ಪ್ರಗತಿವಾಹಿನಿ ಸುದ್ದಿ, ಚನ್ನಮ್ಮ ಕಿತ್ತೂರು
ಕಳೆದ 20 ವರ್ಷಗಳಿಂದ ಸ್ಮರಣೋತ್ಸವ ಸಮಿತಿ ಮೂಲಕ ರಾಯಣ್ಣ ವೀರ ಜ್ಯೋತಿಯನ್ನು ನಂದಗಡದಿಂದ ಬೈಲಹೊಂಗಲಕ್ಕೆ ಪ್ರತಿವರ್ಷ ತರುತ್ತಿರುವ ಕಾರ್ಯ ಶ್ಲಾಘನೀಯವೆಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.
ಸಂಗೊಳ್ಳಿ ರಾಯಣ್ಣನ 188 ನೇ ಪುಣ್ಯತಿಥಿ ಅಂಗವಾಗಿ ಬೈಲಹೊಂಗಲದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿಯ ಆಶ್ರಯದಲ್ಲಿ ಶನಿವಾರ ನಂದಗಡದಿಂದ ತರುವ ರಾಯಣ್ಣನ ವೀರ ಜ್ಯೋತಿಯನ್ನು ಮಾರ್ಗ ಮಧ್ಯ ಕಿತ್ತೂರಿನ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾ ವೃತ್ತದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ರಾಯಣ್ಣ ಹೋರಾಟ ಮಾಡಿದಂತೆ ದೇಶದ ಭದ್ರತೆಗಾಗಿ ಯುವಕರು ರಾಯಣ್ಣನ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ಮುಂದಿನ ಯುವ ಜನಾಂಗಕ್ಕೆ ಒಳ್ಳೆಯ ಸಂದೇಶವನ್ನು ಸಾರುವುದು ಹಿರಿಯರ ಕರ್ತವ್ಯವಾಗಿದ್ದು, ಇಂದಿನ ಪೀಳಿಗೆಗೆ ತ್ಯಾಗ ಬಲಿದಾನದ ಮಹತ್ವವನ್ನು ಸಾರುತ್ತಿರುವುದು ಮಾದರಿಯಾಗಿದೆ ಎಂದರು.
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಗೂ ಎಲ್ಲ ಶಾಲೆಗಳಲ್ಲಿ ಚನ್ನಮ್ಮಾಜಿಯ ಹಾಗೂ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಅಳವಡಿಸಬೇಕೆಂದು ಆಗ್ರಹಿಸಿದ ಅವರು, ಬಹಳ ದಿನಗಳಿಂದ ನೆನೆಗುದಿಗೆ ಬಿದಿದ್ದ ಬೈಲಹೊಂಗಲದ ರಾಯಣ್ಣ ಮೂರ್ತಿಯನ್ನು ಇಂದು ಲೋಕಾರ್ಪಣೆ ಮಾಡಲಾಗುತ್ತಿದೆ. ಇದರ ಬೆನ್ನೆಲುಬಾಗಿ ನಿಂತ ಬೈಲಹೊಂಗಲದ ಎಲ್ಲ ಸಂಘಟನೆಯ ಕಾರ್ಯಕರ್ತರಿಗೂ ಅಭಿನಂದನೆ ಸಲ್ಲಿಸಿದರು.
ಕಲಾವಿದ ಸಿ.ಕೆ.ಮೆಕ್ಕೆದ ಮಾತನಾಡಿ, ಚನ್ನಮ್ಮಾಜಿ ಕೋಟೆ ಸೇರಿದಂತೆ ಸಂಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಸ್ಮಾರಕಗಳ ಅಭಿವೃದ್ಧಿಗೆ ಜನಪ್ರತಿನಿದಿಗಳ ಮೇಲೆ ಒತ್ತಡ ತಂದು ಸಂರಕ್ಷಿಸಲು ಮುಂದಾಗೋಣ ಸಮೀತಿಯ ಮೂಲಕ ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಹೇಳಿದರು.
ಕಿನಾವಿವ ಸಂಘದ ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ಬಸನಗೌಡ ಶಿದ್ರಾಮಣಿ ಮಾತನಾಡಿದರು.
ತಹಶೀಲ್ದಾರ ಆರ್.ಎಸ್.ಮಾನೆ, ಸ್ಮರಣೋತ್ಸವ ಸಮೀತಿ ಅಧ್ಯಕ್ಷ ರಾಜು ಸೊಗಲದ, ಕುಮಾರ ದೇಶನೂರ, ಈಶ್ವರ ಹೋಟಿ, ಸೋಮನಾಥ ಸೊಪ್ಪಿನಮಠ, ಬಸವರಾಜ ಕಲಾದಗಿ, ವಿರುಪಾಕ್ಷ ವಾಲಿ, ಉದಯ ಕೋಳೆಕರ, ಶ್ರೀಶೈಲ ಯಡಳ್ಳಿ, ರವಿ ಹುಲಕುಂದ, ಮುತ್ತುರಾಜ ಮತ್ತಿಕೊಪ್ಪ, ನಿಂಗನಗೌಡ ದೊಡಗೌಡರ, ಬಸನಗೌಡ ಸಿದ್ರಾಮನಿ, ಬಸವರಾಜ ಪರವಣ್ಣವರ, ಉಳವಪ್ಪ ಉಳ್ಳೇಗಡ್ಡಿ, ಮಲ್ಲಿಕಾರ್ಜುನ ಉಳ್ಳಾಗಡ್ಡಿ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ