Latest

ಆರೋಗ್ಯಕರ ಜೀವನ ಶೈಲಿಯಿಂದ ರೋಗಮುಕ್ತ ದೀರ್ಘಾಯಸ್ಸು : ಡಾ. ಎಚ್.ಬಿ. ರಾಜಶೇಖರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಆರೋಗ್ಯ ಅಮೂಲ್ಯವಾದ ಸಂಪತ್ತು. ನೈಸರ್ಗಿಕವಾದ ಈ ಸಂಪತ್ತು ಇಂದಿನ ಆಧುನಿಕತೆಯ ಮೆರುಗಿನಲ್ಲಿ ಅಧೋಗತಿಯತ್ತ ಸಾಗುತ್ತಿರುವದು ನಿಜಕ್ಕೂ ಖೇದಕರ ಎಂದು ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಕಳವಳ ವ್ಯಕ್ತಪಡಿಸಿದರು.
ನಗರದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧೆಯಿಂದ ಕೂಡಿರುವ ಇಂದಿನ ಜಗತ್ತಿನಲ್ಲಿ ನಾವು ಆರೋಗ್ಯಕರ ಹವ್ಯಾಸಗಳನ್ನು ಮರೆತಿರುವುದು ಆತಂಕಕಾರಿಯಾಗಿದೆ. ನಿಯಮಿತ ಊಟ ವ್ಯಾಯಾಮ ಸದ್ವಿಚಾರಗಳಂಥ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ರೋಗಮುಕ್ತ ದೀರ್ಘಾಯಸ್ಸು ಹೊಂದಬಹುದು ಎಂದು ಹೇಳಿದರು.
ಮುಖ್ಯ ಅತಿಥಿ ಬೆಳಗಾವಿ ಜಿಲ್ಲಾ ಶಸ್ತ್ರ ಚಿಕಿತ್ಸಜ್ಞ ಡಾ. ಹುಸೇನಸಾಬ್ ಖಾಜಿ ಮಾತನಾಡಿ, ನೈಸರ್ಗಿಕವಾಗಿ ಸಿಗುವ ಮನೆಯಲ್ಲೇ ದೊರೆಯುವ ಸಂಪನ್ಮೂಲಗಳಿಂದ ಮತ್ತು ಸರಳ ಜೀವನ ಶೈಲಿಯಿಂದ ಆರೋಗ್ಯಕರ ಜೀವನ ಹೊಂದಬಹುದಾಗಿದೆ. ನಾವು ಸೇವಿಸುವ ಆಹಾರವೇ ಒಂದು ಮಹತ್ತರ ಔಷಧಿಯಾಗಿದ್ದು, ಅದನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಿ ಅದಕ್ಕೆ ತಕ್ಕಂತೆ ವ್ಯಾಯಾಮ ಸದ್ವಿಚಾರಗಳನ್ನು ಮೈಗೂಡಿಸಿಗೊಳ್ಳಬೇಕು. ಇದರಿಂದ ನಾವೂ ಆರೋಗ್ಯವಾಗಿದ್ದು ನಮ್ಮ ಸುತ್ತಮುತ್ತಲ ಜನರನ್ನೂ ಆರೋಗ್ಯವಂತರನ್ನಾಗಿಸಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ. ಎಸ್.ಸಿ. ಧಾರವಾಡ, ಆರೋಗ್ಯ ರಕ್ಷಣೆಯಲ್ಲಿ ಹಲವಾರು ಸಂಶೋಧನೆಗಳು, ಹೊಸ ಚಿಕಿತ್ಸಾ ಮಾದರಿಗಳು ಹಾಗೂ ಆಧುನಿಕ ತಂತ್ರಜ್ಞಾನಗಳು ಬಂದಿದ್ದರೂ ಸಹ ಸಮರ್ಪಕವಾದ ರೀತಿಯಲ್ಲಿ ನಿರ್ವಹಣೆಯಾಗದೆ ಇರುವುದು ಖೇದಕರ. ಆದರೆ ಇತ್ತೀಚಿನ ದಿನಗಳಲ್ಲಿ ವೈದ್ಯರು ಇದನ್ನು ನಿರ್ವಹಿಸಲು ಉತ್ಸಾಹ ತೋರುತ್ತಿರುವದು ನಿಜಕ್ಕೂ ಸಂತಸ ತರುವ ವಿಚಾರವಾಗಿದೆ. ನಿಯಮಿತ ಊಟ, ವ್ಯಾಯಾಮ, ಆಚಾರ, ವಿಚಾರ, ಧ್ಯಾನ ಮತ್ತು ಯೋಗಗಳನ್ನು ಚಟುವಟಿಕೆಗಳಲ್ಲಿ ಅಳವಡಿಸಿಕೊಂಡಲ್ಲಿ ಆರೋಗ್ಯಕರ ಜೀವನ ನಡೆಸಲು ರಹದಾರಿಯಾಗಿದೆ. ವಿಶ್ವ ಆರೋಗ್ಯ ದಿನಾಚರಣೆಯ ಘೋಷವಾಕ್ಯವಾದ ಎಲ್ಲೆಡೆಗೂ ಹಾಗೂ ಎಲ್ಲರಿಗೂ ಆರೋಗ್ಯ ಎಂಬಂತೆ ಎಲ್ಲರಿಗೂ ಆರೊಗ್ಯ ಸೇವೆಗಳು ಸಮರ್ಪಕವಾಗಿ ದೊರೆಯುವಂತಾಗಲಿ ಎಂದು ಕರೆ ನೀಡಿದರು.
ಹೆಸರಾಂತ ಕ್ಯಾನ್ಸರ ತಜ್ಞ ಡಾ. ಸಂತೋಷ ಮಠಪತಿ ಒಟ್ಟಾರೆ ಕ್ಯಾನ್ಸರ ತಡೆಗಟ್ಟುವುದು ಹಾಗೂ ಅದರ ಉಪಚಾರ ವಿಷಯ ಕುರಿತು ಉಪನ್ಯಾಸ ನೀಡಿದರು.
೧೨೦ಕ್ಕೂ ಅಧಿಕ ನಾಗರಿಕರಿಗೆ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣೆ ಮಾಡಲಾಯಿತು. ೧೦೦ಕ್ಕೂ ಅಧಿಕ ಜನರ ಎಲುಬಿನ ಸಾಂದ್ರತೆ ತಪಾಸಣೆ ಮಾಡಿ ಉಪಚರಿಸಲಾಯಿತು.
ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎ. ಉಡಚನಕರ, ಬೆಳಗಾವಿ ಜಿಲ್ಲಾ ನಾಗರಿಕ ಸಂಘದ ಮಾಜಿ ಅಧ್ಯಕ್ಷ ಡಿ.ಪಿ. ಸಿಂಧೆ, ಶತಮಾನೋತ್ಸವ ನರ್ಸಿಂಗ್ ಕಾಲೇಜು ಪ್ರಾಶುಂಪಾಲ ವಿಕ್ರಾಂತ ನೇಸರಿ, ಜಿಎನ್‌ಎಂ ವಿದ್ಯಾರ್ಥಿಗಳು, ವಡಗಾವಿಯ ಮಹಿಳಾ ಮಂಡಳದ ಪದಾಧಿಕಾರಿಗಳು, ಕೆಎಲ್‌ಇ ಹೋಮಿಯೋಪಥಿಕ್ ಕಾಲೇಜಿನ ಸಿಬ್ಬಂದಿ, ವಿದ್ಯಾರ್ಥಿಗಳು, ಹೋಮ್ ನರ್ಸಿಂಗ್ ತರಬೇತಿ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಯ ಸಿಬ್ಬಂದಿ ಉಪಸ್ಥಿತರಿದ್ದರು. ಅರುಣ ನಾಗಣ್ಣವರ ನಿರೂಪಿಸಿದರು. ಡಾ.ಬಿ.ಎಸ್. ಮಹಾಂತಶೆಟ್ಟಿ ಸ್ವಾಗತಿಸಿದರು. ಸಂತೋಷ ಇತಾಪೆ ವಂದಿಸಿದರು.

Related Articles

Back to top button