ಪ್ರಗತಿವಾಹಿನಿ ಸುದ್ದಿ; ತುಮಕೂರು: ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಪ್ರಾಣದ ಹಂಗುತೊರೆದು ಹೋರಾಡುತ್ತಿರುವ ಕೊರೊನಾ ವಾರಿಯರ್ಸ್‌ಗೆ ದೇಶಾದ್ಯಂತ ಹಲವು ರೀತಿಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಇದೀಗ ತುಂಬು ಗರ್ಭಿಣಿಯಾದರೂ ಹಗಲಿರುಳು ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಗೆ ಸೀಮಂತ ಮಾಡಿ ಕೃತಜ್ಞತೆ ಸಲ್ಲಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.
ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಮನೆ ಮನೆಗೂ ತೆರಳಿ ಕೊರೊನಾ ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಅಂತವರ ಸೇವೆಯನ್ನು ಗುರುತಿಸಿ ಶಾಸಕ ಗೌರಿಶಂಕರ ನೇತೃತ್ವದಲ್ಲಿ ಈ ಅಭಿನಂದನಾ ಕಾರ್ಯಕ್ರಮ ನೆರವೇರಿದೆ. ಈ ವೇಳೆ ಸುಮಾರು 300 ಜನ ಆಶಾಕಾರ್ಯಕರ್ತೆಯರಿಗೆ ಸನ್ಮಾನ ನೆರವೇರಿಸಲಾಯಿತು. ಆಶಾ ಕಾರ್ಯಕರ್ತೆಯರ ತಾಲೂಕು ಮೇಲ್ವಿಚಾರಕಿ ಭಾರತಿ ತುಂಬು ಗರ್ಭಿಣಿಯಾಗಿದ್ದು, ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಜೆಡಿಎಸ್ ಶಾಸಕ ಡಿ.ಸಿ ಗೌರಿಶಂಕರ್ 300 ಜನ ಆಶಾ ಕಾರ್ಯಕರ್ತೆಯರಿಗೆ ಸೀರೆ, ಅರಿಶಿಣ, ಕುಂಕುಮ, ಹೂ, ಬಳೆ ಆಹಾರ ಕಿಟ್, ತರಕಾರಿ ನೀಡಿ ಸನ್ಮಾಸಿಲಾಯಿತು. ಪ್ರತಿಯೊಬ್ಬ ಆಶಾ ಕಾರ್ಯಕರ್ತೆಗೂ ಹೂಮಳೆ ಸುರಿಸುವ ಮೂಲಕ ಅವರ ಕೆಲಸವನ್ನು ಶ್ಲಾಘಿಸಿದರು.
ಈ ವೇಳೆ ಮಾತನಾಡಿದ ಭಾರತಿ, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ನಾನೆಂದು ಜೊತೆಗಿರುತ್ತೇನೆ. ಸರ್ಕಾರ ಆದಷ್ಟು ಬೇಗ ಆಶಾ ಕಾರ್ಯಕರ್ತೆಯರ ತಿಂಗಳ ವೇತನವನ್ನು 10 ಸಾವಿರ ರೂ.ಗಳಿಗೆ ಹೆಚ್ಚಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ