ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಮುಂದುವರೆದಿದ್ದು, ಆಡಳಿತಾರೂಢ ಬಿಜೆಪಿಗೆ ಬಂಡಾಯದ ಭೀತಿ ಆರಂಭವಾಗಿದೆ. ಶಿವಮೊಗ್ಗ ನಗರ ಹಾಗೂ ಬೆಳಗಾವಿಯಲ್ಲಿ ಟಿಕೆಟ್ ಗೊಂದಲ ಶುರುವಾಗಿದ್ದು, ಟಿಕೆಟ್ ಕೈ ತಪ್ಪಿದರೆ ಬಂಡಾಯ ಸಾರುವ ಬಗ್ಗೆ ಆಕಾಂಕ್ಷಿಗಳು ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ಬೆಳಗಾವಿಯಲ್ಲಿ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಸಾಕಷ್ಟು ಗೊಂದಲವಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆ ಇದೀಗ ಬೆಳಗಾವಿಗೆ ಶಿಫ್ಟ್ ಆಗಿದೆ. ಇಂದು ಬೆಳಗಾವಿಯಲ್ಲಿ ಜಿಲ್ಲಾ ಕೋರ್ ಕಮಿಟಿ ಸಭೆ ನಡೆಯಲಿದ್ದು, ಟಿಕೆಟ್ ಹಂಚಿಕೆ ಫೈನಲ್ ಆಗಲಿದೆ.
ಕರ್ನಾಟಕ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಳಗಾವಿಯಲ್ಲಿಯೇ ಸಭೆ ನಡೆಸಿ ಟಿಕೆಟ್ ವಿಚಾರ ಫೈನಲ್ ಮಾಡಿಕೊಂಡು ಬರುವಂತೆ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರೋ ರಾತ್ರಿ ಬೆಂಗಳೂರಿನಿಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ಉಪಾಧ್ಯಕ್ಷ ನಿರ್ಮಲ ಕುಮಾರ ಸುರಾನಾ ಬೆಳಗಾವಿಗೆ ಆಗಮಿಸಿದ್ದು, ಇಂದು ಸಭೆ ನಡೆಸಲಿದ್ದಾರೆ.
ಅರಬಾವಿ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ಕೊಟ್ಟು ಬಾಲಚಂದ್ರ ಜಾರಕಿಹೊಳಿ ಯಮಕನಮರಡಿಯಿಂದ ಸ್ಪರ್ಧಿಸಬೇಕು. ಇದರಿಂದ ಪಕ್ಷಕ್ಕೆ ಮತ್ತೊಂದು ಹೆಚ್ಚಿನ ಸೀಟ್ ಗೆಲ್ಲಲು ಅವಕಾಶವಿದೆ ಎಂದು ಸಂಸದ ಈರಣ್ಣ ಕಡಾಡಿ ಸಲಹೆ ನೀಡಿದ್ದು, ಅದು ರಮೇಶ ಹಾಗೂ ಬಾಲಚಂದ್ರ ಅವರನ್ನು ಕೆರಳಿಸಿದೆ.
ಅಥಣಿ ಟಿಕೆಟ್ ಮಹೇಶ್ ಕುಮಟಳ್ಳಿಗೆ ನೀಡಬೇಕು ಎಂದು ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿರುವ ನಿಟ್ಟಿನಲ್ಲಿ ಸಭೆಯಲ್ಲಿ ಈ ಬಗ್ಗೆಯೂ ಚರ್ಚೆ, ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಅಥಣಿ ಕ್ಷೇತ್ರದ ಟಿಕೆಟ್ ತಮಗೇ ಬೇಕೆಂದು ಲಕ್ಷ್ಮಣ ಸವದಿ ಸಹ ಬಿಗಿ ಪಟ್ಟು ಹಿಡಿದಿದ್ದಾರೆ. ಹಾಗಾಗಿ ಅಥಣಿ ವಿವಾದ ದೊಡ್ಡ ಮಟ್ಟದಲ್ಲಿ ಗೊಂದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ