*ಕೈತಪ್ಪಿದ ಸಚಿವ ಸ್ಥಾನ: ರಾಜೀನಾಮೆಗೆ ಮುಂದಾದ ಶಾಸಕ ಯಶವಂತರಾಯಗೌಡ, ಬೇಳೂರು ಗೋಪಾಲಕೃಷ್ಣ*

ಪ್ರಗತಿವಾಹಿನಿ ಸುದ್ದಿ: ಸಚಿವ ಸಂಪುಟ ವಿಸ್ತರಣೆ ವೇಳೆ ಹಲವು ಸಚಿವಾಕಾಂಕ್ಷಿಗಳಿಗೆ, ಹಿರಿಯ ಶಾಸಕರಿಗೆ ಮಂತ್ರಿ ಸ್ಥಾನ ಕೈತಪ್ಪಿದ್ದು, ಇದರಿಂದ ಬೇಸರಗೊಂಡಿರುವ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಹಾಗೂ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಇಂಡಿ ಶಾಸಕ ಯಶವಂತರಾಯಗೌಡ, ಇನ್ನೆ ಕರೆ ಮಾಡಿ ಸಚಿವರ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆ. ಪ್ರಮಾಣವಚನಕ್ಕೆ ರೆಡಿ ಇರಿ ಎಂದು ಹೇಳಿ ಇಂದು ಹೀಗೆ ಅನ್ಯಾಯ ಮಾಡಿದರೆ ಏನು ಹೇಳುವುದು? ಇದರಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ. ಈ ರಾಜಕೀಯ ವ್ಯವಸ್ಥೆಯೇ ಬೇಡವೆನಸಿದೆ. ನಿಷ್ಠಾವಂತರು, ಪ್ರಾಮಾಣಿಕರಿಗೆ ಇದು ಕಾಲವಲ್ಲ. ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಹಾಗಾಗಿ ರಾಜೀನಾಮೆ ಪತ್ರ ಸಿದ್ಧವಾಗಿದೆ. ಇಂದೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಮತ್ತೋರ್ವ ಶಾಸಕ ಬೇಳೂರು ಗೋಪಾಲ ಕೃಷ್ಣ ಕೂಡ ತಾನು ಶಾಸಕ ಸ್ಥಾನ ಹಾಅಗೂ ನಿಗಮ ಮಂಡಳಿ ಎರಡಕ್ಕೂ ರಾಜೀನಾಮೆ ಕೊಡುತ್ತೇನೆ ಎಂದರು. ಸಂಪುಟ ವಿಸ್ತರಣೆಯಲ್ಲಿಯೂ ಸಚಿವ ಸ್ಥಾನ ಸಿಕ್ಕಿಲ್ಲ. ಹಿರಿತನ, ಅನುಭವವಿರುವವರು ಮೂರು ಬಾರಿ ಶಾಸಕನಾಗಿದ್ದರೂ ಸಚಿವ ಸ್ಥಾನ ನೀಡಿಲ್ಲ. ಅನ್ಯಾಯ ಮಾಡಲಾಗಿದೆ ಎಂದ ಮೇಲೆ ಬಹಳ ನೋವಾಗಿದೆ. ಬೆಂಬಲಿಗರು ಕಣ್ಣೀರಿಡುತ್ತಿದ್ದಾರೆ. ನನಗೂ ತುಂಬಾ ಬೇಸರವಾಗಿದೆ. ಹಾಗಾಗಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ತಿಳಿಸಿದರು.
ಹೊಸಬರಿಗೆ ಅವಕಾಶ ಕೊಡುತ್ತೇವೆ ಎಂದರು. ಎಲ್ಲಿ ಹೊಸಬರಿಗೆ ಕೊಟ್ಟಿದ್ದಾರೆ? ಒಂದಿಬ್ಬರು ಬಿಟ್ಟರೆ ಉಳಿದ ಎಲ್ಲರೂ ಮಂತ್ರಿಯಾದವರುಗೇ ಮತ್ತೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ. ಬೇರೆಯವರಿಗೆ ಅವಕಾಶವೇ ಇಲ್ಲ. ಇದು ಹೀಗೆ ಮುಂದುವರೆದಿರೆ ಸಹಿಸಲು ಸಾಧ್ಯವಿಲ್ಲ. ಯಾವುದೇ ಬೆಳವಣಿಗೆಯೂ ಆಗುವುದಿಲ್ಲ. ಇದರಿಂದ ಒಅಕ್ಷಕ್ಕೆ ಹೊಡೆತ ಬೀಳುತ್ತದೆ. ನಾಳೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಿ ಎರಡೂ ಸ್ಥಾನಗಳಿಗೂ ರಾಜೀನಾಮೆ ಕೊಡುತ್ತೇನೆ. ಮುಂದಿನ ನಡೆ ಬಗ್ಗೆ ಬೆಂಬಲಿಗರೊಂದುಗೆ ಚರ್ಚಿಸುತ್ತೇನೆ ಎಂದರು.




