ಬೆಳಗಾವಿ: ಕಾಂಗ್ರೆಸ್ ನಿಂದ ಶಿವಕಾಂತ ಸಿದ್ನಾಳಗೆ ಟಿಕೆಟ್ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಹಗಲು-ರಾತ್ರಿ ಚಟುವಟಿಕೆ ಆರಂಭವಾಗಿದೆ.
ಯಾವ ಪಕ್ಷವೂ ಇನ್ನೂ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿಲ್ಲದಿರುವುದರಿಂದ ಆಕಾಂಕ್ಷಿಗಳು ನಿರಂತರವಾಗಿ ಹೈಕಮಾಂಡ್ ಬೆನ್ನತ್ತಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸುರೇಶ ಅಂಗಡಿಯವರಿಗೇ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಈವರೆಗೂ ಅಧಿಕೃತವಾಗಿ ಘೋಷಣೆ ಮಾಡಿಲ್ಲ.
ಕಾಂಗ್ರೆಸ್ ನಿಂದ ಮಾಜಿ ಸಂಸದ ಎಸ್.ಬಿ.ಸಿದ್ನಾಳ ಅವರ ಪುತ್ರ ಶಿವಕಾಂತ ಸಿದ್ನಾಳ ಅವರಿಗೆ ಟಿಕೆಟ್ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಶಿವಕಾಂತ್ ಜೊತೆಗೆ ಅಂಜಲಿ ನಿಂಬಾಳಕರ್, ಚನ್ನರಾಜ ಹಟ್ಟಿಹೊಳಿ, ನಾಗರಾಜ ಯಾದವ, ರಮೇಶ ಕುಡಚಿ, ವಿವೇಕರಾವ್ ಪಾಟೀಲ ಹೆಸರನ್ನು ಹೈಕಮಾಂಡ್ ಗೆ ಕಳುಹಿಸಲಾಗಿದೆ.
ಎಸ್.ಬಿ.ಸಿದ್ನಾಳ 4 ಬಾರಿ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಶಿವಕಾಂತ್ ಈವರೆಗೆ ರಾಜಕೀಯದಲ್ಲಿ ಕಾಣಿಸದಿದ್ದರೂ ಉದ್ಯಮಿಯಾಗಿ ಬೆಳಗಾವಿಯಲ್ಲಿ ಪರಿಚಿತರು. ಇರುವವರಲ್ಲಿ ಶಿವಕಾಂತ್ ಪ್ರಬಲ ಅಭ್ಯರ್ಥಿಯಾಗಬಲ್ಲರು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ. ಜೊತೆಗೆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಲಿಂಗಾಯತ ಸಮಾಜಕ್ಕೆ ಸೇರಿರುವುದೂ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
”ನನಗೆ ಟಿಕೆಟ್ ಕೊಡುವಂತೆ ಕೋರಿದ್ದೇನೆ. ಆದರೆ ಈವರೆಗೆ ಯಾವುದೇ ಸ್ಪಷ್ಟ ಭರವಸೆ ಸಿಕ್ಕಿಲ್ಲ. ಟಿಕೆಟ್ ಸಿಕ್ಕಿದರೆ ಗೆಲ್ಲುವ ವಿಶ್ವಾಸ ಖಂಡಿತ ಇದೆ” ಎಂದು ಶಿವಕಾಂತ್ ಪ್ರಗತಿವಾಹಿನಿಗೆ ತಿಳಿಸಿದರು.




