ಅಂಜಲಿ ಗರಗ್
“ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ನಮ್ಮ ಬೇಂದ್ರೆ ಅಜ್ಜನವರು ಬರೆದ ಭಾವಗೀತೆಯ ಸಾಲುಗಳು ಮಸ್ತಿಷ್ಕದಲ್ಲಿ ಮನೆಮಾಡಿಬಿಟ್ಟಿದೆ. ಯುಗಾದಿ ಬಂತೆಂದರೆ ಸಾಕು ಮುಖದಲ್ಲಿ ಮುಗುಳ್ನಗುವಿನೊಂದಿಗೆ ಹಾಡು ಗುಣಗುಣಿಸುವಂತಾಗುತ್ತದೆ.ಯುಗಾದಿ ಸಂಧಿ ಬಿಡಿಸಿದರೆ ಯುಗ+ಆದಿ. ಅಂದರೆ ಹೊಸ ಯುಗದ ಆರಂಭ. ಮಾನವಕುಲಕೆ ಹೊಸ ವರ್ಷದ ಆರಂಭ. ಸೃಷ್ಟಿಕರ್ತ ಬ್ರಹ್ಮನ ಹೊಸದಿನದ ಆರಂಭ. ಅದು ಹೇಗೆ ಎಂದಿರೋ? ಮನುಕುಲದ ೩೬೫ ದಿನಗಳು ಅಂದರೆ ಒಂದು ವರ್ಷ ಸೃಷ್ಟಿಕರ್ತನ ಒಂದು ದಿನದ ಲೆಕ್ಕವಂತೆ.
ಚೈತ್ರ ಶುದ್ಧ ಪ್ರತಿಪದೆಯಂದು ಹಿಂದೂ ವರ್ಷಾರಂಭವಾಗುತ್ತದೆ.ಹೊಸ ವರ್ಷದ ಮೊದಲ ದಿನವನ್ನು ಯುಗಾದಿ ನಾಮಧೇಯದಿಂದ ಹಬ್ಬ ಆಚರಿಸಲಾಗುತ್ತದೆ.
ಎಲ್ಲ ಹಬ್ಬ ಹರಿದಿನಗಳ ಆಚರಣೆ ಹಿನ್ನೆಲೆಗಳುಂಟು.ಕಥೆಯರೂಪದಲ್ಲಿಯೋ ಅಥವಾ ಹಾಡಿನರೂಪದಲ್ಲಿಯಾದರೂ ಸರಿ. ಅಂತೆಯೇ ಯುಗಾದಿ ಆಚರಣೆಗೂ ಹಿನ್ನಲೆಯುಂಟು. ಯುಗಾದಿ ಆಚರಣೆಯನ್ನು ಮೂರು ಹಿನ್ನೆಲೆಯಲ್ಲಿ ವಿಶ್ಲೇಷಿಸಬಹುದು. ಅವುಗಳೆಂದರೆ ಪೌರಾಣಿಕ,ಐತಿಹಾಸಿಕ ಹಾಗೂ ನೈಸರ್ಗಿಕ ಕಾರಣಗಳು.
ಮೊದಲನೆಯದಾಗಿ ಪೌರಾಣಿಕ ಕಥಾರೂಪಿ ಹಿನ್ನೆಲೆಯನ್ನು ನೋಡೋಣ. ದುಷ್ಟರು ದುರ್ಗುಣಿಗಳನ್ನು ರಾಕ್ಷಸರು ಅಥವಾ ಅಸುರರು ಎಂದು ಸಂಬೋಧಿಸುವದು ರೂಢಿ. ಹಿಂದೆ ಸೋಮಾಸುರನೆಂಬ ರಾಕ್ಷಸನು ಸೃಷ್ಟಿಕರ್ತ ಬ್ರಹ್ಮದೇವನ ಬಳಿಯಿದ್ದ ನಾಲ್ಕು ವೇದಗಳಾದ ಋಗ್ವೇದ,ಯಜುರ್ವೇದ,ಸಾಮವೇದ ಹಾಗೂ ಅಥರ್ವಣವೇದಗಳನ್ನು ಕದ್ದುಕೊಂಡು ಹೋಗಿ ಸಮುದ್ರದ ಅಡಿಯಲ್ಲಿ ಅವಿತಿಟ್ಟುಕೊಂಡಿದ್ದನಂತೆ. ಆಗ ಅಸುರಸಂಹಾರಕ್ಕಾಗಿ ವಿಷ್ಣುದೇವನು ಮತ್ಸ್ಯಾವತಾರವನ್ನೆತ್ತಿ ಸೋಮಾಸುರನನ್ನು ಸಂಹರಿಸಿ ವೇದಗಳನ್ನು ಬ್ರಹ್ಮದೇವರಿಗೆ ಮರಳಿಸಿದನಂತೆ. ವೇದಗಳು ಮರಳಿ ಸಿಕ್ಕ ತತ್ ಕ್ಷಣವೇ ಜಗತ್ ನಿರ್ಮಾಣಕಾರ್ಯವನ್ನು ಬ್ರಹ್ಮದೇವರು ಕೈಗೆತ್ತಿಕೊಂಡರಂತೆ ಅದು ಚೈತ್ರಮಾಸದ ಮೊದಲದಿನವಾಗಿತ್ತಂತೆ ಆದ್ದರಿಂದ ಸತ್ಯಯುಗದ ಆರಂಭದ ದಿನವನ್ನು ಯುಗಾದಿಯಾಗಿ ಆಚರಿಸಲಾಗುತ್ತದೆ
ಇನ್ನು ಐತಿಹಾಸಿಕ ಕಾರಣವನ್ನು ಅವಲೋಕಿಸೋಣ. ಸೀತೆಯನ್ನು ರಾವಣ ಅಪಹರಿಸಿದ ನಂತರ ಆಕೆಯನ್ನು ಹುಡುಕುತ್ತ ಬಂದ ಶ್ರೀರಾಮ ಸುಗ್ರೀವನನ್ನು ಭೇಟಿಯಾಗಿ ವಾಲಿಯನ್ನು ವಧಿಸಿ ರಾವಣನ ಅಂತ್ಯಕ್ಕೆ ಆದಿಹೆಜ್ಜೆನ್ನಿಟ್ಟ ಶುಭದಿನ ಚೈತ್ರ ಶುದ್ಧ ಪ್ರತಿಪದೆ.
ನೈಸರ್ಗಿಕ ಕಾರಣಗಳಿಗಂತೂ ಸಾಕ್ಷಿಯ ಅವಶ್ಯಕತೆ ಇಲ್ಲ.ಶಿಶಿರ ಋತುವಿನಲ್ಲಿ ಗಿಡಗಳು ಒಣಗಿ ಎಲೆಗಳೆಲ್ಲ ಉದುರಿಹೋಗಿ ಪ್ರೇತಕಳೆ ಸುರಿಯತ್ತಿರುವಾಗಲೇ ವಸಂತ ಕಾಲಿಟ್ಟು,ಬಿಸಿಲಿಗೆ ಉರಿವ ಭೂವಿಗೆ ಒಂದೆರಡು ಮಳೆಯ ಸೆಳಕುಗಳು ಹೊಡೆದು,ಒಣಗಿಹೋಗಿದ್ದ ಮರಗಿಡಗಳು ಚಿಗುರೊಡೆಯಲು ಪ್ರಾರಂಭಿಸುತ್ತವೆ. ಚಿಗುರೊಡೆದು ಹಸುರಿನಿಂದ ಕಂಗೊಳಿಸುವ ಪ್ರಕೃತಿ,ಧಗೆ ಕಳೆದು ತಂಪೆರೆದ ಹವೆ,ಕಳೆ ತೆಗೆದು ಕಟಾವು ಮಾಡಿ ಸುಗ್ಗಿಗೆ ಬಂದ ಧಾನ್ಯ ಇಷ್ಟು ಸಾಕಲ್ಲವೇ ಮನುಜ ಕುಲ ಸಂಭ್ರಮಿಸಲು? ಆ ಸಂಭ್ರಮವೇ ಹಬ್ಬ ಅದೇ ಹೊಸತನದ ಆರಂಭವೇ ಹೊಸವರ್ಷ.
ಯುಗಾದಿ ಆಚರಣೆಯ ಮೂಲಕಾರಣ ಒಂದೇ ಆದರೂ ವಿಧಾನಗಳು ಬೇರೆ ಬೇರೆ ಆಗಿವೆ. ಮಹಾರಾಷ್ಟ್ರದಲ್ಲಿ ಗುಡಿಪಾಡವಾ ಅಂದರೆ ಭಗವಾ ಧ್ವಜ ನಿಲ್ಲಿಸಿದರೆ ಕರ್ನಾಟಕದಲ್ಲಿ ಧಾನ್ಯಕ್ಕೆ ಮಹತ್ವ.ಧಾನ್ಯದ ತೋರಣ,ಪೂಜೆ,ಹೊಸ ಪಂಚಾಂಗ ಪೂಜೆ ಮತ್ತು ಪಠಣ, ಬೇವು ಬೆಲ್ಲದ ಪ್ರಸಾದ ಸ್ವೀಕರಣೆ ಇತ್ಯಾದಿ ಮುಖ್ಯವಾದ್ದು.
ಯುಗಾದಿಯಲ್ಲಿ ಬೇವು ಬೆಲ್ಲ ಬಹಳ ಮಹತ್ವದ್ದಾಗಿದೆ. ಆರೋಗ್ಯದ ದೃಷ್ಟಿಯಿಂದ ಆ ಹವಾಮಾನಕ್ಕೆ ತಕ್ಕುದಾದ್ದರಿಂದ ದೇಹಕ್ಕೆ ಲಾಭಗಳುಂಟು. ಆಧ್ಯಾತ್ಮಿಕ ದೃಷ್ಟಿಯಿಂದ ನೋಡುವದಾದರೆ ವರ್ಷದ ತುಂಬ ಬರುವ ಸುಖ ದು:ಖಗಳನ್ನು ಬೇವು ಬೆಲ್ಲದಂತೆ ಸಮಾನರೀತಿಯಿಂದ ಸ್ವೀಕರಿಸಬೇಕು ಎಂಬುದಿಲ್ಲಿ ಸಾಂಕೇತಿಕವಾಗಿದೆ.
ಜನೇವರಿ ೧ ನೇ ತಾರೀಖು ಹೊಸ ವರ್ಷವೆಂದು ಭಾರತೀಯರಲ್ಲಿ ಬಲವಾಗಿ ಬಿತ್ತಲು ಹಿಂದೂ ಹೊಸ ವರ್ಷದ ದಿನ ವನ್ನು ಏಪ್ರಿಲ್ ಫೂಲ ದಿನವನ್ನಾಗಿಸಿ ಬಿಡುವದು ಬ್ರಿಟಿಷ್‌ರ ಲೆಕ್ಕವಾಗಿತ್ತು. ಅವರ ಈ ತಂತ್ರವನ್ನು ವಿಫಲಗೊಳಿಸಿ ಅವರ ದಬ್ಬಾಳಿಕೆಯಲ್ಲೂ ಧರ್ಮಪಾಲನೆಗೆ ತಮ್ಮನ್ನರ್ಪಿಸಿ ಮುಂದಿನ ಪೀಳಿಗೆಗೆ ಸಂಸ್ಕೃತಿ ಉಳಿಸಿಕೊಟ್ಟ ಹಿರಿಯ ಜೀವಿಗಳಿಗೆ ನಮೋನಮ:.
ಹೌದು ಯುಗಾದಿಯೇ ನಮ್ಮ ಹೊಸವರ್ಷ. ಬ್ರಿಟಿಷ್‌ರನ್ನು ಹೊಡೆದೋಡಿಸಿದ್ದೇವೆ. ಅವರ ಗೊಡ್ಧು ಆಚರಣೆಗಳನ್ನು ಹೊಡೆದೋಡಿಸಿ ನಮ್ಮ ಸಂಸ್ಕೃತಿಯ ಪುನರುತ್ಥಾನ ಕಾರ್ಯ ಕೈಗೊಳ್ಳೋಣ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ