೋಪಿಸಿದ್ದರು. ಬಳಿಕ ಸ್ನೇಹಿತರೊಂದಿಗೆ ಉಡುಪಿಗೆ ತೆರಳಿದ್ದ ಅವರು ಉಡುಪಿಯ ಲಾಡ್ಜ್ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸಂತೋಷ ಪಾಟೀಲ್ ಕುಟುಂಬದವರು ಸಂತೋಷ್ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಆರೋಪಿಸಿದ್ದರು. ಈ ಸಂಬಂಧ ಈಶ್ವರಪ್ಪ ಅವರ ವಿರುದ್ಧ ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಸುಮಾರು 70-80 ದಿನಗಳ ಕಾಲ ಬೆಳಗಾವಿಯಲ್ಲಿ ತನಿಖೆ ನಡೆಸಿದ ಉಡುಪಿ ಪೊಲೀಸರು ಅಂತಿಮವಾಗಿ, ಸಂತೋಷ್ ಆತ್ಮಹತ್ಯೆಗೆ ಈಶ್ವರಪ್ಪ ಅವರು ಪ್ರಚೋದನೆ ನೀಡಿದ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದಾರೆ. ಇದರಿಂದ ಮಾಜಿ ಸಚಿವ ಈಶ್ವರಪ್ಪ ಅವರಿಗೆ ಕೊಂಚ ನಿರಾಳತೆ ಲಭಿಸಿದಂತಾಗಿದೆ.
ಕವರ್ ಸಮೇತ ಚಾಕಲೇಟ್ ತಿಂದ ಬಾಲಕಿ; ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ