ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ, ಜೀವ ಬೆದರಿಕೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮೂವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಅಥಣಿ ತಾಲೂಕಿನ ಕುರಣಿ ಗ್ರಾಮದ ಸಿದ್ದಪ್ಪ ಮಲ್ಲಪ್ಪ ನಂದಗಾಂವ (23), ರಮೇಶ ರಾವಸಾಬ ನಂದಗಾಂವ (24) ಹಾಗೂ ಅಶೋಕ ಬಸಪ್ಪ ನಂದಗಾಂವ (24) ಶಿಕ್ಷೆಗೊಳಗಾದವರು.
2016ರ ಫೆ.27 ರಂದು ಮನೆಯ ಹೊರಗೆ ನಿಂತಿದ್ದ ಬಾಲಕಿಯನ್ನು ಅಪಹರಿಸಿದ್ದ ಸಿದ್ದಪ್ಪ ನಂದಗಾಂವಿ ಮತ್ತು ರಮೇಶ ನಂದಗಾವಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರ ನಡೆಸುವ ಸಂದರ್ಭದಲ್ಲಿ ಅಶೋಕ ನಂದಗಾಂವ ಸಹಾಯ ಮಾಡಿದ್ದ. ನಂತರ ಮನೆಗೆ ಬಿಟ್ಟು ಬರುವುದಾಗಿ ಕರೆದೊಯ್ಯುವ ಸಂದರ್ಭದಲ್ಲೂ ಜೀವ ಬೆದರಿಕೆ ಹಾಕಿ ಮತ್ತೊಂದು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ್ದರು.
ಸಿದ್ದಪ್ಪ ನಂದಗಾಂವ ಹಾಗೂ ರಮೇಶ ನಂದಗಾಂವಿಗೆ ತಲಾ ಹತ್ತುವರ್ಷ ಜೈಲು ಹಾಗೂ 26 ಸಾವಿರ ರು. ದಂಡ ಮತ್ತು ಮೂರನೇ ಅಪರಾಧಿ ಅಶೋಕ ನಂದಗಾಂವಗೆ ಎರಡು ವರ್ಷ ಶಿಕ್ಷೆ ಹಾಗೂ 2 ಸಾವಿರ ರು.ದಂಡ ವಿಧಿಸಿ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಜಿ. ನಂಜುಂಡಯ್ಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಲ್.ವಿ.ಪಾಟೀಲ ವಾದ ಮಂಡಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ