Latest

ಬೆಳಗಾವಿ ಕ್ಷೇತ್ರಕ್ಕೆ 7152 ಬ್ಯಾಲೆಟ್ ಯೂನಿಟ್‌ ಕೊರತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟಾರೆ 57 ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಇನ್ನೂ 7152 ಬ್ಯಾಲೆಟ್ ಯೂನಿಟ್‌ಗಳನ್ನು ಪೂರೈಸುವಂತೆ ಕೋರಿ ಚುನಾವಣಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ

ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ವಿಶಾಲ್ ಆರ್. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಅಭ್ಯರ್ಥಿಗಳ ಹಾಗೂ ಚುನಾವಣಾ ಏಜೆಂಟರುಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಗತ್ಯವಿರುವ ಯೂನಿಟ್‌ಗಳು ಪೂರೈಕೆ ಆದ ತಕ್ಷಣವೇ ಮಾನ್ಯತೆ ಪಡೆದಿರುವ ನೋಂದಾಯಿತ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಿಯಮಾವಳಿ ಪ್ರಕಾರ ಮೊದಲ ಮತ್ತು ದ್ವಿತೀಯ ಹಂತದ ರ್‍ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಲಾಗುವುದು ಎಂದು ವಿವರಿಸಿದರು.
ಚುನಾವಣೆ ಸಂದರ್ಭದಲ್ಲಿ ಯಾವುದೇ ಅಭ್ಯರ್ಥಿಗಳು ಜಾತಿ-ಧರ್ಮದ ಆಧಾರದ ಮೇಲೆ ಮತಯಾಚನೆ ಮಾಡಿದರೆ ಅಥವಾ ಹಣ, ಮತ್ತಿತರ ಆಮಿಷವೊಡ್ಡಿದರೆ ಅಂಥವರ ವಿರುದ್ದ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಪ್ರಚಾರಕ್ಕೆ ಅವಕಾಶವಿದೆ. ಪ್ರಚಾರಕ್ಕೆ ಲಭ್ಯವಿರುವ ಸಾರ್ವಜನಿಕ ಮೈದಾನ ಅಥವಾ ಸ್ಥಳಗಳನ್ನು ಎಲ್ಲ ಪಕ್ಷಗಳಿಗೆ ಸಮಾನವಾಗಿ ಒದಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಪ್ರಚಾರಕ್ಕೆ ಅನುಮತಿ ಪಡೆದುಕೊಂಡಿರುವ ಅಭ್ಯರ್ಥಿಗಳು ತಮ್ಮ ಬಗ್ಗೆ ಮಾತ್ರ ಪ್ರಚಾರ ಮಾಡಲು ಅವಕಾಶವಿದ್ದು, ಇನ್ನೊಬ್ಬರ ಕುರಿತು ಪ್ರಚಾರ ಕೈಗೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚುನಾವಣಾ ವೀಕ್ಷಕ ರಾಜೀವ ಚಂದ್ರ ದುಬೆ, ಚುನಾವಣಾ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನು ಗಮನಿಸಲಾಗುತ್ತಿದ್ದು, ಯಾವುದೇ ದೂರುಗಳಿದ್ದರೆ ಅಥವಾ ಲೋಪದೋಷ ಕಂಡುಬಂದರೆ ನೇರವಾಗಿ ತಮ್ಮ ಗಮನಕ್ಕೂ ತರಬಹುದು ಎಂದು ಹೇಳಿದರು. ಪಕ್ಷೇತರ ಅಭ್ಯರ್ಥಿಗಳು, ವಿವಿಧ ಪಕ್ಷಗಳ ಚುನಾವಣಾ ಏಜೆಂಟರು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button