Kannada NewsKarnataka NewsLatest

ಸೈಬರ್ ಕ್ರೈಮ್ ವಿಭಾಗವನ್ನು ಮತ್ತಷ್ಟು  ಗಟ್ಟಿಗೊಳಿಸಲಾಗುತ್ತಿದೆ -ಅರಗ ಜ್ಞಾನೇಂದ್ರ

ಶಾಂತಿ-ಸುವ್ಯವಸ್ಥೆ ರಕ್ಷಣೆಗೆ ಆದ್ಯತೆ ನೀಡಬೇಕು: ಗೃಹ ಸಚಿವ ಆರಗ ಜ್ಞಾನೇಂದ್ರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾಗರಿಕರ ಪ್ರಾಣ, ಆಸ್ತಿ ರಕ್ಷಣೆ ಹೊಣೆಯನ್ನು ಹೊತ್ತಿರುವ ಪೋಲಿಸರು, ಅತ್ಯಾಧುನಿಕ ಉಪಕರಣಗಳನ್ನು ಬಳಸಿ ದೇಶದ ಶಾಂತಿ ಸುವ್ಯವಸ್ಥೆ ಹದಗೆಡಿಸುವ ದೇಶ ದ್ರೋಹಿಗಳ ವಿರುದ್ಧ ಹೋರಾಡುವ ಕೆಲಸವನ್ನು ಮಾಡಬೇಕಿದೆ ಎಂದು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೇಳಿದರು.
ಬೆಳಗಾವಿ ನಗರದ ಕಂಗ್ರಾಳಿಯ ಕೆ.ಎಸ್.ಆರ್.ಪಿ ತರಬೇತಿ ಶಾಲೆಯಲ್ಲಿ ಬುಧವಾರ (ಸೆ.8) ರಂದು ನಡೆದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ತರಬೇತಿ ಶಾಲೆ 1 ನೇ ತಂಡದ ಸಶಸ್ತ್ರ ಮೀಸಲು ಪೋಲಿಸ್ ಕಾನ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ  ಪಥಸಂಚಲನ ಹಾಗೂ “ಸ್ವಯಂ ರಕ್ಷಣಾ ಕೌಶಲ್ಯ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗಡಿ ಭಾಗದಲ್ಲಿ ಸೈನಿಕರು ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶಕ್ಕಾಗಿ ಹೋರಾಡುತ್ತಿದ್ದಾರೆ. ಪೋಲಿಸರು ದೇಶದ ಒಳಗಡೆ ಇರುವ ಭ್ರಷ್ಟಾಚಾರಿಗಳು, ರಾಜ್ಯ ದ್ರೋಹಿಗಳು ಹಾಗೂ ಕಾನೂನು ಬಾಹಿರವಾಗಿ ನಡೆದುಕೊಳ್ಳುವವರ ವಿರುದ್ಧವಾಗಿ ಹೋರಾಡುತ್ತಿದ್ದಾರೆ. ಗಡಿಯಲ್ಲಿ ಶತ್ರುಗಳು ನೇರವಾಗಿ ಕಣ್ಣಿಗೆ ಕಾಣುತ್ತಾರೆ. ಆದರೆ, ದೇಶದ ಒಳಗಿನ ಅಪರಾಧಿಗಳನ್ನು ಹುಡುಕಿ ತೆಗೆದು ಶಿಕ್ಷೆ ನೀಡುವ ಕೆಲಸವನ್ನು ಪೊಲೀಸ್ ಇಲಾಖೆಯು ಮಾಡುತ್ತಿದೆ. ಆ ನಿಟ್ಟಿನಲ್ಲಿ ಸೂಕ್ತ ತರಬೇತಿ ಪಡೆಯುವುದು ಅತೀ ಅವಶ್ಯಕ ಎಂದು ಹೇಳಿದರು.
ಬಾಂಬ್ ಸ್ಫೋಟ್, ಸೈಬರ್ ಕ್ರೈಂ, ಭ್ರಷ್ಟಾಚಾರ ಸೇರಿದಂತೆ ಇನ್ನೂ ಹಲವಾರು ಕಾನೂನು ಬಾಹಿರ ಕುತಂತ್ರದಿಂದ ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯು ಹಗಲಿರುಳೆನ್ನದೆ ಶ್ರಮಿಸುತ್ತಿದ್ದು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
 ಪೊಲೀಸ್ ಇಲಾಖೆಯಲ್ಲಿ ಕಳೆದ 10 ವರ್ಷಕ್ಕೆ ಹೋಲಿಸಿದರೆ ಮಹತ್ತರ ಬದಲಾವಣೆಗಳನ್ನು ಮಾಡಲಾಗಿದ್ದು, ದೊಡ್ಡ ಐ.ಟಿ.ಬಿ.ಟಿ ಕಂಪನಿಗಳಲ್ಲಿ ನೀಡುವಂತಹ ವೇತನ ಸೌಲಭ್ಯಗಳನ್ನು ಪೋಲಿಸರಿಗೂ ಸಹ ನೀಡಲಾಗುತ್ತಿದೆ.
40 ಪ್ರತಿಶತದಷ್ಟು ಕುಟುಂಬಗಳಿಗೆ 2 ಕೋಣೆಗಳುಳ್ಳ ವಸತಿ ವ್ಯವಸ್ಥೆ ಹಾಗೂ ಪೋಲಿಸ್ ಕಾನ್ಸ್ ಟೇಬಲ್ ಗಳ ಕುಟುಂಬಕ್ಕೆ ಸಹಾಯಕವಾಗುವ ಯೋಜನೆಗಳನ್ನು ಪೊಲೀಸರ ಮಕ್ಕಳಿಗೆ ಶೈಕ್ಷಣಿಕ ಆರೋಗ್ಯ ಮತ್ತು ವಿವಿಧ ಬಗೆಯ ಕೌಶ್ಯಾಭಿವೃದ್ಧಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು  ಆರಗ ಜ್ಞಾನೇಂದ್ರ ತಿಳಿಸಿದರು.
ತರಬೇತಿ ಪಡೆಯುತ್ತಿದ್ದ 171 ಪ್ರಶಿಕ್ಷಣಾರ್ಥಿಗಳಲ್ಲಿ 10 ಎಸ್ಸೆಸ್ಸೆಲ್ಸಿ, 34 ಪಿ.ಯು.ಸಿ, 85 ಪದವಿ , 18 ಸ್ನಾತಕೋತ್ತರ, 4 ಡಿಪ್ಲೊಮಾ , 17 ಐ.ಟಿ.ಐ ತರಬೇತಿ ‌ಪಡೆದವರಾಗಿದ್ದಾರೆ. ಇತ್ತೀಚೆಗೆ ಉನ್ನತ ಶಿಕ್ಷಣ ಪಡೆದವರು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಇಲಾಖೆಗೆ ಸೇರುತ್ತಿರುವುದು  ನಿಜಕ್ಕೂ ಖುಷಿಯ ವಿಷಯ ಎಂದು ಅವರು ಹೇಳಿದರು
ಆಧುನಿಕ ಉಪಕರಣಗಳನ್ನು ಬಳಸಿ ಹಲವಾರು ಹೊಸ ತಂತ್ರಜ್ಞಾನದ ಸುವ್ಯವಸ್ಥಿತ ಸಮಾಜದ ಶಾಂತಿ ಕದಡುವ ಕೆಲಸ ಹಾಗೂ ಇತರರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಕೆಲಸವನ್ನು ಇಂದಿನ ದಿನಗಳಲ್ಲಿ ಹಲವು ವಂಚಕರು ಮಾಡುತ್ತಿದ್ದು, ಅವೆಲ್ಲವನ್ನೂ ಸಮರ್ಥವಾಗಿ ಎದುರಿಸುವ ಸಲುವಾಗಿ ಎಫ್ ಎಸ್ ಎಲ್ ನಂತಹ ಲ್ಯಾಬ್ ಗಳ ನಿರ್ಮಾಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಪೊಲೀಸ್ ಇಲಾಖೆ ಭರಿಸುತ್ತಿದೆ. ಸೈಬರ್ ಕ್ರೈಮ್ ವಿಭಾಗವನ್ನು ಮತ್ತಷ್ಟು  ಗಟ್ಟಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಉತ್ತಮ ತಂತ್ರಜ್ಞಾನದ ಬಳಕೆ ಹಾಗೂ ಆಧುನಿಕತೆಯ ಸ್ಪರ್ಶವನ್ನು ನೀಡುವ ಕಾರ್ಯವನ್ನು ಹಾಗೂ ಎಲ್ಲಾ ರೀತಿಯ ಸೌಲಭ್ಯವನ್ನು  ಪೊಲೀಸ್ ಇಲಾಖೆಗೆ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳು ಇನ್ನು ಮುಂದೆ ವೃತ್ತಿ ಬದುಕಿಗೆ ಕಾಲಿಡುತ್ತಿದ್ದು, ತನಗೆ ಭೋದಿಸಿದ ಪ್ರತಿಜ್ಞಾ ವಿಧಿ ಕೇವಲ ಈ ಸಮಯಕ್ಕೆ ಸೀಮಿತವಾಗದೆ ನಿಮ್ಮ ನಿವೃತ್ತಿಯ ಸಮಯದ ವರೆಗೂ ಅದನ್ನು ಪಾಲಿಸುವ ಕೆಲಸವನ್ನು ನೀವು ಮಾಡಬೇಕು. ಅದಕ್ಕೆ ಬದ್ಧವಾಗಿ ಕಾರ್ಯವನ್ನು ಮಾಡಬೇಕು ಎಂದು ಸಚಿವ ಜ್ಞಾನೇಂದ್ರ ಅವರು ಕರೆ ನೀಡಿದರು.
ನಿರ್ಗಮನ ಪಥಸಂಚಲನದಲ್ಲಿ 8ನೇ ಬೆಟಾಲಿಯನ್ ಪಡೆ ಭಾಗವಹಿಸಿದ್ದು, ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ 8 ತಿಂಗಳ ಕಾಲ ಪ್ರಶಿಕ್ಷಣಾರ್ಥಿಗಳಿಗೆ ನೀಡಲಾದ ತರಬೇತಿಯ ಕುರಿತು  ವರದಿ ವಾಚನ ವನ್ನು ಕೆ.ಎಸ್.ಆರ್.ಪಿ ತರಬೇತಿ ಶಾಲೆಯ ಪ್ರಾಂಶುಪಾಲರಾದ ರಮೇಶ ಎ ಬೋರಗಾವೆ ಪ್ರಸ್ತುತ ಪಡಿಸಿದರು.
ವಿವಿಧ ಬಹುಮಾನ ವಿತರಣೆ:
8 ತಿಂಗಳ ತರಬೇತಿ ಸಂದರ್ಭದಲ್ಲಿ  ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ  ಪ್ರಶಿಕ್ಷಣಾರ್ಥಿಗಳು ಬಹುಮಾನ ಪಡೆದಿದ್ದು, ಗೃಹ ಸಚಿವರಾದ ಅರಗ ಜ್ಞಾನೇಂದ್ರ ಅವರು ಬಹುಮಾನ ವಿತರಿಸಿದರು.
ಹೊರಾಂಗಣ ಸ್ಪರ್ಧೆಯಲ್ಲಿ ಶರತ್.ಎಸ್.ವಿ ಪ್ರಥಮ ಮತ್ತು ನಿಂಗಪ್ಪಾ ಮನಗಾವಿ ದ್ವಿತೀಯ ಸ್ಥಾನ ಪಡೆದಿದ್ದಾರೆ, ಅದೇ ರೀತಿ ಒಳಾಂಗಣದಲ್ಲಿ ಶ್ರೀಧರ್ ಕೋರ್ಟಿ ಪ್ರಥಮ ಸ್ಥಾನ ಪಡೆದಿದ್ದು, ವಿಶಾಲ ಕತ್ತಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗುಂಡು ಹಾರಿಸುವ ಸ್ಪರ್ಧೆಯಲ್ಲಿ ಮತ್ತು ಸರ್ವಾಂಗೀಣ ಶ್ರೇಷ್ಠ ಧರ್ಮೇಶ ಪ್ರಥಮ ಸ್ಥಾನ  ಪಡೆದಿದ್ದಾರೆ. ಚಂದನ ಎಮ್.ಸಿ ಗುಂಡು ಹಾರಿಸುವ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ರಾವೂತ್ತಪ್ಪಾ ಕೋಲ್ಕಕರ ಟ್ರೋಲಿಂಗ್ ಟ್ರೋಫಿಯಲ್ಲಿ ಪ್ರಥಮ ಸ್ಥಾನ ಹಾಗೂ ಸರ್ವೋತ್ತಮ ಶ್ರೇಷ್ಠ 2 ನೇ ಸ್ಥಾನ ಪಡೆದಿದ್ದು,  ಆಲ್ ರೌಂಡರ್ ಬೆಸ್ಟ್ ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ 8 ತಿಂಗಳ ತರಬೇತಿಯ ಅಭಿಪ್ರಾಯದ ಕುರಿತು ವಾರ್ತಾ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು.
ಕೆ.ಎಸ್.ಆರ್.ಪಿ. ಯ ಎಡಿಜಿಪಿ, ಅಲೋಕ ಕುಮಾರ್ ಅವರು ಸ್ವಾಗತಿಸಿದರು.
ಸ್ವಯಂ ರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ :
ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯ ತಡೆಯಲು ಹಾಗೂ ಮಹಿಳಾ ಸಬಲೀಕರಣದ ಉದ್ದೇಶದಿಂದ ಸ್ವಯಂ ರಕ್ಷಣಾ ಕೌಶಲ್ಯ” ಎಂಬ ಕಾರ್ಯಕ್ರಮದಡಿ ಬೆಳಗಾವಿ ಕರಾಟೆ ಕ್ಲಬ್ ವತಿಯಿಂದ ಸುಮಾರು 500 ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಕರಾಟೆ ಜೋಡೋ ತರಬೇತಿ ಕಾರ್ಯಕ್ರಮವನ್ನು  ಗೃಹ ಸಚಿವರಾದ ಅರಗ ಜ್ಞಾನೇಂದ್ರ ಉದ್ಘಾಟಿಸಿದರು.
ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯ ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಹಲವಾರು ಸ್ವಯಂ ರಕ್ಷಣಾ ತರಬೇತಿಯ ಅಣಕು ಪ್ರದರ್ಶನವನ್ನು ಮತ್ತು ವಿವಿಧ ಬಗೆಯ ಸ್ವಯಂ ರಕ್ಷಣಾ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಮಹಿಳಾ ಪೊಲೀಸ್ ರಿಂದ ಸ್ವಯಂ ರಕ್ಷಣಾ ಕಲೆಯ ಪ್ರದರ್ಶನ, ಪೊಲೀಸ್ ಸಿಬ್ಬಂದಿ ಮಕ್ಕಳಿಂದ ಮತ್ತು ಮಹಿಳಾ ಪೊಲೀಸರಿಂದ ಸಾಹಸ ಪ್ರದರ್ಶನ ನಡೆಯಿತು.
ಶಾಸಕ ಅನಿಲ್ ಬೆನಕೆ, ಬೆಳಗಾವಿ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಉತ್ತರ ವಲಯ ಐಜಿಪಿ ಸತೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕಂಗ್ರಾಳಿ ಕೆ ಎಸ್ ಆರ್ ಪಿ ತರಬೇತಿ ಶಾಲೆಯ ಪ್ರಾಂಶುಪಾಲ ರಮೇಶ್ ಬೋರಗಾವೆ, ಕೆ.ಎಸ್.ಆರ್.ಪಿ. 2 ನೇ ಪಡೆಯ ಕಮಾಂಡೆಂಟ್ ಹಂಜಾ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಮೀಸಲು ಪೊಲೀಸ್ ಪಡೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button