Latest

ಜಿಐಟಿಯಲ್ಲಿ ಎಎಸ್ಎಮ್ಇ ವಿದ್ಯಾರ್ಥಿ ಸಂಘ ಆರಂಭ

ಇಂದಿನ ವಿದ್ಯಾರ್ಥಿಗಳಿಗೆ ಜಾಗತಿಕ ದೃಷ್ಟಿಕೋನ ಅವಶ್ಯ

ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ ಸಂಘ ಉದ್ಘಾಟಿಸಿದ ಡಾ. ಜಡೇಜಾ

    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಬೆಳೆದಂತೆ ಜಾಗತಿಕವಾಗಿ  ರಾಷ್ಟ್ರ ರಾಷ್ಟ್ರಗಳ ನಡುವಿನ ಪರಿಮಿತಿಗಳು ಕಡಿಮೆಯಾಗುತ್ತಲಿದ್ದು ಎಲ್ಲಾ ಕ್ಷೇತ್ರಗಳಲ್ಲಿ ವೇಗವಾಗಿ ಬೆಳವಣಿಗೆಗಳು ಕಂಡು ಬರುತ್ತಿವೆ. ತಾಂತ್ರಿಕ ವಿದ್ಯಾರ್ಥಿಗಳು ಜಾಗತಿಕವಾಗಿ ದೃಷ್ಟಿ ಬೀರುವ ಅವಶ್ಯಕತೆ ಇದೆ ಎಂದು ಅಮೆರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಎಂಜಿನೀರ್ಸ್ (ಎ ಎಸ್ ಎಂ ಇ) ಏಷ್ಯಾ ಪೆಸಿಫಿಕ್ ವಿಭಾಗದ ಪ್ರಾದೇಶಿಕ ಸಲಹೆಗಾರ ಡಾ. ಸಿದ್ದಾರ್ಥ್ ಸಿಂಗ್ ಜಡೆಜಾ ಅವರು ಹೇಳಿದರು.

ಬೆಳಗಾವಿಯ ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ (ಎಎಸ್ಎಮ್ ಇ) ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡುತಿದ್ದರು.

 ಇಂದಿನ ತಾಂತ್ರಿಕ ವಿದ್ಯಾರ್ಥಿಗಳು ತಮ್ಮ ಕ್ಷೇತ್ರದಲ್ಲಿ ಸಾಮಾಜಿಕವಾಗಿ ಮಹತ್ತರ ಬದಲಾವಣೆಯನ್ನು ತರಲು ಜಾಗತಿಕವಾಗಿ ಬೆಳೆಯುತ್ತಿರುವ, ಬದಲಾಗುತ್ತಿರುವ, ಅಭಿವೃದ್ಧಿ ಹೊಂದುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಗಳ ಹೊಸ ಪರಿಕಲ್ಪನೆಗಳಿಗೆ ತೆರೆದುಕೊಳ್ಳುವುದು ಅತೀ ಮುಖ್ಯವಾಗಿದೆ. ಆದರೆ ಆರ್ಥಿಕ ಸ್ಥಿತಿಯ ಕಾರಣ ಭಾರತದಂತ ರಾಷ್ಟ್ರದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ನೇರ ಪಾಲ್ಗೊಳ್ಳುವಿಕೆ ಅಥವಾ ಕಲಿಕೆ ಅಸಾಧ್ಯ. ಆದರೆ ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ (ಎಎಸ್ಎಮ್ ಇ) ಇಲ್ಲಿಂದಲೇ ವಿದ್ಯಾರ್ಥಿಗಳಿಗೆ ಜಾಗತಿಕವಾಗಿ ಬದಲಾಗುತ್ತಿರುವ ತಂತ್ರಜ್ಞಾನಗಳನ್ನೂ ಅರಿಯಲು ಸಹಾಯ ಮಾಡಿ ಸಕಾರಾತ್ಮಕ  ಬೆಳೆವಣಿಗೆಯಲ್ಲಿ ಪಾಲ್ಗೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.

ಅಮೇರಿಕನ್ ಸೊಸೈಟಿ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್ (ಎಎಸ್ಎಮ್ ಇ)ನ್ನು ಸಣ್ಣ ಕೈಗಾರಿಕೋದ್ಯಮಿಗಳು 1800ರಲ್ಲಿ ಸ್ಥಾಪಿಸಿದರು. ಇಂದು 151 ರಾಷ್ಟ್ರಗಳಲ್ಲಿ 1.30 ಲಕ್ಷ ಸದಸ್ಯರನ್ನು ಒಳಗೊಂಡ ಲಾಭರಹಿತ ಸದಸ್ಯತ್ವ ಸಂಸ್ಥೆಯಾಗಿ ಎಲ್ಲಾ ಎಂಜಿನಿಯರಿಂಗ್ ವಿಭಾಗಗಳಲ್ಲಿ ಸಹಭಾಗಿತ್ವ, ಜ್ಞಾನ ಹಂಚಿಕೆ, ವೃತ್ತಿಯ ಪುಷ್ಟೀಕರಣ ಮತ್ತು ಕೌಶಲ್ಯ ಅಭಿವೃದ್ಧಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ಜಾಗತಿಕವಾಗಿ ಸಮುದಾಯ ಜೀವನದ ಪ್ರಯೋಜನಕ್ಕಾಗಿ ಅನೇಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತ ಬಂದಿದೆ ಎಂದು ಹೇಳಿದರು.

ಜಿಐಟಿ ಪ್ರಾಂಶುಪಾಲ ಡಾ. ಆನಂದ. ಎಸ್. ದೇಶಪಾಂಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಜಯಂತ್ ಕಿತ್ತೂರ್ ಸ್ವಾಗತಿಸಿದರು. ಸಂಯೋಜಕ ಪ್ರೊ. ಹರ್ಷಿತ್ ಕುಲಕರ್ಣಿ ವಿದ್ಯಾರ್ಥಿ ಸಂಘದ ಮುನ್ನೋಟವನ್ನು ಓದಿದರು. ವಿದ್ಯಾರ್ಥಿ ಪ್ರತಿನಿಧಿ ರೋಹಿತ್ ಗುರವ್ ಅತಿಥಿಗಳನ್ನು ಪರಿಚಯಿಸಿದರು. ಸಮನ್ ಕಿಲ್ಲೇದಾರ್ ವಂದಿಸಿದರು. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button