ಕಾಫಿ ಡೇ ಮಾಲಿಕ ಸಿದ್ಧಾರ್ಥ ಬದುಕಿ ಬರಲಿಲ್ಲ
ಪ್ರಗತಿವಾಹಿನಿ ಸುದ್ದಿ, ಮಂಗಳೂರು –
ಸೋಮವಾರ ಸಂಜೆ ನೇತ್ರಾವತಿ ದಡದಿಂದ ನಾಪತ್ತೆಯಾಗಿದ್ದ ಕೆಫೆ ಕಾಫಿ ಡೇ ಮಾಲಿಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ವಿಜಿ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಸುಮಾರು 36 ಗಂಟೆಗಳ ಕಾರ್ಯಚರಣೆ ನಂತರ ಮೀನುಗಾರರು ಶವವನ್ನು ಪತ್ತೆ ಹಚ್ಚಿ ದಡಕ್ಕೆ ತಂದಿದ್ದಾರೆ.
ಸಿದ್ದಾರ್ಥ ಮೃತದೇಹವನ್ನು ಇದೀಗ ಮಂಗಳೂರಿನ ವೇನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಬೆಂಗಳೂರಿನಲ್ಲಿರುವ ಅವರ ಸಂಬಂಧಿಕರು ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಸುಮಾರು 22 ಸಾವಿರ ಕೋಟಿ ರೂ. ಆಸ್ತಿಯ ಒಡೆಯ, 50 ಸಾವಿರಕ್ಕೂ ಹೆಚ್ಚು ಜನರ ಉದ್ಯೋಗದಾತ ಸಿದ್ದಾರ್ಥ 3 ಸಾವಿರ ಕೋಟಿ ರೂ.ಗಳಷ್ಟು ಸಾಲದ ಹೊರೆಯನ್ನು ಸಹಿಸಿಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾದರೆ ಎನ್ನುವ ಪ್ರಶ್ನೆಗೆ ತನಿಖೆ ನಡೆಯುತ್ತಿದೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು, ಅವರಿಗಿದ್ದ ಒತ್ತಡ ಅಥವಾ ಸಮಸ್ಯೆಗಳೇನು ಎನ್ನವುದು ತನಿಖೆಯ ನಂತರ ಗೊತ್ತಾಗಬೇಕಿದೆ.
ಸಿದ್ದಾರ್ಥ 3-4 ದಿನದ ಹಿಂದೆ ತಮ್ಮ ಸಿಬ್ಬಂದಿಗೆ ಬರೆದಿದ್ದ ಪತ್ರ, ಸ್ನೇಹಿತರೊಂದಿಗೆ ಹಂಚಿಕೊಂಡಿರುವ ಮಾಹಿತಿಗಳು, ಅವರ ಫೊನ್ ನಲ್ಲಿ ದಾಖಲಾಗಿರುವ ಸಂಭಾಷಣೆಗಳೆಲ್ಲವನ್ನೂ ಪೊಲೀಸರು ತನಿಖೆಗೆ ಒಳಪಡಿಸಲಿದ್ದಾರೆ. ಈಗಾಗಲೆ ಪೊಲೀಸರು 12-3 ತಂಡಗಳಲ್ಲಿ ತನಿಖೆ ಆರಂಭಿಸಿದ್ದಾರೆ.
ಹೊಸ ಸಂಸ್ಕೃತಿಯ ಜನಕ
ಕನ್ನಡದ ಹುಡುಗನೊಬ್ಬ ಇಷ್ಟುದೊಡ್ಡ ಉದ್ಯಮಿಯಾಗಿ ಬೆಳೆದಿದ್ದೇ ಹೆಮ್ಮೆ ಎನ್ನುವಂತಿತ್ತು ಸಿದ್ದಾರ್ಥ ಜೀವನ ಸಾಧನೆ. ಮಲೆನಾಡಿನ ಕಾಫಿಗೆ ಹೊಸ ಗೌರವ ತಂದುಕೊಟ್ಟವರು, ಕಾಫಿ ಕುಡಿಯುವುದರಲ್ಲೂ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಿದವರು ಸಿದ್ದಾರ್ಥ.
10 ರೂ. ಕಾಫಿಯನ್ನು 150 ರೂ. ಕೊಟ್ಟು ಕುಡಿಯುವಂತೆ, ಅದು ಕೇವಲ ಕಾಫಿ ಎನಿಸದೆ ಹೊಸ ಉಲ್ಲಾಸ, ಉತ್ಸಾಹ ತುಂಬುವಂತೆ, ಮತ್ತೆ ಮತ್ತೆ ಕಾಫಿ ಡೇಯತ್ತ ಸೆಳೆಯುವಂತೆ ಮಾಡುವ ಮಾಂತ್ರಿಕ ಶಕ್ತಿಯನ್ನು ಅದರಲ್ಲಿ ತುಂಬಿದ ಸಾಧನೆ ಸಿದ್ಧಾರ್ಥ ಅವರದ್ದು.
ಭಾರತವಷ್ಟೆ ಅಲ್ಲದೆ ವಿದೇಶಗಳಲ್ಲೂ ಭಾರತದ, ಮಲೆನಾಡಿನ ಕಾಫಿಯನ್ನು, ಕಾಫಿ ಸಂಸ್ಕೃತಿಯನ್ನು ಬಿತ್ತಿದ ಹೆಮ್ಮೆ ಅವರದ್ದಾಗಿತ್ತು. ಒಟ್ಟಾರೆ ಒಬ್ಬ ಆದರ್ಶ ಉದ್ಯಮಿಯ ದುರಂತ ಅಂತ್ಯವಾಗಿದೆ.
ಇದನ್ನೂ ಓದಿ –
ಮಾಜಿ ಸಿಎಂ ಕೃಷ್ಣ ಅಳಿಯ ಸಿದ್ದಾರ್ಥ ನಾಪತ್ತೆ; ನೇತ್ರಾವತಿ ನದಿಯಲ್ಲಿ ಹುಡುಕಾಟ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ