ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸ್ಮಾರ್ಟ್ ಸಿಟಿ ಯೋಜನೆಯ ಕುರಿತು ತರಬೇತಿಗೆಂದು ಮೈಸೂರಿಗೆ ತೆರಳಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರು ಮಂಗಳವಾರ ಸಂಜೆ ವಾಪಸ್ ಹೊರಟಿದ್ದು, ಬುಧವಾರ ಬೆಳಗಿನಜಾವ ಬೆಳಗಾವಿ ತಲುಪಲಿದ್ದಾರೆ.
8 ಮಹಿಳಾ ಸದಸ್ಯರು ಸೇರಿ ಮೇಯರ್ ನೇತೃತ್ವದಲ್ಲಿ ಒಟ್ಟೂ 28 ಸದಸ್ಯರು ಮೈಸೂರಿಗೆ ತೆರಳಿದ್ದರು. ಸ್ಮಾರ್ಟ್ ಸಿಟಿ ಯೋಜನೆಯ ಮೊದಲ ಹಂತದಲ್ಲಿ ಆಯ್ಕೆಯಾಗಿರುವ ಬೆಳಗಾವಿ ಮತ್ತು ದಾವಣಗೆರೆಯ ಪಾಲಿಕೆ ಸದಸ್ಯರಿಗೆ ಈ ತರಬೇತಿ ಆಯೋಜಿಸಲಾಗಿತ್ತು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಜಾರಿಗೊಳಿಸಬಹುದಾದ ಯೋಜನೆಗಳ ಕುರಿತು ಅರಿವು ಮೂಡಿಸುವ ಜೊತೆಗೆ ಪೊಲೀಸ್ ಮತ್ತು ರಸ್ತೆ ಸಾರಿಗೆ ಸಂಸ್ಥೆಯ ನಿಯಂತ್ರಣ ಕೊಠಡಿಗಳ ಕಾರ್ಯವೈಖರಿ ಕುರಿತು ಸಹ ಮಾಹಿತಿ ನೀಡಲಾಯಿತು.
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹಾಕಿಕೊಂಡಿರುವ ಹಲವಾರು ಮಾದರಿ ಯೋಜನೆಗಳ ಕುರಿತೂ ತಿಳಿವಳಿಕೆ ನೀಡಲಾಯಿತು. ಇದಲ್ಲದೆ ಮೈಸೂರು ಮಹಾನಗರ ಪಾಲಿಕೆಗೆ ತೆರಳಿ ಪಾಲಿಕೆಯ ಆದಾಯ ಮತ್ತು ಬಳಕೆ ಕುರಿತು ಮಾಹಿತಿ ಪಡೆದರು.
ತರಬೇತಿಯ ನಂತರ ಚಾಮುಂಡಿಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದ ಸದಸ್ಯರು ಸಂಜೆ ಬೆಳಗಾವಿಯತ್ತ ಪ್ರಯಾಣ ಬೆಳೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ