ಪ್ರಗತಿವಾಹಿನಿ ಸುದ್ದಿ, ಬೆಂಗಳೂರು/ನವದೆಹಲಿ
ರಾಜ್ಯ ರಾಜಕೀಯ ಸಂಕ್ರಾಂತಿಯ ಸಂದರ್ಭದಲ್ಲಿ ತೀವ್ರ ಗೊಂದಲ ಸ್ಥಿತಿಗೆ ತಲುಪಿದ್ದು, ಎಲ್ಲಿ ಏನಾಗುತ್ತಿದೆ ಎಂದು ಹೇಳುವ ಸ್ಥಿತಿಯಲ್ಲಿ ಯಾರೂ ಇಲ್ಲ.
ಕಾಂಗ್ರೆಸ್ ನ ಹಲವು ಶಾಸಕರು ಹಾಗೂ ಪಕ್ಷೇತರ ಶಾಸಕರು ಯಾರ ಸಂಪರ್ಕಕ್ಕೂ ಸಿಗದೆ ಓಡಾಡುತ್ತಿದ್ದರೆ, ಬಿಜೆಪಿ ಶಾಸಕರು ನವದೆಹಲಿಯಲ್ಲಿ ಹೈಕಮಾಂಡ್ ಬಂಧನದಲ್ಲಿರುವಂತಿದೆ. ಇದರಿಂದಾಗಿ ಬಿಜೆಪಿಯಿಂದ ಆಪರೇಶನ್ ಕಮಲ ನಡೆಯುತ್ತಿದೆ ಎನ್ನುವ ಸಂಶಯಕ್ಕೆ ಮತ್ತಷ್ಟು ಪುಷ್ಟಿ ದೊರಕಿದೆ.
ಕಾಂಗ್ರೆಸ್ ಶಾಸಕರಾದ ರಮೇಶ ಜಾರಕಿಹೊಳಿ, ಉಮೇಶ ಜಾಧವ, ಶಿವರಾಮ ಹೆಬ್ಬಾರ, ಆನಂದ ಸಿಂಗ್ ಮೊದಲಾದವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗುತ್ತಿದ್ದು, ಪಕ್ಷೇತರರಾದ ನಾಗೇಶ್ ಕೂಡ ಎಲ್ಲಿದ್ದಾರೆ ಎನ್ನುವುದು ತಿಳಿಯುತ್ತಿಲ್ಲ.
ಮುಂಬೈ ಮತ್ತು ನವದೆಹಲಿಯಲ್ಲಿ ಬಿಜೆಪಿಯ ಕೆಲವು ಮುಖಂಡರು ಆಪರೇಶನ್ ಕಮಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಇಂದು ಸಂಜೆ ಅಥವಾ ನಾಳೆ ವೇಳೆಗೆ ಎಲ್ಲವೂ ಅಂತಿಮವಾಗಲಿದೆ ಎನ್ನುವ ವದಂತಿ ಹರಡಿದೆ.
ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ, ಆಪರೇಶನ್ ಮಾಡೋಕೆ ಬಿಜೆಪಿ ಯತ್ನ ನಡೆಸುತ್ತಿದೆ. ಯಾರ್ಯಾರು ಎಲ್ಲೆಲ್ಲಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ, ಆಪರೇಶನ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಈ ಮಧ್ಯೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸೋಮವಾರ ಬೆಳಗ್ಗೆ ಬೆಂಗಳೂರಿನಲ್ಲಿ ಶಾಸಕರಿಗೆ ಉಪಹಾರ ಕೂಟ ಏರ್ಪಡಿಸಿದ್ದರು.
ಆದರೆ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ, ನಾವು ಯಾವುದೇ ಆಪರೇಶನ್ ಮಾಡುತ್ತಿಲ್ಲ. ಕಾಂಗ್ರೆಸ್-ಜೆಡಿಎಸ್ ನಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತಿಲ್ಲ. ನಾವು ಯಾರನ್ನೂ ಸಂಪರ್ಕಿಸಿಲ್ಲ. ಅವರೇ ನಮ್ಮವರನ್ನು ಸಂಪರ್ಕಿಸಿ ಆಮಿಷ ಒಡ್ಡುತ್ತಿದ್ದಾರೆ. ಕುಮಾರಸ್ವಾಮಿಯವರೇ ಅಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಮುಖಂಡ ಈಶ್ವರಪ್ಪ, ಕಾಂಗ್ರಸ್ ಅತೃಪ್ತ ಶಾಸಕರು ಅಲ್ಲಿಂದ ಹೊರಗೆ ಬಂದ ಮೇಲೆ ನಾವು ಯೋಚಿಸುತ್ತೇವೆ. ಈಗ ನಾವು ಏನನ್ನೂ ಮಾಡುತ್ತಿಲ್ಲ. ಪಕ್ಷದ ಮುಖಂಡರು ಹೋಗಬೇಡಿ ಎಂದಿದ್ದರಿಂದ ನವದೆಹಲಿಯಲ್ಲೇ ಇದ್ದೇವೆ. ಅವರು ಹೋಗಿ ಎಂದ ಮೇಲೆ ಬೆಂಗಳೂರಿಗೆ ಹೋಗುತ್ತೇವೆ ಎಂದಿದ್ದಾರೆ.
ಒಟ್ಟಾರೆ ಸಂಕ್ರಾಂತಿಯ ಸಂದರ್ಭದಲ್ಲಿ ದೊಡ್ಡ ಕ್ರಾಂತಿ ನಡೆಯಲಿದೆ ಎನ್ನುವ ದಟ್ಟ ವದಂತಿಯಿಂದಾಗಿ ರಾಜ್ಯದಲ್ಲಿ ಗೊಂದಲ ಮೂಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ