ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ‘ಕೃಷಿ ಇಲಾಖೆ ಹಾಗೂ ತಾಲ್ಲೂಕಾ ಪಂಚಾಯಿತಿಯಿಂದ ತಾಲ್ಲೂಕಿನ ಶೇಂಡೂರ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಕಂದಕಗಳನ್ನು ತೋಡುವ ಮೂಲಕ ನೀರು ಇಂಗಿಸಿ ದುಡಿಯುವ ಕೈಗಳಿಗೆ ಮನರೇಗಾದಡಿ ಕೆಲಸ ಕೊಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ತಮ್ಮ ಸಮಯಕ್ಕನುಗುಣವಾಗಿ ಶ್ರಮಿಸಿ ಹಣ ಸಂಪಾದಿಸಿ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಕರೆ ನೀಡಿದ್ದಾರೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2021-22ನೇ ಸಾಲಿನ ಕೃಷಿ ಇಲಾಖೆಯ ಕಿರು ಜಲಾನಯನ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು. ‘ತಾಲ್ಲೂಕಿನ ಗುಡ್ಡಗಾಡು ಪ್ರದೇಶದಲ್ಲಿರುವ ಶೇಂಡೂರ, ಗೊಂದುಗುಪ್ಪಿ, ಯರನಾಳ, ಅಮಲಝರಿ, ಸ್ತವನಿಧಿ ಗ್ರಾಮಗಳಲ್ಲಿ ಜಲಾನಯನದ 12 ಕಾಮಗಾರಿಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಈ ಮೂಲಕ 6534 ಹೆಕ್ಟರ್ ಜಮೀನು ನೀರಾವರಿಗೆ ಒಳಪಡಲಿದೆ’ ಎಂದರು.
‘ರೈತರು ತಮ್ಮ ಕೃಷಿ ಜಮೀನಿನಲ್ಲಿಯೂ ಬದು ನಿರ್ಮಿಸಿ ಈ ಯೋಜನೆಯ ಮೂಲಕ ಕೂಲಿ ಕೆಲಸ ಮಾಡಿಕೊಳ್ಳಬಹುದು. ಈ ಯೋಜನೆಗಳ ಕ್ರಿಯಾ ಯೋಜನೆ ತಯಾರಿಸಿದ್ದು 17646 ಜನರಿಗೆ ಕೂಲಿ ಸಿಗಲಿದೆ. ವಲಸೆ ಹೋಗಿದ್ದವರು ತಮ್ಮತಮ್ಮ ಮನೆಗಳಿಗೆ ಸೇರಿದ್ದು ಅವರೆಲ್ಲರಿಗೂ ಕೆಲಸ ಸಿಗಲಿದೆ’ ಎನ್ನುತ್ತ ಮನರೇಗಾ ಕುರಿತು ವಿವರಿಸಿ ಕೈಗೆತ್ತಿಕೊಳ್ಳಬಹುದಾದ ಕಾಮಗಾರಿಗಳ ಮಾಹಿತಿ ನೀಡಿದರು.
ತಾಲ್ಲೂಕಿನ ಈ ಭಾಗದಲ್ಲಿ 14 ಹಳ್ಳಿಗಳು ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ನೀರಾವರಿ ಸೌಲಭ್ಯವಿದ್ದಿದ್ದಿಲ್ಲ. ಇದರಿಂದ ಈ ಭಾಗದ ಯುವಕರು ಬೆಂಗಳೂರು ಸೇರಿದಂತೆ ವಿವಿಧೆಡೆ ಅಲ್ಪ ಸಂಬಳಕ್ಕಾಗಿ ದುಡಿಯುತ್ತಿದ್ದನ್ನು ಕಣ್ಣಾರೆ ಶಾಸಕಿಯಾಗಿ ಪ್ರಥಮ ಬಾರಿ ಆಯ್ಕೆಯಾಗಿ ಬೆಂಗಳೂರಿಗೆ ಬಂದ ಸಮಯದಲ್ಲಿ 2013ರಲ್ಲಿ ಕಂಡಿದ್ದೆ. ಕಷ್ಟಪಟ್ಟು ದುಡಿಯುವ ಯುವಕರಿಬ್ಬರು ಅವರ ಅಳನ್ನು ನನಗೆ ತೋಡಿಕೊಂಡಿದ್ದರು. ಆಗ ಈ ಭಾಗವನ್ನು ನೀರಾವರಿ ಭಾಗವಾಗಿ ಪರಿವರ್ತಿಸಲು ನಿರ್ಧರಿಸಿದ್ದೆ. 2008ರಲ್ಲಿ ಈ 14 ಹಳ್ಳಿಗಳಲ್ಲಿ ಕುಡಿಯಲು ನೀರೂ ಸಹ ಇರಲಿಲ್ಲ. ಆ ಸಮಯದಲ್ಲಿ ನಾನು ಸೋತರೂ 14 ಹಳ್ಳಿಗಳಲ್ಲೂ ಸುಮಾರು 3 ತಿಂಗಳವರೆಗೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಿದ್ದೆ. ಆದರೆ ಇಂದು ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ.
ಕೃಷಿ ಇಲಾಖೆಯ ಜೆಡಿ ಶಿವಗೊಂಡಾ ಪಾಟೀಲ ಮಾತನಾಡಿ ‘ಮಳೆ ನೀರು ಇಂಗಿಸಲು ವ್ಯವಸ್ಥಿತವಾಗಿ ಗುಂಡಿಗಳನ್ನು ತೋಡಿದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಅದನ್ನು ಯಾವಾಗ ಬೇಕಾದರೂ ಉಪಯೋಗಿಸಬಹುದು. ಇದರಿಂದ ದುಡಿಯುವ ಕೈಗಳಿಗೆ ಕೆಲಸ ಸಿಕ್ಕಿದಂತಾಗುತ್ತದೆ. ಮಳೆ ನೀರು ಹರಿಹೋಗಲು ಬಿಡದೆ ಬಿದ್ದಲ್ಲೆ ಇಂಗಿಸಿದಲ್ಲಿ ಮಕ್ಕಳಿಗೆ ಮುಂದೆ ಆಸ್ತಿಯಾಗುತ್ತದೆ’ ಎಂದರು.
ತಾ.ಪಂ. ಇಓ ಮಲ್ಲಿಕಾರ್ಜುನ ಉಳಾಗಡ್ಡಿ, ಕೃಷಿ ನಿರ್ದೇಶಕ ಮಂಜುನಾಥ ಜನಮಟ್ಟಿ, ಜಿ.ಪಂ. ಸದಸ್ಯ ಸಿದ್ದು ನರಾಟೆ, ಮತ್ತಿತರರು ಮಾತನಾಡಿದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಪುರುಷೋತ್ತಮ ಪಿರಾಜೆ, ಸ್ಥಳೀಯ ಠಾಣೆಯ ಸಿಪಿಐ ಐ.ಎಸ್. ಗುರುನಾಥ, ಗ್ರಾ.ಪಂ. ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ರವಿ ಡಿ ಚನ್ನಣ್ಣನವರ್ ಸೇರಿದಂತೆ 12 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ