*ಕೈಗೆ ಕೋಳ ಹಾಕಿಕೊಂಡು ಮಾವನ ಮನೆ ಮುಂದೆ ಟೀ ಅಂಗಡಿ ತೆರೆದು ಈ ವ್ಯಕ್ತಿ ಮಾಡುತ್ತಿರುವುದೇನು..?*

ಪ್ರಗತಿವಾಹಿನಿ ಸುದ್ದಿ: ಕೈಗೆ ಕೋಳ ಹಾಕಿಕೊಂಡು ಚಹಾ ಮಾರುವ ಮೂಲಕ ದೇಶದಲ್ಲಿ ವ್ಯಕ್ತಿ ಓರ್ವ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಅಷ್ಟಕ್ಕೂ ಈತ ಕೈಗೆ ಕೊಳ ಹಾಕಿಕೊಂಡಿದ್ದು ಯಾಕೆ..?
ಈತನ ಹೆಸರು ಕೃಷ್ಣ ಕುಮಾರ್ ಧಾಕಡ್, ರಾಜಸ್ಥಾನ ಮೂಲದವನು. ಪತ್ನಿ ತನ್ನ ವಿರುದ್ಧ ಮಾಡಿರುವ ವರದಕ್ಷಿಣೆ ಕಿರುಕುಳ ಆರೋಪದಿಂದ ಬೇಸತ್ತು ನ್ಯಾಯಕ್ಕಾಗಿ ವಿಭಿನ್ನವಾಗಿ ಪ್ರತಿಭಟನೆ ಮಾಡುತ್ತಿದ್ದಾನೆ. ಅತ್ತೆ- ಮಾವನ ಮನೆ ಬಳಿಯೇ ಚಹಾದ ಅಂಗಡಿ ತೆರೆದು, ಕೈಕೋಳ ಧರಿಸಿಕೊಂಡೇ ಚಹಾ ಮಾರಾಟ ಮಾಡುತ್ತಾ ಜನರಿಗೆ ಚರ್ಚೆಗೆ ಕರೆಯುತ್ತಿದ್ದಾನೆ.
ತನ್ನ ಪತ್ನಿ ಸುಳ್ಳು ಆರೋಪ ಮಾಡಿ ಕಾನೂನು ದುರುಪಯೋಗ ಪಡಿಸಿಕೊಂಡಿದ್ದಾಳೆ ಎಂದು ‘498 ಎ ಟಿ ಕೆಫೆ’ ಹೆಸರಿನ ಚಹಾ ಅಂಗಡಿ ತೆರೆದಿದ್ದಾನೆ. ಅವರ ಅಂಗಡಿಯಲ್ಲಿ ‘ನನಗೆ ನ್ಯಾಯ ಸಿಗುವವರೆಗೂ ಚಹಾ ಕುದಿಯುತ್ತಲೇ ಇರುತ್ತದೆ. ‘ಬನ್ನಿ, ಚಹಾ ಕುಡಿಯುತ್ತಾ ಚರ್ಚೆ ಮಾಡೋಣ, 125ಕ್ಕೆ ಎಷ್ಟು ಖರ್ಚು ಮಾಡೋಣಾ’ ಎಂಬ ಘೋಷಣೆಗಳನ್ನು ಬರೆಯಲಾಗಿದೆ.
ಕೃಷ್ಣ ಕುಮಾರ್ 2018 ರಲ್ಲಿ ಮೀನಾಕ್ಷಿ ಮಾಳವ್ ಅವರನ್ನು ವಿವಾಹವಾಗಿದ್ದರು. ಆದರೆ 2022 ರಲ್ಲಿ ಮೀನಾಕ್ಷಿ, ಕೃಷ್ಣ ಕುಮಾರ್ ಅವರನ್ನು ತೊರೆದು ತವರು ಸೇರಿಕೊಂಡಿದ್ದಾರೆ. ಕೆಲವು ತಿಂಗಳುಗಳ ನಂತರ ಕೃಷ್ಣ ವಿರುದ್ಧ ಐಪಿಸಿ ಸೆಕ್ಷನ್ 498 ಎ (ವರದಕ್ಷಿಣೆ ಕಿರುಕುಳ) ಮತ್ತು ಸೆಕ್ಷನ್ 125 (ಜೀವನಾಂಶ) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಆದರೆ ಈ ಸುಳ್ಳು ಪ್ರಕರಣಗಳಿಂದ ನನ್ನ ಜೀವನ ನಾಶವಾಗಿದೆ. ಕಳೆದ ಮೂರು ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡುತ್ತಿದ್ದೇನೆ. ನನಗೆ ವಯಸ್ಸಾದ ತಾಯಿಯಿದ್ದಾರೆ. ನಾನು ತಗಡಿನ ಶೆಡ್ ಅಂಗಡಿಯಲ್ಲಿ ವಾಸಿಸುತ್ತಿದ್ದು ಬೇರೇನೂ ಉಳಿದಿಲ್ಲ. ಹಲವು ಬಾರಿ ಆತ್ಮಹತ್ಯೆಯ ಯೋಚನೆ ಮಾಡಿ ಬಳಿಕ ನನ್ನ ತಾಯಿಗೆ ನಾನೊಬ್ಬನೇ ಆಸರೆ ಎಂಬುದನ್ನು ಅರಿತು ಜೀವನ ನಡೆಸುತ್ತಿದ್ದೇನೆ ಎಂದು ಕೃಷ್ಣ ಕುಮಾರ್ ಅಳಲು ತೋಡಿಕೊಂಡಿದ್ದಾರೆ.
ಆದರೆ ಅವರ ಪತ್ನಿ ಮೀನಾಕ್ಷಿ ಪ್ರಕಾರ, ನನ್ನ ಗಂಡ ಭೂಮಿ ಖರೀದಿಸಲು ನನ್ನ ತಂದೆ, ತಾಯಿಯಿಂದ ಹಣ ಕೇಳಿದರು. ನಾವು ನಿರಾಕರಿಸಿದಾಗ ಆತ ನನ್ನ ಮೇಲೆ ಹಲ್ಲೆ ಮಾಡಿದ. ನಂತರ ನಾನು ತವರು ಸೇರಿಕೊಂಡೆ. ನಾನು ವಿಚ್ಛೇದನ ಬಯಸುತ್ತೇನೆ. ನನ್ನ ಹೆಸರಿನಲ್ಲಿ ತೆಗೆದುಕೊಂಡಿರುವ ಎಲ್ಲಾ ಸಾಲಗಳನ್ನು ಮರುಪಾವತಿ ಮಾಡಬೇಕು ಎಂದು ಹೇಳಿಕೊಂಡಿದ್ದಾರೆ.