*ಹೆಬ್ಬಾಳ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಬಿಗ್ ಶಾಕ್*

ಪ್ರಗತಿಹಾಹಿನಿ ಸುದ್ದಿ: ಸಂಚಾರ ದಟ್ಟಣೆ ಪರಿಹಾರ ನಿಟ್ಟಿನಲ್ಲಿ ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ನಲ್ಲಿ ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಭಾರಿ ಆಘಾತ ಎದುರಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ನೀಡಿರುವ ವರದಿಯಲ್ಲಿ ಟನಲ್ ರಸ್ತೆಯಿಂದ ಮತ್ತಷ್ಟು ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದೆ ಎಂದು ತಿಳಿಸಿದೆ.
ಹೆಬ್ಬಾಳ ಟನಲ್ ರಸ್ತೆ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಐಐಎಸ್ಸಿ ತಜ್ಞರ ತಂಡ, ಟನಲ್ ರಸ್ತೆಗಿಂತ ಮೆಟ್ರೋವೇ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಎಂದು ತಿಳಿಸಿದ್ದು, ಈ ನಿಟ್ಟಿನಲ್ಲಿ ರಾಜ್ಯಪಾಲರಿಗೆ ವರದಿ ಸಲ್ಲಿಸಿದೆ.
ಬೆಂಗಳೂರಿನ ಹೆಬ್ಬಾಳ ಜಂಕ್ಷನ್ ಟ್ರಾಫಿಕ್‌ಗೆ 2.28 ಕಿಲೋಮೀಟರ್‌ನ ಟನಲ್ ರಸ್ತೆ ಯಾವುದೇ ಶಾಶ್ವತ ಪರಿಹಾರವಲ್ಲ ಎಂದು ಐಐಎಸ್ಸಿ ಸಂಶೋಧನಾ ತಂಡ ಸ್ಪಷ್ಟಪಡಿಸಿದೆ. ಈ ಸುರಂಗ ಮಾರ್ಗದಿಂದ ಸುರಂಗದ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳಲ್ಲಿ ಟ್ರಾಫಿಕ್ ಜಾಮ್ ಮುಂದುವರಿಯಲಿದೆ. ವಿಶೇಷವಾಗಿ ವೆಟರ್ನರಿ ಆಸ್ಪತ್ರೆ ಹಾಗೂ ಎಸ್ಟೀಮ್ ಮಾಲ್ ಬಳಿ ಹೊಸ ಚೋಕ್‌ಪಾಯಿಂಟ್‌ಗಳು ಸೃಷ್ಟಿಯಾಗಲಿದ್ದು, ವಾಹನಗಳು ಸುರಂಗದೊಳಗೇ ಸಾಲುಗಟ್ಟಿ ನಿಲ್ಲುವ ಭೀತಿ ವ್ಯಕ್ತವಾಗಿದೆ. 2040ಕ್ಕೆ ಈ ಯೋಜನೆ ಪೂರ್ಣಗೊಂಡರೂ ಹೆಬ್ಬಾಳದಿಂದ ಮೇಕ್ರಿ ಸರ್ಕಲ್‌ವರೆಗೆ ಟ್ರಾಫಿಕ್ ದಟ್ಟಣೆ ಕಡಿಮೆಯಾಗುವುದಿಲ್ಲ ಎಂದು ಐಐಎಸ್ಸಿ ತಜ್ಞರು ರಾಜ್ಯಪಾಲರಿಗೆ ವರದಿ ಸಲ್ಲಿಸಿದ್ದಾರೆ.
ಹೆಬ್ಬಾಳ ಟನಲ್ ರಸ್ತೆ ವಿಚಾರದಲ್ಲಿ ರಸ್ತೆಯ ಸಾಮರ್ಥ್ಯವನ್ನು ತೀರಾ ಕಡಿಮೆ ಅಂದಾಜಿಸಲಾಗಿದ್ದು, ಶೇಕಡ 50ರಿಂದ 80ರಷ್ಟು ಟ್ರಾಫಿಕ್ ಡೈವರ್ಷನ್ ಆಗುತ್ತದೆ ಎಂಬ ಲೆಕ್ಕಾಚಾರ ಸಂಪೂರ್ಣ ಅವೈಜ್ಞಾನಿಕವಾಗಿದೆ. ಎಸ್ಟೀಮ್ ಮಾಲ್ ಬಳಿಯ 60 ಮೀಟರ್ ತಿರುವು ವಾಹನಗಳ ವೇಗ ತಗ್ಗಿಸಿ, ಸಾಮರ್ಥ್ಯ ಕುಸಿತಕ್ಕೆ ಕಾರಣವಾಗಲಿದೆ. ಇದಲ್ಲದೆ, ಹೆಬ್ಬಾಳ ಕೆರೆಯ ಕ್ಯಾಚ್‌ಮೆಂಟ್ ಪ್ರದೇಶದಲ್ಲೇ ಸುರಂಗ ನಿರ್ಮಿಸುವುದರಿಂದ ಭಾರಿ ಮಳೆಯಾದಾಗ ಟನಲ್ ಒಳಗಡೆ ಪ್ರವಾಹ ಸೃಷ್ಟಿಯಾಗುವ ಅಪಾಯವಿದೆ. ಇದು ಹೆಬ್ಬಾಳ ಕೆರೆ, ಪಾರ್ಕ್ ಹಾಗೂ ಹಾಲಿ ಇರುವ ಫ್ಲೈಓವರ್ ಪಿಲ್ಲರ್‌ಗಳ ಅಡಿಪಾಯಕ್ಕೂ ಅಪಾಯ ತಂದೊಡ್ಡಲಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಯೋಜನೆಯಲ್ಲಿ ಪ್ರಾರಂಭಿಕ ಅಂದಾಜಿಗಿಂತ ಸುಮಾರು ಆರು ಪಟ್ಟು ವೆಚ್ಚ ಹೆಚ್ಚಾಗಲಿದ್ದು, ಟೋಲ್ ದರವೂ ಹೆಚ್ಚಳವಾಗಲಿದೆ. ಇದು ಸಾಮಾನ್ಯ ಜನರ ಓಡಾಟಕ್ಕೆ ಅನುಕೂಲವಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ.




