Kannada NewsKarnataka NewsLatestPolitics

*ಬರ ಪರಿಸ್ಥಿತಿ; ನಾಳೆ ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ತೀರ್ಮಾನ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಳೆ ಮತ್ತು ಇತರ ಬರ ಸೂಚ್ಯಂಕಗಳನ್ನು ಆಧರಿಸಿ, ಆಗಸ್ಟ್‌ 19ರ ವರೆಗೆ ಗುರುತಿಸಿರುವ 53 ತಾಲ್ಲೂಕುಗಳು ಹಾಗೂ ಸೆಪ್ಟೆಂಬರ್‌ 2ರ ವರೆಗಿನ ಬರ ಪರಿಸ್ಥಿತಿ ಕಂಡು ಬಂದಿರುವ 83 ತಾಲ್ಲೂಕುಗಳಲ್ಲಿ ಬೆಳೆಹಾನಿ ಸಮೀಕ್ಷೆಯನ್ನು ಸೆಪ್ಟೆಂಬರ್‌ 11 ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿತ್ತು. ನಾಳೆ ನಡೆಯಲಿರುವ ಸಚಿವ ಸಂಪುಟ ಉಪ ಸಮಿತಿಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ ಒಟ್ಟು 521.94 ಕೋಟಿ ರೂ. ಅನುದಾನ ಲಭ್ಯವಿದೆ. ಮುಂಗಾರು ಹಂಗಾಮಿನಲ್ಲಿ ಉಂಟಾದ ಮನೆ ಹಾನಿ ಪರಿಹಾರ ಶೇ. 100 ರಷ್ಟು ಪಾವತಿಸಲಾಗಿದ್ದು, ಒಟ್ಟು 37.40 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ನೀರಿನ ಸಮಸ್ಯೆ ಬಂದರೆ 24 ಗಂಟೆಯೊಳಗೆ ಟ್ಯಾಂಕರ್‌ ಮೂಲಕ ಪೂರೈಕೆ ಮಾಡಲು ತಹಸೀಲ್ದಾರರ ಹಂತದಲ್ಲಿಯೇ ಕ್ರಮ ಕೈಗೊಳ್ಳಬೇಕು ಎಂದರು.

ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲು ಕ್ರಿಯಾ ಯೋಜನೆ ರೂಪಿಸಿ

ಬೆಳೆ ಸಮೀಕ್ಷೆ ಸೆಪ್ಟೆಂಬರ್‌ ಒಳಗೆ ಪೂರ್ಣಗೊಳ್ಳಬೇಕು. ಇದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು. ಮತ್ತೆ ಮತ್ತೆ ಈ ಸಮೀಕ್ಷೆಗೆ ಅವಕಾಶ ನೀಡಲಾಗದು. ಈ ದತ್ತಾಂಶವನ್ನು ಪರಿಹಾರ ತಂತ್ರಾಂಶದೊಂದಿಗೆ ಸಂಯೋಜನೆಗೊಳಿಸಿ, ರೈತರಿಗೆ ನೇರವಾಗಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು

ಫ್ರೂಟ್ಸ್‌ ತಂತ್ರಾಂಶದಲ್ಲಿ ಶೇ. ನೂರರಷ್ಟು ರೈತರ ನೋಂದಣಿ ಮಾಡುವಂತೆ ಹಾಗೂ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನಿಖರವಾಗಿ ದಾಖಲಿಸುವುದು ಅತಿ ಅಗತ್ಯ. ಇನ್‌ಪುಟ್‌ ಸಬ್ಸಿಡಿ ವಿತರಣೆ ಫ್ರೂಟ್ಸ್‌ ತಂತ್ರಾಂಶವನ್ನು ಆಧರಿಸಿ ನೀಡಲಾಗುತ್ತದೆ

ಪ್ರಕೃತಿ ವಿಕೋಪ ಪರಿಹಾರದಡಿ ಬಾಕಿ ಇರುವ ಬದ್ಧತಾ ವೆಚ್ಚಗಳನ್ನು ಶೀಘ್ರವೇ ಇತ್ಯರ್ಥ ಪಡಿಸಿ, ಯಾವುದೇ ಹಿಂಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಿ ಎಂದು ಸ್ಪಷ್ಟ ಸೂಚನೆ ನೀಡಿದರು

ಮಳೆಯಿಂದ ಮನೆಗಳು ಹಾನಿಯಾಗಿದ್ದರೆ, ಎ ವರ್ಗದ ಹಾನಿಗೆ ಹಿಂದಿನ ಸರ್ಕಾರ ನೀಡುತ್ತಿದ್ದಷ್ಟೇ ಪರಿಹಾರ ವಿತರಿಸಲು ಸೂಚಿಸಲಾಗಿದೆ

ಕಳೆದ ವರ್ಷ ಅನರ್ಹರ ಹೆಸರನ್ನೂ ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈ ಬಾರಿ ಪರಿಹಾರ ವಿತರಿಸಲು ಹಾನಿಯ ಪ್ರಮಾಣವನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಇದಕ್ಕೆ ಪ್ರತ್ಯೇಕ ಆಪ್‌ ರೂಪಿಸಲಾಗಿದೆ

ಕಳೆದ ವರ್ಷ ಪ್ರವಾಹದಿಂದ ಮನೆ ಕಳೆದುಕೊಂಡವರ ಹೆಸರು ದಾಖಲಿಸಲು ಬಿಟ್ಟು ಹೋದಲ್ಲಿ ಅಂತವರಿಗೆ ವಸತಿ ಯೋಜನೆಗಳಡಿ ಮನೆ ನೀಡುವ ಕುರಿತು ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದರು

ಬೆಳೆ ಸಮೀಕ್ಷೆಯನ್ನು ಸೆಪ್ಟೆಂಬರ್‌ ಒಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು

ಜಿಲ್ಲಾಧಿಕಾರಿಗಳ ಪಿ.ಡಿ. ಖಾತೆಯಲ್ಲಿ 491 ಕೋಟಿ ರೂ. ಲಭ್ಯವಿದೆ. ಕುಡಿಯುವ ನೀರಿಗೆ ಯಾವ ಕಾರಣಕ್ಕೂ ತೊಂದರೆ ಆಗಬಾರದು. ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಕುರಿತು ಎಚ್ಚರ ವಹಿಸಬೇಕು. ನೀರು ಕಲುಷಿತಗೊಳ್ಳದಂತೆ ನೋಡಿಕೊಳ್ಳಬೇಕು

ಈಗ ಮೇವು ಲಭ್ಯವಿದ್ದರೂ, ಮುಂದಿನ ದಿನಗಳಲ್ಲಿ ಮೇವು ಕೊರತೆ ಆಗದಂತೆ ಮೇವಿನ ಬೀಜ ವಿತರಣೆ ಹಾಗೂ ರೈತರು ಬೆಳೆದ ಮೇವು ಖರೀದಿಸಿ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು

ಮೆಕ್ಕೆಜೋಳದ ಮೇವು ಹಾಗೂ ಭತ್ತದ ಹುಲ್ಲು ನಾಶ ಮಾಡದಂತೆ ಎಚ್ಚರ ವಹಿಸಲು ಸೂಚನೆ

ಅನಿವಾರ್ಯ ಸಂದರ್ಭಗಳಲ್ಲಿ ಕೊಳವೆಬಾವಿ ಕೊರೆಸುವ ಅನಿವಾರ್ಯತೆ ಉಂಟಾದಾಗ ಟಾಸ್ಕ್‌ಫೋರ್ಸ್‌ ಅಡಿ ಕೊಳವೆಬಾವಿ ಕೊರೆಸಲು ಎಸ್‌.ಡಿ.ಆರ್.ಎಫ್. ಅಡಿ ಅವಕಾಶವಿದೆ. ಆದರೆ ಇದರ ವಿದ್ಯುತ್‌ ಸಂಪರ್ಕಕ್ಕೆ ಮತ್ತು ಪಂಪ್‌ ಸೆಟ್‌ ಅಳವಡಿಸಲು ಅವಕಾಶವಿರದ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ನಗರಾಭಿವೃದ್ಧಿ ಇಲಾಖೆಯಿಂದ ಅನುದಾನ ಒದಗಿಸಲು ಸೂಚಿಸಲಾಯಿತು

ಸಾಧ್ಯವಾದಷ್ಟು ಖಾಸಗಿ ಬೋರ್‌ ವೆಲ್‌ಗಳಿಂದ ನೀರು ಪೂರೈಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು

ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕಂಟಿಂಜೆನ್ಸಿ ಪ್ಲಾನ್‌ ಸಿದ್ಧಪಡಿಸಿಟ್ಟುಕೊಳ್ಳಿ. ಕೊಳವೆಬಾವಿ ತೋಡಿಸಲು ಅಂತರ್ಜಲ ಮಟ್ಟ ಉತ್ತಮ ಇರುವ ಕಡೆಗಳಲ್ಲಿ ಅನಿವಾರ್ಯತೆ ಇದ್ದರೆ ಕೊರೆಯಲು ಸೂಚಿಸಿದರು

ಮಳೆ ಅಭಾವದಿಂದ ಕುಡಿಯುವ ನೀರಿಗೆ ಸಮಸ್ಯೆ ಇರುವ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಗಳು 13 ಜಿಲ್ಲೆಗಳ 95 ಗ್ರಾಮ ಪಂಚಾಯಿತಿ ಹಾಗೂ ಎರಡು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದು, 13 ಹಳ್ಳಿಗಳಲ್ಲಿ ಟ್ಯಾಂಕರ್‌, 143 ಖಾಸಗಿ ಬೋರ್‌ವೆಲ್‌ಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ

ಬೆಳೆವಿಮೆ ಹಾಗೂ ಇನ್‌ಪುಟ್‌ ಸಬ್ಸಿಡಿ ಎರಡೂ ಪಾವತಿಯಾಗಬೇಕು. ಇನ್‌ಪುಟ್‌ ಸಬ್ಸಿಡಿ ಪಾವತಿ ಸಂದರ್ಭದಲ್ಲಿ ಬೆಳೆವಿಮೆ ಮೊತ್ತ ಕಟಾವು ಆಗದಂತೆ ನೋಡಿಕೊಳ್ಳಲು ಸೂಚಿಸಿದರು

ನ್ಯಾಯಾಲಯ ಪ್ರಕರಣ ವಿಲೇವಾರಿ:

ತಹಸೀಲ್ದಾರ್‌ ನ್ಯಾಯಾಲಯದ ಬಾಕಿ ಪ್ರಕರಣಗಳ ಕುರಿತು ಪರಿಶೀಲಿಸಿ, ಐದು ವರ್ಷಕ್ಕೂ ಹೆಚ್ಚು ಅವಧಿಯ ಪ್ರಕರಣಗಳೂ ಬಾಕಿ ಉಳಿದಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿಗಳು ಇದನ್ನು ನಿಯಮಿತವಾಗಿ ಪರಿಶೀಲಿಸಬೇಕು. ಮೂರು ತಿಂಗಳಿಗಿಂತ ಹೆಚ್ಚು ಅವಧಿಗೆ ಉಳಿದಿರಬಾರದು ಎಂದು ಸೂಚಿಸಿದರು.

ಜಿಲ್ಲಾಧಿಕಾರಿಗಳ ಬಳಿ ಸರ್ಕಾರಿ ಜಮೀನಿನ ಪ್ರಮಾಣ ಹಾಗೂ ಒತ್ತುವರಿ ಆಗಿರುವ ಪ್ರಮಾಣದ ಮಾಹಿತಿ ಲಭ್ಯವಿರಬೇಕು. ನಿಮ್ಮ ಬಳಿ ಮಾಹಿತಿಯೇ ಲಭ್ಯವಿಲ್ಲದಿದ್ದರೆ ಸರ್ಕಾರಿ ಆಸ್ತಿ ಹೇಗೆ ರಕ್ಷಿಸುತ್ತೀರಿ ಎಂದು ಖಾರವಾಗಿ ಪ್ರಶ್ನಿಸಿ ಒತ್ತುವರಿ ತೆರವಿಗೆ ತಕ್ಷಣದಿಂದ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಒತ್ತುವರಿ ಗುರುತಿಸಲು ನೂತನ ಆಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ತಂತ್ರಜ್ಞಾನ ಬಳಕೆಯೊಂದಿಗೆ ಒತ್ತುವರಿ ಗುರುತಿಸಿ, ತೆರವುಗೊಳಿಸಲು ಕ್ರಮ ಕೈಗೊಳ್ಳಲು ಸೂಚಿಸಿದರು.

ನಕಲಿ ಭೂಮಂಜೂರಾತಿ ನೀಡಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಾತಿ ದೌರ್ಜನ್ಯ ಶಿಕ್ಷೆ ಪ್ರಮಾಣ ಕಡಿಮೆ: ಪ್ರಗತಿ ಪರಿಶೀಲನೆಗೆ ಸೂಚನೆ

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಶಿಕ್ಷೆ ಪ್ರಮಾಣ ಕೇವಲ ಶೇ3.44 ರಷ್ಟಿದೆ. ಈ ಕುರಿತು ಪ್ರತಿ ತಿಂಗಳು ಪ್ರಗತಿ ಪರಿಶೀಲನೆ ಮಾಡಬೇಕು. ಜೊತೆಗೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 15 ಅಂಶಗಳ ಕಾರ್ಯಕ್ರಮವನ್ನೂ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಯದರ್ಶಿಗಳ ಸಭೆಯಲ್ಲಿಯೂ ಪ್ರಗತಿ ಪರಿಶೀಲಿಸಬೇಕು. ಬಡವರಿಗೆ ನಿಮ್ಮ ಅನುಕಂಪ ಇರಲಿ ಎಂದು ಮುಖ್ಯಮಂತ್ರಿಗಳು ಸ್ಪಷ್ಟವಾಗಿ ಸೂಚಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button