ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಮೆಟ್ರೋ 2ನೆ ಹಂತದ ಯೋಜನೆಯಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ 500 ಮಿಲಿಯನ್ ಯುರೋ ಹೂಡಿಕೆ ಮಾಡಲು ಮುಂದೆ ಬಂದಿದ್ದು, ಇಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಸಮ್ಮುಖದಲ್ಲಿ ಎರಡನೇ ಕಂತಿನ 200 ಮಿಲಿಯನ್ ಯುರೋ ಯೋಜನಾ ಒಪ್ಪಂದಕ್ಕೆ ಸಹಿ ಮಾಡಲಾಯಿತು.
ಯೂರೋಪಿಯನ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ನೀಡುತ್ತಿರುವ ನೆರವಿಗೆ ಸರ್ಕಾರ ಆಭಾರಿಯಾಗಿದೆ. ಬೆಂಗಳೂರು ನಗರದಲ್ಲಿ 11 ಬಿಲಿಯನ್ ಜನಸಂಖ್ಯೆ ಇದ್ದು, ಪರಿಸರ ಮಾಲಿನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಹಾಗೂ ವಾಹನ ದಟ್ಟಣೆ ಕಡಿಮೆ ಮಾಡುವ ಹಾಗೂ ಜನ ಸಾಮಾನ್ಯರ ಜೀವನ ಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಮೆಟ್ರೋ ಯೋಜನೆ ಸಹಕಾರಿಯಾಗಿದೆ.
ಮೊಟ್ರೋ 2ನೇ ಹಂತದ ಯೋಜನೆಯ ಅಂದಾಜು ಮೊತ್ತ 26,405 ಕೋಟಿ ರೂ. ಗಳಾಗಿದ್ದು, ಈ ಪೈಕಿ 12,141 ಕೋಟಿ ರು.ಗಳು ಸಾಲದ ಅಗತ್ಯ ವಿದೆ.ಇ ಐ ಬಿ 500 ಮಿಲಿಯನ್ ಯೂರೋಗಳನ್ನು ಅಂದರೆ ಸುಮಾರು 3800 ಕೋಟಿ ರೂ. ಗಳ ನೆರವನ್ನು ಒದಗಿಸುತ್ತಿರುವುದು ಅಭಿನಂದನೀಯ ಎಂದು ಮುಖ್ಯಮಂತ್ರಿ ಗಳು ತಿಳಿಸಿದರು. ಈ ಸಾಲದ ನೆರವನ್ನು ಇ.ಐ.ಬಿ ತಮ್ಮ ಪರಿಸರ ಸೌಲಭ್ಯ ಯೋಜನೆಯಡಿ ಕೈಗೊಂಡಿರುವುದಾಗಿ ಅವರು ತಿಳಿಸಿದರು.
ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು, ಗೊಟ್ಟಿಗೆರೆಯಿಂದ ನಾಗವಾರವರೆಗೆ ರೀಚ್- ೬ ಯೋಜನೆಗೆ ಇಐಬಿ ಅವರು 500 ಮಿಲಿಯನ್ ಯುರೋ ಅನ್ನು ಸಾಲವಾಗಿ ನೀಡಲು ಒಪ್ಪಿದ್ದಾರೆ. ಏಷಿಯನ್ ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) 300 ಮಿಲಿಯನ್ ಯುರೋ ಸಾಲ ನೀಡಲಿದ್ದು, ಒಟ್ಟಾರೆ ಈ ಯೋಜನೆಗೆ 800 ಯುರೋ ಮಿಲಿಯನ್ ಸಾಲ ನೀಡಲು ಮುಂದೆ ಬಂದಿದ್ದಾರೆ ಎಂದರು.
ನಮ್ಮ ಸರಕಾರ ಆರ್ಥಿಕವಾಗಿ ಸುಭದ್ರವಾಗಿರುವುದರಿಂದ ಇತರೆ ಬ್ಯಾಂಕ್‌ಗಳು ಸಾಲ ನೀಡಲು ಆಸಕ್ತಿ ತೋರುತ್ತಿವೆ. ಕೆಲವರು ಸರಕಾರದ ಬಗ್ಗೆ ಅನಗತ್ಯ ಮಾತನಾಡುತ್ತಿದ್ದಾರೆ. ನಮ್ಮ ಸರಕಾರ ಆರ್ಥಿಕ ಭದ್ರತೆ ಸಾಧಿಸಿರುವುದರಿಂದ ಇತರೆ ಸಂಸ್ಥೆಗಳು ಸಾಲನೀಡಲು ಮುಂದೆ ಬಂದಿವೆ ಎಂದರು.
ಈ ಸಂದರ್ಭದಲ್ಲಿ ಯುರೋಪಿಯನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ನ ನಿರ್ದೇಶಕಿ ಮರಿಯಾ, ಉಪನಿರ್ದೇಶಕಿ ಸುನೀತಾ, ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ