Kannada NewsKarnataka News

ಪದವಿಗಳಲ್ಲಿ ಮೂರು ವರ್ಷ ಕನ್ನಡ ಪಠ್ಯ ಕಡ್ಡಾಯ

ಪ್ರೊ. ಬರಗೂರು ರಾಮಚಂದ್ರಪ್ಪ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕನ್ನಡ ಸಾಹಿತ್ಯದ ಮಹತ್ವದ ಕುರಿತಾದ ಚರ್ಚೆ ಈಗ ಅತ್ಯಂತ ತುರ್ತಾಗಿದೆ. ಬಹುತ್ವವೇ ಭಾರತದ ಮೂಲ ಅಡಿಪಾಯ. ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನ ಮಾಡುವಾಗ ಪ್ರಾದೇಶಿಕ ಭಾಷೆಗೆ ಒತ್ತು ಕೊಡಬೇಕು. ಭಾಷೆಯ ವಿಷಯದಲ್ಲಿ ಹೊಸ ಶಿಕ್ಷಣ ನೀತಿಯು ಗೊಂದಲಮಯವಾಗಿದೆ. ಅದರಲ್ಲಿ ಒಂದು ಕಡೆ ಶಾಸ್ತ್ರೀಯ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳಿಗೆ ಪ್ರಾಶಸ್ತ್ಯ ಕೊಡಬೇಕು ಎಂದು ಹೇಳಿದರೆ ಇನ್ನೊಂದು ಕಡೆ ಈಗಾಗಲೇ ಪದವಿ ತರಗತಿಗಳಲ್ಲಿ ಮೂರುವರ್ಷಗಳಿಗಿದ್ದ ಭಾಷಾ ತರಗತಿಗಳನ್ನು ಒಂದು ವರ್ಷಕ್ಕೆ ಕಡಿತಗೊಳಿಸಿದೆ. ಇದು ಹೊಸ ಶಿಕ್ಷಣ ನೀತಿಯ ದ್ವಂದ್ವ ನಿಲುವಾಗಿದೆಂದು ಪ್ರೊ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಪದವಿ ವ್ಯಾಸಂಗದಲ್ಲಿ ಸಾಹಿತ್ಯದ ಮಹತ್ವ ಎಂಬ ಪರಿಕಲ್ಪನೆಯಡಿಯಲ್ಲಿ ಏಳು ದಿನಗಳ ಆನ್‌ಲೈನ್ ಎಫ್‌ಡಿಪಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮದ ಆಶಯ ನುಡಿಗಳನ್ನಾಡುತ್ತಾ, ಮನುಷ್ಯನ ಅಂತರ್ ದೃಷ್ಟಿಯನ್ನು ತೆರೆಯುವ ಸಾಮರ್ಥ್ಯ ಸಾಹಿತ್ಯಕ್ಕಿದೆ. ಸಾಹಿತ್ಯದ ಓದು ಸಾಮಾನ್ಯನನ್ನು ಒಂದು ವಿಭಿನ್ನ ದೃಷ್ಟಿಕೋನದ ಕಡೆಗೆ ಒಯ್ಯುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಸಾಹಿತ್ಯದ ಜ್ಞಾನವಿದ್ದರೆ, ಅವರು ಸಮಾಜವನ್ನು ನೋಡುವ ದೃಷ್ಟಿಕೋನವೇ ಬೇರೆಯಾಗಿರುತ್ತಿತ್ತು. ದಾಸ ಸಾಹಿತ್ಯದಲ್ಲಿ ದಾಸರು ನಾವು ದೇವರಿಗೆ ದಾಸರು; ಅರಸರಿಗೆ ದಾಸರಲ್ಲ ಎಂಬುದನ್ನು ತಮ್ಮ ಸಾಹಿತ್ಯದ ಮೂಲಕ ಜಗತ್ತಿಗೆ ಅರುಹಿದರು. ಅದನ್ನು ನಾವು ಅರ್ಥಮಾಡಿಕೊಂಡು ಪ್ರಭುತ್ವದ ದಾಸರಾಗುವುದನ್ನು ಇಂದು ಬಿಡಬೇಕು. ಸಾಹಿತ್ಯ ಸಮುದಾಯದ ಪ್ರತಿಬಿಂಬ, ಆ ಸಾಹಿತ್ಯವನ್ನು ಓದುವುದರಿಂದ ಸುಂದರ ಸಮಾಜವನ್ನು ಸೃಷ್ಟಿಸಲು ಸಾಧ್ಯ. ಚಲನಶೀಲ, ಚಿಂತನಶೀಲ ಪಠ್ಯಗಳಿಂದ ಪ್ರಬುದ್ಧ ಸಮಾಜ ನಿರ್ಮಾಣವಾಗಲಿದೆ ಎಂದರು.

ಕುಲಪತಿಗಳಾದ ಡಾ. ಎಂ. ರಾಮಚಂದ್ರ ಗೌಡ ಅವರು ವೆಬಿನಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಹಳಗನ್ನಡ-ನಡುಗನ್ನಡ-ಹೊಸಗನ್ನಡ ಸಾಹಿತ್ಯಗಳ ಬೋಧನಾ ಕ್ರಮವು ಇನ್ನಷ್ಟು ಸುಧಾರಣೆಯಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಸಿದ್ಧಪಡಿಸಲಾಗಿದೆ ಎಂದರು.

ಪದವಿ ತರಗತಿಗಳಲ್ಲಿ ಬೋಧಿಸುವ ಅಧ್ಯಾಪಕರುಗಳ ಬೋಧನೆ ಇನ್ನಷ್ಟು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ತಲುಪಲಿ ಎನ್ನುವ ಮಹದುದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಇದರಿಂದಾಗಿ ಅನೇಕ ಅಧ್ಯಾಪಕರುಗಳಲ್ಲಿ ಹೊಸ ಚೈತನ್ಯ -ಚಿಂತನಾಕ್ರಮ ಸೃಷ್ಟಿಯಾಗಲಿದೆ. ಸಂಪತ್ತೇ ಪ್ರಧಾನವೆಂದು ತಿಳಿದಿರುವ ಸಮಕಾಲೀನ ಸಂದರ್ಭದಲ್ಲಿ ಸಾಹಿತ್ಯ ಪಠ್ಯಗಳ ಮೂಲಕ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕಾರ್ಯ ಪ್ರಾಧ್ಯಾಪಕರ ಮೂಲಕ ನಡೆಯಬೇಕೆಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ. ಜಯಪ್ಪ ಅವರು ಸಾಹಿತ್ಯ ಮನುಷ್ಯನ ಬದುಕಿನ ಅಂಗ, ಸಾಹಿತ್ಯ ಮನುಷ್ಯನನ್ನು ವಿಕಸಿಸುತ್ತದೆ ಮತ್ತು ಅರಳಿಸುತ್ತದೆ. ನಾವು ಆರ್ಥಿಕವಾಗಿ, ವೈಜ್ಞಾನಿಕವಾಗಿ, ಔದ್ಯಮಿಕವಾಗಿ ಎಷ್ಟೇ ಪ್ರಗತಿ ಹೊಂದಿರಬಹುದು ಇವೆಲ್ಲ ಹೊಟ್ಟೆ ತುಂಬಿಸಬಹುದಲ್ಲದೇ ಮನಸ್ಸಿನ ನೆಮ್ಮದಿಯನ್ನು ತುಂಬಿಸಲು ಸಾಧ್ಯವಿಲ್ಲ. ಮನಸ್ಸಿನ ನೆಮ್ಮದಿ ಸಾಹಿತ್ಯದಿಂದ ಮಾತ್ರ ಸಾಧ್ಯ. ನಾವು ಕಲಿಸುವ ಎಲ್ಲ ವಿಷಯಗಳಲ್ಲಿ ಅತೀ ಹೆಚ್ಚು ಮಾನವೀಯ ಮೌಲ್ಯಗಳನ್ನು ಹೇಳುವುದು ಸಾಹಿತ್ಯ. ಬಹುತೇಕ ಎಲ್ಲಾ ಚಳುವಳಿಗಳ ಹಿಂದೆ ಸಾಹಿತ್ಯದ ಪಾತ್ರವಿದೆ ಎಂದರು.

ಮೌಲ್ಯಮಾಪನ ಕುಲಸಚಿವರಾದ ಪ್ರೊ. ಎಸ್.ಎಂ. ಹುರಕಡ್ಲಿ, ವಿತ್ತಾಧಿಕಾರಿಗಳಾದ ಪ್ರೊ. ಡಿ.ಎನ್. ಪಾಟೀಲ ಅವರು ಆನ್‌ಲೈನ ವೆಬನಾರಿನಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ಶೋಭಾ ನಾಯಕ ನಿರೂಪಿಸಿದರು. ಡಾ. ಹನುಮಂತಪ್ಪ ಸಂಜೀವಣ್ಣನವರ ವಂದಿಸಿದರು. ವೆಬಿನಾರಿನಲ್ಲಿ ೩೫೩ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Breaking news – ಫೈನಲ್ ಆಗಬೇಕಿರುವ 2 -3 ವಿಚಾರ ಬಹಿರಂಗ ಪಡಿಸಿದ ಎಂದ ಬೊಮ್ಮಾಯಿ (ಆಡಿಯೋ ಸಹಿತ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button