ಬಹುತೇಕ ಕಡೆ ಘಟಕಗಳು ವಿಫಲವಾಗಿದ್ದು, ಟೆಂಡರ್ ನಲ್ಲಿ ಉತ್ತಮ ಕಂಪನಿಯ ಸಾಮಗ್ರಿ ನಮೂದಿಸಿ, ಬಳಸಿದ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿವೆ ಎನ್ನುವುದು ಮೇಲ್ನೋಟಕ್ಕೆ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಶುದ್ದ ಕುಡಿಯುವ ನೀರಿನ ಘಟಕಗಳು ಕಾರ್ಯವಿರ್ವಹಿಸುವಲ್ಲಿ ವಿಫಲವಾಗಿದ್ದು ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಗಮನ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.
ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ನಡೆದ ಮಾಸಿಕ ಕೆ.ಡಿ.ಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರೀಶಿಲನೆ ನಡೆಸಿ ಮಾತನಾಡಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿ ಮಾಹಿತಿ ನೀಡಿ ಶುದ್ದ ಕುಡಿಯುವ ನೀರಿನ ಘಟಕ ಹಂತ-೨ ರಲ್ಲಿ ೪೭ ಕಾಮಗಾರಿಗಳು ಪ್ರಗತಿಯಲ್ಲಿದ್ದು, ೧೬ ಕಾಮಗಾರಿಗಳಿಗೆ ಮರು ಟೆಂಡರ ಕರೆಯಲಾಗಿದೆ ಎಂದು ಹೇಳಿದರು.
ಬಹುತೇಕ ಕಡೆ ಘಟಕಗಳು ವಿಫಲವಾಗಿದ್ದು, ಟೆಂಡರ್ ನಲ್ಲಿ ಉತ್ತಮ ಕಂಪನಿಯ ಸಾಮಗ್ರಿ ನಮೂದಿಸಿ, ಬಳಸಿದ ಸಾಮಗ್ರಿಗಳು ಕಳಪೆ ಗುಣಮಟ್ಟದ್ದಾಗಿವೆ ಎನ್ನುವುದು ಮೇಲ್ನೋಟಕ್ಕೆ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಸಂಪೂರ್ಣ ತನಿಖೆ ನಡೆಸಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಕಳೆದ ಮೂರು ತಿಂಗಳಿನಿಂದ ಡಿ.ಎಸ್.ಎಸ್ ಪೋರ್ಟಲ್‌ನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು, ಈ ಪೋರ್ಟಲ್‌ನಲ್ಲಿ ಎಲ್ಲಾ ಇಲಾಖೆಗಳು ಪ್ರತಿ ತಿಂಗಳು ಸಂಪೂರ್ಣ ಪ್ರಗತಿ ಮಾಹಿತಿಯನ್ನು ಆನ್‌ಲೈನ್ ನಲ್ಲಿ ಸಲ್ಲಿಸಬೇಕು ಎಂದು ರಾಮಚಂದ್ರನ್ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಗದಿತ ಪ್ರಮಾಣದಲ್ಲಿ ಪ್ರಗತಿ ಸಾಧಿಸುತ್ತಿಲ್ಲ ಅಧಿಕಾರಿಗಳು ಒತ್ತು ಕೊಟ್ಟು ಕಾರ್ಯ ನಿರ್ವಹಿಸಬೇಕು. ಸಾರ್ವಜನಿಕರು ಈಗಾಗಲೇ ನಿರ್ಮಿಸಿಕೊಂಡಿರುವ ಶೌಚಾಲಯಗಳಿಗೆ ಆಕರ್ಷಕವಾಗಿ ಕಾಣುವ ಬಣ್ಣಗಳಿಂದ ಸ್ವಚ್ಛ ಭಾರತ ಚಿಹ್ನೆ ಮತ್ತು ಸಂದೇಶ ನೀಡುವ ಮಾಹಿತಿಯನ್ನು ಶೌಚಾಲಯಗಳ ಮೇಲೆ ಬಿಡಿಸಿ, ಶೌಚಾಲಯದ ಭಾವಚಿತ್ರವನ್ನು ಪೋರ್ಟಲ್‌ಗೆ ಅಪ್‌ಲೋಡ್ ಮಾಡಿದರೆ ಅಂತಹ ಫಲಾನುಭವಿಗಳಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಮಾತನಾಡಿ ಕಾರ್ಯನಿರ್ವಹಿಸುತ್ತಿರುವ ಐ.ಸಿ.ಡಿ.ಎಸ್ ಬ್ಲಾಕ್ ಗಳು, ಅಂಗನವಾಡಿಗಳು, ಮಿನಿ ಅಂಗನವಾಡಿ ಸಂಖ್ಯೆ ಮತ್ತು ಅಪೌಷ್ಠಿಕ ಮಕ್ಕಳ ಸಂಖ್ಯೆ ಕುರಿತು ಮಾಹಿತಿ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಕ್ಕಳ ಲಸಿಕಾ ಕಾರ್ಯಕ್ರಮದಲ್ಲಿ ಡಿಸೆಂಬರ ಮಾಹೆಯಲ್ಲಿ ಗರ್ಬಿಣಿ ಸ್ತ್ರೀಯರಿಗೆ ಟಿ.ಟಿ ಲಸಿಕೆ ೮೫೮೮, ಬಿಸಿಜಿ ೭೨೭೬, ಪೋಲಿಯೋ ೭೪೯೫,ಎಮ್ ಆರ್ ೧ ೭೫೫೩, ಹೆಪಟೈಟೀಸ್-ಬಿ ೫೫೬೦, ಫೇಂಟಾ ೭೪೯೫ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ