ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮಂಡ್ಯದಲ್ಲಿ 2024ರ ಡಿಸೆಂಬರ್ ಮಾಹೆಯಲ್ಲಿ ಜರುಗಲಿರುವ “87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ” ಪ್ರಯುಕ್ತ ರಾಜ್ಯಾದ್ಯಂತ ಸಂಚರಿಸುತ್ತಿರುವ “ಕನ್ನಡ ಜ್ಯೋತಿ ರಥವು ಗುರುವಾರ (ಅ.3) ಬೆಳಗಾವಿ ನಗರಕ್ಕೆ ಆಗಮಿಸಿತು.
ಖಾನಾಪೂರದಿಂದ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ನಗರದ ಚನ್ನಮ್ಮ ವೃತ್ತದಲ್ಲಿ ಬೆಳಗಾವಿ ಉತ್ತರ ವಿಧಾನಸಭಾ ಮತಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಅವರು ಭುವನೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಬೆಳಗಾವಿ ತಹಶೀಲ್ದಾರ ಬಸವರಾಜ ನಾಗರಾಳ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ. ಎಚ್ ಚನ್ನೂರ, ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಹಾಗೂ ವಿವಿಧ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಹಾಜರಿದ್ದರು.
ಜಿಲ್ಲೆಯಲ್ಲಿ ಕನ್ನಡ ರಥ ಸಂಚಾರ:
ಜಿಲ್ಲೆಯಲ್ಲಿ ರಾಮದುರ್ಗ, ಸವದತ್ತಿ, ಬೈಲಹೊಂಗಲ, ಕಿತ್ತೂರು, ಖಾನಾಪೂರದಿಂದ ಆಗಮಿಸಿದ ಜ್ಯೋತಿ ರಥಯಾತ್ರೆ ಗೋಕಾಕ್, ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ರಾಯಬಾಗ, ಕಾಗವಾಡ ಹಾಗೂ ಅಥಣಿ ಮಾರ್ಗವಾಗಿ ಸಂಚರಿಸಲಿದೆ.
ಮಂಡ್ಯ ಜಿಲ್ಲೆಯ ವಿಶೇಷತೆ ಸಾರುವ ಕನ್ನಡ ನುಡಿ ಕಲಿಸುವ ತಾಯಿ ಭುವನೇಶ್ವರಿ, ಕಾವೇರಿ ಮಾತೆ, ಉಳುಮೆ ಮಾಡಲು ಸಿದ್ಧವಿರುವ ಎತ್ತುಗಳು ಮತ್ತು ರೈತ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ ಸುಂದರ ಆಕೃತಿಗಳು, ಜಿಲ್ಲೆಯ ಬಗ್ಗೆ ಚಿತ್ರಣ ಹಾಗೂ ಜ್ಞಾನ ಪೀಠ ಪುರಸ್ಕೃತರ ಭಾವಚಿತ್ರಗಳು ಹೊಂದಿರುವುದು ರಥದ ವಿಶೇಷತೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ