Latest

ಊಟ ಖಾಲಿ ಎಂದಿದ್ದಕ್ಕೆ ಪರಪ್ಪನ ಅಗ್ರಹಾರ ಜೈಲಿನ ವಾರ್ಡರ್‌ನಿಂದ ಹಲ್ಲೆ: ಡಾಬಾ ಮಾಲಿಕ ಸಾವು

ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನ ಹೆಡ್‌ ವಾರ್ಡರ್‌ ನಡೆಸಿದ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಡಾಬಾ ಮಾಲೀಕರೊಬ್ಬರು ಚಿಕಿತ್ಸೆ ಫಲಿಸದೇ ಮೃತಪಟ್ಟಿರುವ ಘಟನೆ ನಡೆದಿದೆ.

ಗದ್ದನಕೇರಿ ಕ್ರಾಸ್‌ ಬಳಿಯ ಮೃತರನ್ನು ಮೆಹಬೂಬಸಾಬ್‌ ಪಟ್ಟೆವಾಲೆ (58) ಎಂದು ಗುರುತಿಸಲಾಗಿದೆ.

ರಜೆ ಮೇಲೆ ಊರಿಗೆ ಬಂದಿದ್ದ ಜೈಲು ಹೆಡ್‌ ವಾರ್ಡರ್‌ ಅಡಿವೆಪ್ಪ ಅವರು ಸೆಪ್ಟೆಂಬರ್‌ 17ರ ರಾತ್ರಿ ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್‌ ಬಳಿಯ ಮೆಹಬೂಬಸಾಬ್‌ ಅವರ ಡಾಬಾಗೆ ತೆರಳಿ ಊಟ ಕೇಳಿದ್ದರು. ಈ ವೇಳೆ ಊಟ ಖಾಲಿಯಾಗಿದೆ ಎಂದು ಡಾಬಾ ಮಾಲಿಕ ಮೆಹಬೂಬಸಾಬ್‌ ತಿಳಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಅಡಿವೆಪ್ಪ ಅವರು ಡಾಬಾ ಮಾಲೀಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆ ವೇಳೆ ಮೆಹಬೂಬಸಾಬ್‌ ನೆಲಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು. ಅವರ ತಲೆಗೆ ಗಂಭೀರ ಪೆಟ್ಟು ಬಿದ್ದು ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಂದು ಮೆಹಬೂಬಸಾಬ್‌ ಮೃತಪಟ್ಟಿದ್ದಾರೆ.

ಗಲಾಟೆ ವೇಳೆ ಹೆಡ್‌ ವಾರ್ಡರ್‌ ಅಡಿವೆಪ್ಪ ಅವರ ತಲೆಗೂ ಗಾಯಗಳಾಗಿದ್ದವು ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಲಾದಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಅಡಿವೆಪ್ಪ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

*ಭೀಕರ ಅಪಘಾತ: ಸಚಿವರ ಪುತ್ರಿ ಸೇರಿ ನಾಲ್ವರು ದುರ್ಮರಣ* – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button