ಪ್ರಗತಿವಾಹಿನಿ ಸುದ್ದಿ, ಸುವರ್ಣ ವಿಧಾನ ಸೌಧ, ಬೆಳಗಾವಿ
ವರ್ಣಾ ಜಲಾಶಯದಿಂದ ಕರ್ನಾಟಕ ರಾಜ್ಯಕ್ಕೂ ಹಾಗೂ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರ ರಾಜ್ಯಕ್ಕೂ ನೀರು ಬಿಡುಗಡೆ ಕುರಿತು ಕಾರ್ಯ ವಿಧಾನ ನಿರ್ಧರಿಸಲು ಎರಡು ರಾಜ್ಯದ ಜಲಸಂಪನ್ಮೂಲ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಒಂದು ಜಂಟಿ ಸಮಿತಿಯನ್ನು ಈಗಾಗಲೇ ರಚಿಸಿರುವುದರಿಂದ ಮತ್ತು ಇಂತಹ ನೀರಿನ ಬಿಡುಗಡೆ ಬೇಡಿಕೆ ಪ್ರತಿ ವರ್ಷ ಬರುವ ಸಾಧ್ಯತೆ ಇಲ್ಲದೇ ಇರುವುದರಿಂದ ಮಹಾರಾಷ್ಟ್ರದೊಂದಿಗೆ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳುವುದು ಸಮಂಜವಾಗಿರುವುದಿಲ್ಲ. ಇಂತಹ ಬೇಡಿಕೆ ವರ್ಷದಲ್ಲಿ ಬಂದಂತಹ ಪ್ರಸ್ತಾವನೆಯನ್ನು ಜಂಟಿ ಸಮಿತಿಯ ಮುಂದೆ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಬಹುದಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ ಅವರು ಇಂದು ತಿಳಿಸಿದರು.
ವಿಧಾನ ಪರಿಷತ್ತಿನ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು ಉತ್ತರ ಕರ್ನಾಟಕದ ಬರಗಾಲ ಪೀಡಿತ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಕೃಷ್ಣಾ ನದಿಗೆ ಮಹಾರಾಷ್ಟ್ರ ರಾಜ್ಯದಿಂದ ನಾಲ್ಕು ಟಿ.ಎಂ.ಸಿ ನೀರನ್ನು ಪ್ರತಿವರ್ಷ ನೀಡುವ ಬೇಡಿಕೆಯನ್ನು ಪೂರೈಸುವ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಸೊಲ್ಲಾಪೂರ ಮತ್ತು ಜಿತ್ ಭಾಗಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ೪ ಟಿ.ಎಂ.ಸಿ ನೀರನ್ನು ಹಂಚಿಕೆ ಮಾಡುವ ವಿಚಾರವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ನಡುವೆ ಶಾಶ್ವತ ಒಡಂಬಡಿಕೆ ಮಾಡಿಕೊಳ್ಳುವ ವಿಷಯ ಕುರಿತಂತೆ ನಿಯಮ ೭೨ ರ ಅಡಿಯಲ್ಲಿ ನೀಡಿರುವ ಸೂಚನೆಗೆ ಭಾರಿ ಮತ್ತು ಮಧ್ಯಮ ನೀರಾವರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಅವರ ಪರವಾಗಿ ಸಚಿವ ಕೃಷ್ಣಬೈರೇಗೌಡ ಅವರು ಉತ್ತರಿಸಿದರು.
ಮಹಾರಾಷ್ಟ್ರ ರಾಜ್ಯದಿಂದ ಪ್ರತಿವರ್ಷ ನೀರು ಬಿಡುವ ಮತ್ತು ಕರ್ನಾಟಕದಿಂದ ಅದೇ ರೀತಿಯಾಗಿ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರ ಭಾಗಕ್ಕೆ ನೀರು ಪೂರೈಸುವ ಬೇಸಿಗೆ ಕಾಲದಲ್ಲಿ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯದ ನದಿ ಪಾತ್ರದಲ್ಲಿ ಹಾಗೂ ಕಾಲುವೆ ಜಾಲದಲ್ಲಿ ನೀರಿನ ಹರಿವು ಇರದೇ ಇರುವುದರಿಂದ ನೀರು ಹರಿಸುವ ಪ್ರಮಾಣದಲ್ಲಿ ಯಾವುದೇ ನಷ್ಟವಿಲ್ಲದೆ ಹರಿಸುವುದು ಸಾಧ್ಯವಾಗುವುದಿಲ್ಲ. ಆದುದರಿಂದ ಮಹಾರಾಷ್ಟ್ರ ಗಡಿ ಭಾಗದಲ್ಲಿ ನೀಡಬೇಕಾದ ನೀರಿನ ಪ್ರಮಾಣವು ಪರಿವರ್ತನಾ ನಷ್ಟವನ್ನು ಸೇರಿಸಿಕೊಂಡು ಹರಿಸಬೇಕಾಗುತ್ತದೆ.
ಆಲಮಟ್ಟಿ ಜಲಾಶಯದ ಮೇಲ್ಬಾಗದಲ್ಲಿ ಬರುವ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಬೇಸಿಗೆ ಕಾಲದಲ್ಲಿ ಅವಶ್ಯಕವಿರುವ ನೀರನ್ನು ಬಿಡುಗಡೆ ಮಾಡುವಂತೆ ಕಳೆದ ಹತ್ತು ವರ್ಷಗಳಲ್ಲಿ ಸುಮಾರು ಐದು ಬಾರಿ ಮಹಾರಾಷ್ಟ್ರ ಸರ್ಕಾರವನ್ನು ಕೋರಲಾಗಿತ್ತು. ಅದರಂತೆ ಮಹಾರಾಷ್ಟ್ರ ರಾಜ್ಯದ ಸೋಲ್ಲಾಪೂರ ಮತ್ತು ಅಕ್ಕಲಕೋಟೆ ಪಟ್ಟಣಗಳ ಕುಡಿಯುವ ನೀರಿನ ಪೂರೈಕೆ ಬೇಡಿಕೆ ಇದೆ. ಈ ರೀತಿ ಕರ್ನಾಟಕ ರಾಜ್ಯದಿಂದ ಒಂದು ಟಿ.ಎಂ.ಸಿಯಿಂದ ಮೂರು ಟಿ.ಎಂ.ಸಿ ವರೆಗೆ ನೀರನ್ನು ಬಿಡುಗಡೆ ಮಾಡಲು ಮಹಾರಾಷ್ಟ್ರ ರಾಜ್ಯವನ್ನು ಕೋರಲಾಗಿತ್ತು. ಇದಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ರಾಜ್ಯವು ಒಂದು ಟಿ.ಎಂ.ಸಿ ಯಿಂದ ಎರಡೂವರೆ ಟಿಎಂಸಿವರೆಗೆ ನೀರನ್ನು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ ಸರ್ಕಾರವು ಕರ್ನಾಟಕ ರಾಜ್ಯದ ಬರಗಾಲ ಪೀಡಿತ ಗಡಿ ಪ್ರದೇಶಗಳಿಗೆ ವರ್ಣಾ ಜಲಾಶಯದಿಂದ ಅವಶ್ಯವಿರುವ ಕುಡಿಯುವ ನೀರು ಬಿಡುಗಡೆ ಮಾಡುವ ಕುರಿತು ಹಾಗೂ ಆಲಮಟ್ಟಿ ಜಲಾಶಯದಿಂದ ಮಹಾರಾಷ್ಟ್ರ ರಾಜ್ಯದ ಸೋಲಾಪುರ ಮತ್ತು ಅಕ್ಕಲಕೋಟೆ ಪಟ್ಟಣಗಳಿಗೆ ಅವಶ್ಯವಿರುವ ನೀರಿನ ಬಿಡುಗಡೆ ಮಾಡುವ ಕುರಿತು ಕಾರ್ಯವಿಧಾನ ನಿರ್ಧರಿಸಲು ಎರಡು ರಾಜ್ಯದ ಜಲಸಂಪನ್ಮೂಲ ಪ್ರಧಾನ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ೨೦೧೪ ರಲ್ಲಿ ಜಂಟಿ ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ