Latest

ಬಸವಣ್ಣನವರನ್ನು ಸಂಗೀತದ ನೆಲೆಯಲ್ಲಿಯೂ ಅಭ್ಯಸಿಸುವುದು ಅಗತ್ಯ: ಶಿರೀಷ ಜೋಶಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಹನ್ನೆರಡನೆಯ ಶತಮಾನದಲ್ಲಿ ಅಣ್ಣ ಬಸವಣ್ಣನವರು ಜಾತಿ ಮತ ವರ್ಗ ವ್ಯವಸ್ಥೆಯಲ್ಲಿ ಸಮಾನತೆಗಾಗಿ ಹೋರಾಡಿದ್ದು ನಮಗೆಲ್ಲ ತಿಳಿದ ಸಂಗತಿ. ಅಂತೆಯೇ ಅವರ ವಚನಗಳಲ್ಲಿ ಸಂಗೀತದ ಹಲವಾರು ವಿವರಗಳು ದೊರೆಯುತ್ತವೆ. ಅವರು ಒಬ್ಬ ಅಪ್ಪಟ ಸಂಗೀತ ತಜ್ಞರಾಗಿದ್ದರು ಎಂದು ಸಾಹಿತಿ ಶಿರೀಷ ಜೋಶಿ ನುಡಿದರು.
ಬೆಳಗಾವಿ ಜಿಲಾ ಘಟಕ ಅಖಿಲ ಭಾರತ ವೀರಶೈವ ಮಹಾಸಭೆ ವತಿಯಿಂದ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅನುಭಾವ ಗೋಷ್ಠಿಯ ’ಬಸವಣ್ಣನವರ ಬತ್ತೀಸ ರಾಗಗಳು’ ಚಿಂತನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಸವಣ್ಣನವರನ್ನು ಸಂಗೀತದ ನೆಲೆಯಲ್ಲಿಯೂ ಅಭ್ಯಸಿಸುವುದು ಅಗತ್ಯವಾಗಿದೆ. ಜಾತಿ ಮತಗಳನ್ನು ತೊಡೆದು ಹಾಕಿದ ಬಸವಣ್ಣನವರು ಸಂಗೀತದ ಬಗ್ಗೆಯೂ ಅಪಾರ ಜ್ಞಾನ ಹೊಂದಿದ್ದರು. ’ಆನು ಒಲಿದಂತೆ ಹಾಡುವೆನಯ್ಯ’, ’ಎನ್ನ ಶಿರವರ ದಂಡಿಗೆಯ ಮಾಡಯ್ಯ’ ’ಲಕ್ಷೆಪಲಕ್ಷ ವಚನಗಳ ಹಾಡಿದನಯ್ಯ’ ಹೀಗೆ ಹಲವಾರು ವಚನಗಳಲ್ಲಿ ಅವರ ಸಂಗೀತದ ಅಭಿರುಚಿಯನ್ನು ಗಮನಿಸಬಹುದಾಗಿದೆ. ಅಂದಿನ ಕಾಲದಲ್ಲಿ ಅಣ್ಣನವರು ಸಂಗೀತದ ವಿವಿಧ ರಾಗಗಳ ಬಗ್ಗೆ ಅಮೂಲಾಗ್ರವಾದ ಜ್ಞಾನ ಹೊಂದಿದ್ದರು. ಮಾತ್ರವಲ್ಲದೆ ಅವರ ಸಮಕಾಲೀನ ವಚನಕಾರರು ಹಲವಾರು ಸಂಗೀತದ ರಾಗಗಳನ್ನು ಕುರಿತು ಪ್ರಸ್ತಾಪಿಸಿದ್ದುಂಟು. ಸಂಗೀತದಲ್ಲಿದ್ದ ಹಲವಾರು ನಿಯಮ ನಿರ್ಬಂಧನೆಗಳನ್ನು ಬದಿಗೆ ಸರಿಸಿ ಜನಸಾಮಾನ್ಯರ ಆವರಣದಲ್ಲಿ ತರುವ ಪ್ರಯತ್ನ ಬಸವಣ್ಣನವರಾಗಿರಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ವೈ.ಎಸ್. ಪಾಟೀಲ, ಮಹಾಸಭೆ ಹಲವಾರು ಚಿಂತನ ಪರ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಯುವಜನಾಂಗದಲ್ಲಿ ಬಸವಣ್ಣನವರ ಸಂದೇಶಗಳನ್ನು ಬಿತ್ತರಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಡಾ.ಎಫ್.ವಿ. ಮಾನ್ವಿ, ಡಾ. ಬಸವರಾಜ ಜಗಜಂಪಿ, ಡಾ. ಗುರುದೇವಿ ಹುಲೆಪ್ಪನವರಮಠ ಉಪಸ್ಥಿತರಿದ್ದರು. ಶಂಕರ ಚೊಣ್ಣದ ಪ್ರಾರ್ಥಿಸಿದರು. ನ್ಯಾಯವಾದಿ ವಿ.ಕೆ. ಪಾಟೀಲ ಸ್ವಾಗತಿಸಿದರು. ಡಾ. ಮಹೇಶ ಗುರನಗೌಡರ ಪರಿಚಯಿಸಿದರು. ಆಶಾ ಯಮಕನಮರಡಿ ನಿರೂಪಿಸಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button