ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆ ಇನ್ನೇನು ಘೋಷಣೆಯಾಗಲಿದೆ ಎನ್ನುವ ಹೊತ್ತಿನಲ್ಲೂ ಬೆಳಗಾವಿ ಕ್ಷೇತ್ರದ ಅಭ್ಯರ್ಥಿಗಳ್ಯಾರು ಎನ್ನುವ ಗೊಂದಲ ಎಲ್ಲ ಪಕ್ಷಗಳಲ್ಲೂ ಮುಂದುವರಿದಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇನ್ನೂ ಅಂತಿಮವಾಗಿಲ್ಲ. ಹಾಗಾಗಿ ಮೈತ್ರಿ ಪಕ್ಷದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎನ್ನುವುದು ಖಚಿತವಾಗಿಲ್ಲ.
ಜೊತೆಗೆ ಭಾರತೀಯ ಜನತಾ ಪಾರ್ಟಿಯಲ್ಲಿ ಕೂಡ ಈ ಬಾರಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವುದು ಬಹಿರಂಗವಾಗಿಲ್ಲ. ಅಭ್ಯರ್ಥಿಯನ್ನು ಬದಲಾಯಿಸಬೇಕು ಎನ್ನುವ ಕೂಗು ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಎದ್ದಿದ್ದರಿಂದ ಪಕ್ಷದ ವರಿಷ್ಠರು ಮತ್ತು ಟಿಕೆಟ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಾದ ಸಂಘಪರಿವಾರದವರು ಕೂಡ ಇನ್ನೂ ನಿರ್ಧಾರ ಪ್ರಕಟಿಸಿಲ್ಲ.
ಕೇವಲ ಮೋದಿ ಹೆಸರಲ್ಲಿ ಮತ ಕೇಳುವ ಅನಿವಾರ್ಯತೆ ಬಿಜೆಪಿಗೆ ಇದೆ. ಇದರಿಂದಾಗಿ ಜನರನ್ನು ಎದುರಿಸುವುದು ಕಷ್ಟ. ಅಭ್ಯರ್ಥಿ ಅಥವಾ ಕ್ಷೇತ್ರದ ಅಭಿವೃದ್ಧಿ ಆಧಾರದ ಮೇಲೆ ಮತಕೇಳುವಂತಾಗಬೇಕು. ಹಾಗಾಗಿ ಈ ಬಾರಿ ಅಭ್ಯರ್ಥಿ ಬದಲಿಸಬೇಕು ಎನ್ನುವುದು ಬಿಜೆಪಿಯಿಂದಲೇ ಎದ್ದಿರುವ ಕೂಗು. ಆದರೆ ಸುರೇಶ ಅಂಗಡಿ ಬೇಡವೆಂದಾದರೆ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಬಗ್ಗೆ ಆಂತರಿಕವಾಗಿ ಹಲವು ಸಮೀಕ್ಷೆಗಳು ನಡೆದರೂ ಬದಲಿ ಅಭ್ಯರ್ಥಿಯ ಹೆಸರು ಹೊರಗೆ ಬಂದಿಲ್ಲ.
ವಿಶೇಷವೆಂದರೆ, 3 ಬಾರಿ ಸಂಸದರಾಗಿ ಕೆಲಸ ಮಾಡಿರುವ ಬಿಜೆಪಿಯ ಸುರೇಶ ಅಂಗಡಿ ಅವರಿಗೂ ತಮಗೇ ಟಿಕೆಟ್ ಸಿಗಲಿದೆ ಎನ್ನುವ ಬಗ್ಗೆ ವಿಶ್ವಾಸವಿಲ್ಲ. ಹಾಗಾಗಿಯೇ ಅವರು ಕಳೆದ ವಾರ ಸಂಘ ಪರಿವಾರದ ಪ್ರಮುಖರೊಬ್ಬರನ್ನು ಭೇಟಿಯಾಗಿ ಟಿಕೆಟ್ ಬಗ್ಗೆ ಖಚಿತಪಡಿಸುವಂತೆ ಕೋರಿದ್ದಾರೆ. ”ಸಮಯ ಬಹಳ ಕಡಿಮೆ ಇದೆ. ನನಗೇ ಟಿಕೆಟ್ ನೀಡುವುದಾದರೆ ನಾನು ಸಿದ್ಧತೆ ಮಾಡಿಕೊಳ್ಳಬೇಕಿದೆ. ಹಾಗಾಗಿ ಯಾರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವುದನ್ನು ಆದಷ್ಟು ಬೇಗ ತಿಳಿಸಿ” ಎಂದು ಅಂಗಡಿ ಒತ್ತಾಯಿಸಿದ್ದಾರೆ.
”ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ನಿಮ್ಮ ಸಿದ್ಧತೆ ನೀವು ಮಾಡಿಕೊಳ್ಳಿ. ಆದರೆ ಸಾರ್ವಜನಿಕ ವಲಯದಲ್ಲಿ ನಿಮ್ಮ ಬಗ್ಗೆ ಇರುವ ನೆಗೆಟಿವ್ ಅಂಶಗಳನ್ನು ಸರಿಪಡಿಸಿಕೊಳ್ಳುವ ದಿಸೆಯಲ್ಲಿ ಪ್ರಯತ್ನಿಸಿ. ಮೋದಿ ಪ್ರಧಾನಿಯಾಗಬೇಕೆನ್ನುವುದಷ್ಟೆ ನಮ್ಮ ಅಪೇಕ್ಷೆ. ಸ್ಥಳೀಯ ಅಭ್ಯರ್ಥಿ ನಮಗೆ ಮುಖ್ಯ ಅಲ್ಲ. ಈ ದಿಸೆಯಲ್ಲಿ ಸಂಘ ಪರಿವಾರ ಈಗಾಗಲೆ ಕೆಲಸ ಆರಂಭಿಸಿದೆ. ಆದರೆ ಜನರನ್ನು ಎದುರಿಸುವಾಗ ಅಭ್ಯರ್ಥಿಯ ಬಗ್ಗೆ ಕೇಳುವ ಪ್ರಶ್ನೆಗಳಿಗೂ ನಾವು ಉತ್ತರಿಸಬೇಕಾಗುತ್ತದೆ. ಆ ದಿಸೆಯಲ್ಲಿ ನೀವು ಬದಲಾಗಬೇಕು ” ಎನ್ನುವ ಸೂಚನೆಯನ್ನು ಸಂಘದ ಪ್ರಮುಖರು ಅಂಗಡಿಯವರಿಗೆ ನೀಡಿದ್ದಾರೆ ಎಂದು ಖಚಿತ ಮೂಲಗಳು ಪ್ರಗತಿವಾಹಿನಿಗೆ ತಿಳಿಸಿವೆ.
”ಪಕ್ಷದ ಕಾರ್ಯಕರ್ತರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಬೇಕು. ಹಾಗಾದಾಗ ಕೆಲಸ ಸುಲಭವಾಗುತ್ತದೆ. ಯಾರೊ ಒಂದಿಬ್ಬರನ್ನು ನಂಬಿಕೊಂಡು ಚುನಾವಣೆ ಎದುರಿಸುವುದು ಸಾಧ್ಯವಿಲ್ಲ. ಈ ಹಿಂದೆ ಮೂರು ಬಾರಿಯೂ ಸಂಘ ಪರಿವಾರದ ಕಾರ್ಯಕರ್ತರ ಕೆಲಸ ಮತ್ತು ನಾಯಕರ ಹೆಸರು ನಿಮ್ಮ ಕೈ ಹಿಡಿದಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ” ಎಂದೂ ಅವರು ಸೂಚಿಸಿದ್ದಾರೆ ಎನ್ನಲಾಗಿದೆ.
”ಸುರೇಶ ಅಂಗಡಿಯವರ ಬಗೆಗೆ ನಮ್ಮಲ್ಲೇ ವಿರೋಧ ಇರುವುದು ನಿಜ. ಆದರೆ ಅವರ ಬದಲಿಗೆ ಬೇರೆ ಯಾರಿದ್ದಾರೆ? ಅವರಿಗೇ ಟಿಕೆಟ್ ನೀಡುವುದು ಪಕ್ಷಕ್ಕೆ ಅನಿವಾರ್ಯವಾಗಿದೆ. ಅವರು ಇದನ್ನು ಅರ್ಥ ಮಾಡಿಕೊಂಡು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ಕಷ್ಟವಿದೆ. ನಮಗೆ ಈ ಬಾರಿ ಒಂದೊಂದು ಸೀಟ್ ಕೂಡ ಪ್ರಮುಖವಾಗಿದೆ” ಎಂದು ಬಿಜೆಪಿಯ ರಾಜ್ಯ ನಾಯಕರೊಬ್ಬರು ಪ್ರಗತಿವಾಹಿನಿಗೆ ತಿಳಿಸಿದರು.
ಈ ಮಧ್ಯೆ, ಸುರೇಶ ಅಂಗಡಿ ತಮ್ಮ ಸಂಬಂಧಿಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮೂಲಕ ಪಕ್ಷ ಹೈಕಮಾಂಡ್ ಮೇಲೂ ಸಾಕಷ್ಟು ಒತ್ತಡ ಹೇರುತ್ತಿದ್ದಾರೆ. ”ಬೆಳಗಾವಿ ಕ್ಷೇತ್ರದಲ್ಲಿ ಬದಲಿ ಅಭ್ಯರ್ಥಿ ಇಲ್ಲ. ಹೊಸಬರಿಗೆ ಟಿಕೆಟ್ ನೀಡಿದರೆ ಒಂದು ಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ಸುರೇಶ ಅಂಗಡಿಯವರಿಗೇ ಟಿಕೆಟ್ ಖಚಿತಪಡಿಸಿ” ಎಂದು ಶೆಟ್ಟರ್ ಹೈಕಮಾಂಡ್ ಗೆ ಮನವಿ ಮಾಡಿದ್ದಾರೆ.
ಒಟ್ಟಾರೆ, ಪಕ್ಷದೊಳಗೇ ವಿರೋಧದ ಅಲೆ ಎದ್ದಿರುವುದರಿಂದ ಅದನ್ನು ಸರಿಪಡಿಸಿಕೊಳ್ಳದೆ ಮುನ್ನಡೆದರೆ ಪ್ರಬಲವಾದ ಮೋದಿ ಅಲೆಯ ನಡುವೆಯೂ ಬಿಜೆಪಿ ಆತಂಕದಿಂದಲೇ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಇದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ)