Latest

ನೀರಾವರಿ ಜಮೀನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ! ಇದು ಯಾವ ಸೀಮೆ ನ್ಯಾಯ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ರೈತರು ಕಳೆದ ನೂರಾರು ವರ್ಷಗಳಿಂದ ಜೀವನೋಪಾಯ ಮಾಡಿಕೊಂಡು ಬಂದಿರುವ ನೀರಾವರಿ ಜಮೀನಿನ ಮೇಲೆ ಅದು ಹೇಗೆ ಅಧಿಕಾರಿಗಳ ಕಣ್ಣು ಬಿತ್ತೋ ಗೊತ್ತಿಲ್ಲ. ಅದರಲ್ಲೂ ಊರಿನ ಮಧ್ಯೆ, ಸುವರ್ಣ ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಅತ್ಯಂತ ಸಮೃದ್ಧವಾದ ಜಮೀನು. ಇಂತಹ ಪ್ರದೇಶವನ್ನು ಜಿಲ್ಲಾಡಳಿತ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಆಯ್ಕೆ ಮಾಡಿದೆ!

ಬೆಳಗಾವಿ ನಗರದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಎಲ್ಲಿ ನಿರ್ಮಾಣ ಮಾಡಬೇಕೆನ್ನುವ ವಿವಾದ ಕಳೆದ ಹಲವಾರು ವರ್ಷದಿಂದ ಇದೆ. ಆದರೆ ಊರ ಹೊರಗೆ ಮಾಡಬೇಕಾದ ಇಂತಹ ಘಟಕಕ್ಕೆ ಹಲಗಾದ ಜನವಸತಿ ಪ್ರದೇಶವನ್ನು ಹೇಗೆ ಆಯ್ಕೆ ಮಾಡಲಾಗಿದೆ ಎನ್ನುವುದೇ ಯಕ್ಷ ಪ್ರಶ್ನೆ.

ಈ ಜಮೀನು ವಶಪಡಿಸಿಕೊಳ್ಳುವುದಕ್ಕೆ ರೈತರು ತೀವ್ರವಾಗಿ ವಿರೋಧಿಸಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗಟ್ಟಿಯಾಗಿ ರೈತರ ಪರ ನಿಂತಿದ್ದಾರೆ. ಕೆಲ ತಿಂಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯ ವೇಳೆಯೂ ಲಕ್ಷ್ಮಿ ಹೆಬ್ಬಾಳಕರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಗ ಜಿಲ್ಲಾ ಉಸ್ತುವಾರಿ ಸಚಿವರು, ಇದಕ್ಕೊಂದು ಸಮಿತಿ ರಚನೆ ಮಾಡಿ ಜಾಗ ಅಂತಿಮ ಮಾಡೋಣ ಎಂದಿದ್ದರು.

ಆದರೆ ನಿನ್ನೆ ಏಕಾ ಏಕಿ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಹೋಗಿದ್ದಾರೆ. ರೈತರು ಪ್ರತಿಭಟನೆಗಿಳಿದಾಗ ವಾಪಸ್ಸಾಗಿದ್ದಾರೆ. ಇಂದು ಪುನಃ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಬಲದೊಂದಿಗೆ ಹೋಗಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕಾಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿದ್ದಾರೆ. ಹಾಗಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪುತ್ರ ಮೃಣಾಲ ಹೆಬ್ಬಾಳಕರ್ ರೈತರ ಪರವಾಗಿ, ರೈತರೊಂದಿಗೆ ಪ್ರತಿಭಟನೆಗಿಳಿದಿದ್ದಾರೆ.

ಉಪವಿಭಾಗಾಧಿಕಾರಿ, ತಹಸಿಲ್ದಾರ ಸೇರಿದಂತೆ ಬಂದ ಅಧಿಕಾರಿಗಳ ಬಳಿ, ಶಾಸಕರು ಬಂದ ನಂತರ ಸಭೆ ನಡೆಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಮೃಣಾಲ್ ವಿನಂತಿಸಿದ್ದಾರೆ. ಆದರೆ ಅದಕ್ಕೆ ಒಪ್ಪದ ಅಧಿಕಾರಿಗಳು ಭೂ ಸ್ವಾಧೀನಕ್ಕೆ ಮುಂದಾದರು. ಆಗ ತೀವ್ರ ಪ್ರತಿಭಟನೆಗೆ ಮುಂದಾದ ಮೃಣಾಲ್ ಮತ್ತು 15ಕ್ಕೂ ಹೆಚ್ಚು ರೈತರನ್ನು ಪೊಲೀಸರು ವಶಕ್ಕೆ ಪಡೆದು ಎಪಿಎಂಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

19 ಎಕರೆ ಜಮೀನು:

ತ್ಯಾಜ್ಯ ವಿಲೇವಾರಿ ಘಟಕಕ್ಕಾಗಿ ಸುಮಾರು 19 ಎಕರೆ ಜಮೀನನ್ನು ಗುರುತಿಸಲಾಗಿದೆ. ಇದು ನೀರಾವರಿ ಜಮೀನು. ಜನವಸತಿ ಪ್ರದೇಶದ ಹತ್ತಿರದಲ್ಲೇ ಇದೆ. ರೈತರಿಗೆ ಅತ್ಯಂತ ಕಡಿಮೆ ಪರಿಹಾರದ ಪ್ರಸ್ತಾವನೆ ಇಡಲಾಗಿದೆ. 

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆರಂಭದಿಂದಲೂ ಹಲಗಾದ ರೈತರ ಜಮೀನಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಅವರ ವಿರೋಧಕ್ಕೆ 3 ಕಾರಣಗಳಿವೆ. ಒಂದು ಫಲವತ್ತಾದ ಭೂಮಿ ವಶಪಡಿಸಿಕೊಳ್ಳುವುದು ಸರಿಯಲ್ಲ ಎನ್ನುವುದು. ಎರಡನೆಯದು ಜನವಸತಿ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣೆ ಸರಿಯಲ್ಲ ಎನ್ನುವುದು. ಮೂರನೆಯದು ಸುವರ್ಣ ವಿಧಾನಸೌಧದ ಹತ್ತಿರ ಇಂತಹ ಘಟಕ ಬೇಡ ಎನ್ನುವುದು.

ಈ ಹಿಂದೆ ಅವರು ವಿರೋಧ ಎತ್ತಿದಾಗ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈ ಬಗ್ಗೆ ಸಮಿತಿ ರಚನೆ ಮಾಡಿ ಎಲ್ಲಿ ತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪಿಸಬೇಕೆನ್ನುವ ಕುರಿತು ನಿರ್ಧರಿಸೋಣ ಎಂದಿದ್ದರು. ಆದರೆ ಅಂತಹ ಸಮಿತಿ ಆಗಲೇ ಇಲ್ಲ. ಈಗ ಏಕಾ ಏಕಿ ಭೂ ಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗಿದೆ. 

ಕಾಣದ ಕೈಗಳು ಕೆಲಸ ಮಾಡುತ್ತಿವೆ:  ಹೆಬ್ಬಾಳಕರ್

ಯಾವುದೇ ಕಾರಣದಿಂದ ರೈತರ ಫಲವತ್ತಾದ ಜಮೀನಿನಲ್ಲಿ ತ್ಯಾಜ್ಯ ವಿಲೇವಾಗಿ ಘಟಕಕ್ಕೆ ಅವಕಾಶ ಕೊಡುವುದಿಲ್ಲ. ಬೇರೆ ಎಲ್ಲಾದರೂ ಮಾಡಲಿ, ಇಲ್ಲಿ ಮಾತ್ರ ಮಾಡಲು ಕೊಡುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳಕರ್ ಖಡಾಖಂಡಿತವಾಗಿ ಹೇಳಿದ್ದಾರೆ.

ಜಿಲ್ಲಾಡಳಿತದ ಈ ದಿಢೀರ್ ನಿರ್ಧಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ. ನಾನು ಊರಲ್ಲಿ ಇಲ್ಲದಿರುವಾಗ ಈ ಕ್ರಮ ಏಕೆ ಎಂದು ಅವರು ಪ್ರಶ್ನಿಸಿದ್ದಾರೆ. ತಕ್ಷಣ ಜಿಲ್ಲಾಡಳಿತ ಈ ನಿರ್ಧಾರದಿಂದ ಹಿಂದೆ ಸರಿಯಬೇಕು. ಹೇಗಾದರೂ ಸರಿ, ನಾನು ಹಲಗಾ ರೈತರ ಜಮಾಮಿನಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಆಗಲು ಬಿಡುವುದಿಲ್ಲ ಎಂದು ಹೆಬ್ಬಾಳಕರ್ ಸ್ಪಷ್ಟವಾಗಿ ಹೇಳಿದ್ದಾರೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button