ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಅಕ್ಷರಶಃ ತೋಳಬಂತು ತೋಳ ಕಥೆಯಾಗಿ ಪರಿಣಮಿಸಿದೆ.
ಸ್ವತಃ ಮುಖ್ಯಮಂತ್ರಿಗಳ ಆದೇಶದ ಹೊರತಾಗಿಯೂ ವರ್ಗಾವಣೆ ಪ್ರಕ್ರಿಯೆಗೆ ಹಿಡಿದ ಗ್ರಹಣ ಬಿಡುಗಡೆಯಾಗಿಲ್ಲ. ವಾರದೊಳಗೆ ವರ್ಗಾವಣೆ ಪ್ರಕ್ರಿಯೆ ಆರಂಭಿಸುವಂತೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿ 15 ದಿನಗಳ ಮೇಲಾಯಿತು. ಮುಖ್ಯಮಂತ್ರಿ ಆದೇಶಿಸಿದ ದಿನವೇ ಶಿಕ್ಷಣ ಸಚಿವ ಸುರೇಶ ಕುಮಾರ ಹೇಳಿಕೆ ನೀಡಿ, ನಾಳೆಯೇ ವರ್ಗಾವಣೆ ವೇಳಾಪಟ್ಟಿ ಬಿಡುಗಡೆಯಾಗಲಿದೆ, ನವೆಂಬರ್ 5ರಂದು ವರ್ಗಾವಣೆ ಶುರುವಾಗಲಿದೆ ಎಂದಿದ್ದರು.
ಆದರೆ ಯಾವುದೂ ಆಗಲಿಲ್ಲ. ಈಗ ಮತ್ತೆ ಚುನಾವಣೆ ನೀತಿ ಸಂಹಿತೆ ನೆಪ ಶುರುವಾಗಿದೆ. ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಮುಕ್ತಾಯವಾದ ನಂತರ ವರ್ಗಾವಣೆ ಪ್ರಕ್ರಿಯೆ ಆರಂಭಿಸುವುದಾಗಿ ಸುರೇಶ ಕುಮಾರ ಹೇಳಿಕೆ ನೀಡಿದ್ದಾರೆ. ವಿಶೇಷವೆಂದರೆ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಚುನಾವಣೆ ಆಯೋಗ ನಿರ್ಬಂದವನ್ನೇ ಹೇರಿಲ್ಲ.
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಹೆಚ್ಚುಕಡಿಮೆ 3 ವರ್ಷದಿಂದಲೂ ಅಯೋಮಯವಾಗಿದೆ. ಶಿಕ್ಷಕರು ಚಾತಕ ಪಕ್ಷಿಯಂತೆ ಕಾಯುವುದೇ ಆಗಿದೆ. ಹಳ್ಳಿ ಗಾಡಿನ ಶಿಕ್ಷಕರ ಪರಿಸ್ಥಿತಿಯಂತೂ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ನಗರ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಶಿಕ್ಷಕರು ಆರಾಮವಾಗಿದ್ದು, ಇಲಾಖೆಯ ಮೇಲೆ ಲಾಬಿ ಮಾಡುತ್ತಿದ್ದಾರೆ. ಬಹುತೇಕ ಶಿಕ್ಷಕರ ಸಂಘಗಗಳೂ ನಗರ ಪ್ರದೇಶದ ಶಿಕ್ಷಕರ ಪರವಾಗಿವೆ. ಲಾಬಿ ಮಾಡಲು ಗೊತ್ತಿಲ್ಲದ ಸಿ ವಲಯದ ಶಿಕ್ಷಕರು ಪಡಬಾರದ ಪಾಡು ಪಡುತ್ತಿದ್ದಾರೆ.
ಈಗ ಪುನಃ ಕಳೆದ ವರ್ಷ ಕಡ್ಡಾಯ ವರ್ಗಾವಣೆಗೊಳಗಾಗಿದ್ದ ನಗರ ಪ್ರದೇಶದಲ್ಲಿ ಹತ್ತಾರು ವರ್ಷದಿಂದ ಬೀಡು ಬಿಟ್ಟಿರುವ ಶಿಕ್ಷಕರು ಈ ವರ್ಷದ ವರ್ಗಾವಣೆಯಲ್ಲಿ ತಮ್ಮ ಸ್ಥಳಗಳಿಗೆ ವಾಪಸ್ಸಾಗಲು ಮೊದಲ ಆದ್ಯತೆ ಪಡೆಯಲಿದ್ದಾರೆ. ಸುರೇಶ ಕುಮಾರ ಅವರಂತಹ ಸಜ್ಜನ ಶಿಕ್ಷಣ ಸಚಿವರೂ ಇಂತಹ ನಿರ್ಧಾರ ತೆಗೆದುಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.
ಒಟ್ಟಾರೆ, ಈ ವರ್ಷ ಖಡಕ್ ನಿರ್ಧಾರಗಳಿಲ್ಲದೆ ಶಿಕ್ಷಣ ಇಲಾಖೆ ಸೊರಗಿ ಹೋಗಿದೆ. ಮಕ್ಕಳು, ಪಾಲಕರು, ಶಿಕ್ಷಕರು ಸೇರಿದಂತೆ ಎಲ್ಲರೂ ಸಂಕಷ್ಟಕ್ಕೊಳಗಾಗಿದ್ದಾರೆ. ಯಾರೂ ನೆಮ್ಮದಿಯಿಂದಿರದಂತಾಗಿದೆ. ಎಲ್ಲರೂ ಅನಿಶ್ಚಿತತೆಯಲ್ಲೇ ಇರಬೇಕಾದ ಪರಿಸ್ಥಿತಿ ಉಂಟಾಗಿದೆ. ಕೊರೋನಾ ಜೊತೆಗೆ ಸರಕಾರದ ಅಸ್ಪಷ್ಟ ನಿರ್ಧಾರಗಳೂ ಇದಕ್ಕೆ ಕಾರಣವಾಗಿದೆ.
ಇನ್ನು 15 ದಿನದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ
ಶಿಕ್ಷಕರ ವರ್ಗಾವಣೆ ತಿದ್ದುಪಡಿ ವಿಧೇಯಕ: ಕೊನೆಗೂ ಲಾಬಿಗೆ ಮಣಿದ ಸರಕಾರ!
ಶಿಕ್ಷಕರ ವರ್ಗಾವಣೆ: ಬಸವರಾಜ ಹೊರಟ್ಟಿಯ 10 ಸಲಹೆಗಳು
ಶಿಕ್ಷಕರ ವರ್ಗಾವಣೆಯ ನಿಯಮಗಳನ್ನು ಸರಿಪಡಿಸಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ