Latest

*ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಸಂಸದನ ಬೆಂಗಾವಲು ವಾಹನ*: *ಐವರಿಗೆ ಗಂಭೀರ ಗಾಯ*

ಸಂಸದ ಪಪ್ಪು ಯಾದವ್ ಅವರ ಬೆಂಗಾವಲು ವಾಹನ ಭೀಕರ ಅಪಘಾತಕ್ಕೀಡಾಗಿದೆ. ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ನಿರ್ಮಾಣ ಹಂತದಲ್ಲಿರುವ ಸೇತುವೆಯ ಸಮೀಪ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದು, ಸಂಸದ ಪಪ್ಪು ಯಾದವ್ ಅಪಾಯದಿಂದ ಪಾರಾಗಿದ್ದಾರೆ.

ಬಿಹಾರದ ಕತಿಹಾರ್ ಜಿಲ್ಲೆಯಲ್ಲಿ ಪೂರ್ಣಿಯಾ ಬಳಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ಕತಿಹಾರ್‌ನಿಂದ ಸಂಹೌಲಿಗೆ ತೆರಳುತ್ತಿದ್ದ ವೇಳೆ ಬೆಲೋರಿ–ಸಂಹೌಲಿ–ಸೋನೈಲಿ–ಸಲ್ಮಾರಿ ಮುಖ್ಯ ರಸ್ತೆಯ ಕುಮ್ಹರಿ ಗ್ರಾಮದ ಬಳಿ ವಾಹನ ಅಪಘಾತಕ್ಕೀಡಾಗಿದೆ.

ಭಾನುವಾರ ರಾತ್ರಿ ಸುಮಾರು 10.45ರ ವೇಳೆಗೆ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಸಂಸದರು ತಮ್ಮ ಬೆಂಗಾವಲು ಪಡೆಯೊಂದಿಗೆ ಪ್ರಯಾಣಿಸುತ್ತಿದ್ದಾಗ ಮುಂದೆ ಸಾಗುತ್ತಿದ್ದ ಕತಿಹಾರ್ ಪೊಲೀಸರ ಎಸ್ಕಾರ್ಟ್ ವಾಹನ ರಸ್ತೆ ಬದಿಯ ಕಂದಕಕ್ಕೆ ಉರುಳಿದೆ.

ಗಾಯಗೊಂಡವರಿಗೆ ತಕ್ಷಣ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ. ಗಾಯಾಳುಗಳ ಕುತ್ತಿಗೆ, ಹಣೆ ಮತ್ತು ಬೆನ್ನಿನ ಭಾಗದಲ್ಲಿ ಗಾಯಗಳಾಗಿವೆ ಎಂದು ಪಪ್ಪು ಯಾದವ್ ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಪ್ಪು ಯಾದವ್, ದೇವರ ಕೃಪೆ ಮತ್ತು ಜನರ ಪ್ರಾರ್ಥನೆಯಿಂದ ತಮ್ಮ ತಂಡದ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಮಳೆಯ ಕಾರಣ ರಸ್ತೆ ಒದ್ದೆಯಾಗಿತ್ತು. ಒಂದು ವೇಳೆ ಮಣ್ಣು ಗಟ್ಟಿಯಾಗಿದ್ದರೆ ಅಪಘಾತ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿತ್ತು ಎಂದೂ ಅವರು ಹೇಳಿದ್ದಾರೆ.

ಅಪಘಾತಕ್ಕೆ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿನ ನಿರ್ಲಕ್ಷ್ಯವೇ ಕಾರಣ ಎಂದು ಪಪ್ಪು ಯಾದವ್ ಆರೋಪಿಸಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ಹಾನಿಗೊಳಗಾದ ರಸ್ತೆಯನ್ನು ಸರಿಯಾಗಿ ದುರಸ್ತಿ ಮಾಡಿಲ್ಲ. ನಿರ್ಮಾಣ ಹಂತದ ಸೇತುವೆ ಬಳಿ ಯಾವುದೇ ಎಚ್ಚರಿಕೆ ಫಲಕಗಳು, ಅಪಾಯ ಸೂಚಕಗಳು ಅಥವಾ ಸುರಕ್ಷತಾ ತಡೆಗೋಡೆಗಳನ್ನು ಅಳವಡಿಸಿಲ್ಲ ಎಂದು ದೂರಿದ್ದಾರೆ.

ರಸ್ತೆ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ಕಂಪನಿ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರ, ಕಾರ್ಯಪಾಲಕ ಎಂಜಿನಿಯರ್ ಮತ್ತು ಉಪವಿಭಾಗೀಯ ಅಧಿಕಾರಿಗಳೇ ಈ ನಿರ್ಲಕ್ಷ್ಯಕ್ಕೆ ಹೊಣೆ ಎಂದು ಆರೋಪಿಸಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
MP Pappu yadav,escor vehical,accident,5 people injuerd,bihar

Related Articles

Back to top button