Latest

ಪುಣ್ಯಕೋಟಿ ಯೋಜನೆಗೆ ಸರಕಾರಿ ನೌಕರರಿಂದ 100 ಕೋಟಿ ದೇಣಿಗೆ; ಒಂದು ದಿನದ ಸಂಬಳ ನೀಡಲು ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ, ರಾಜ್ಯ ಸರ್ಕಾರದ “ಪುಣ್ಯಕೋಟಿ ದತ್ತು ಯೋಜನೆ”ಗೆ ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಿತರ ಸಂಸ್ಥೆಗಳ ನೌಕರರು ದೇಣಿಗೆ ನೀಡಲು ಸಮ್ಮತಿಸಿರುವ ಕುರಿತು ಸಮ್ಮತಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಹಸ್ತಾಂತರಿಸಿದರು.

ಮುಖ್ಯಮಂತ್ರಿಯವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ನೌಕರರ ಸಂಘವು ರಾಜ್ಯ ಸರ್ಕಾರಿ ನೌಕರರು ಮತ್ತು ಸರ್ಕಾರದ ಇತರ ಸಂಸ್ಥೆಗಳ ನೌಕರರು ಸ್ವ-ಇಚ್ಛೆಯಿಂದ ದೇಣಿಗೆ ನೀಡಲು ಮುಂದಾಗಿದ್ದು, ಗ್ರೂಪ್ ಎ ಅಧಿಕಾರಿಗಳು 11,000 ರೂ., ಗ್ರೂಪ್ ಬಿ ಅಧಿಕಾರಿಗಳು 4000 ರೂ. ಹಾಗೂ ಸಿ ವೃಂದದ ನೌಕರರು 400 ರೂ. ದೇಣಿಗೆಯನ್ನು ಒಂದು ಬಾರಿಗೆ ಪಾವತಿಸಲು ಸಮ್ಮತಿಸಿದ್ದಾರೆ. ಇದನ್ನು ಅಕ್ಟೋಬರ್ ಹಾಗೂ ನವೆಂಬರ್ ತಿಂಗಳ ವೇತನದಲ್ಲಿ ಕಟಾಯಿಸುವಂತೆ ಕೋರಿದ್ದಾರೆ. ಈ ಮೊತ್ತವು ಸುಮಾರು 80 ರಿಂದ 100 ಕೋಟಿ ರೂ. ಗಳಾಗಲಿದೆ ಎಂದು ಅಂದಾಜಿಸಲಾಗಿದೆ.
ನೌಕರರ ಸಂಘದ ಈ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಗೋಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮುದಿ ಗೋವುಗಳು ಆಶ್ರ ಯ ಪಡೆದಿವೆ. ಇವುಗಳ ಸಮರ್ಪಕ ಪಾಲನೆ ಪೋಷಣೆ ನಮ್ಮೆಲ್ಲರ ಕರ್ತವ್ಯವೂ ಹೌದು. ಈ ಪುಣ್ಯದ ಕೆಲಸದಲ್ಲಿ ಸರ್ಕಾರಿ ನೌಕರರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಲು ಮುಂದಾಗಿರುವುದು ಅಭಿನಂದನಾರ್ಹ ಎಂದು ತಿಳಿಸಿದರು.
ಬರ, ಪ್ರವಾಹ, ಕೋವಿಡ್ 19 ಮುಂತಾದ ಸಂಕಷ್ಟದ ಸಂದರ್ಭಗಳಲ್ಲಿ ಸರ್ಕಾರಿ ನೌಕರರು ಅತ್ಯಂತ ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿಗಳು ಹಿಂದೆ ಭರವಸೆ ನೀಡಿದಂತೆ, ಈ ತಿಂಗಳಲ್ಲಿಯೇ ವೇತನ ಆಯೋಗ ರಚಿಸಲಾಗುವುದು. ನೌಕರರಿಗೆ ವೇತನ, ಭತ್ಯೆಗಳೊಂದಿಗೆ, ಅತ್ಯುತ್ತಮ ಕಾರ್ಯ ನಿರ್ವಹಣೆಗೆ ಪ್ರೋತ್ಸಾಹಕಗಳನ್ನು ನೀಡುವುದು, ಸರ್ಕಾರಿ ನೌಕರರ ಕಾರ್ಯ ನಿರ್ವಹಣೆಯಲ್ಲಿ ತಂತ್ರಜ್ಞಾನದ ಅಳವಡಿಕೆ ಮೊದಲಾದ ಅಂಶಗಳ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಪಶುಸಂಗೋಪನಾ ಸಚಿವ ಪ್ರಭು ಚೌವ್ಹಾಣ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಆರ್ಥಿಕ ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಕಾರ್ಯದರ್ಶಿ ಸಲ್ಮಾ ಫಾಹಿಂ ಮತ್ತು ಸರ್ಕಾರ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚರ್ಮಗಂಟು ರೋಗ ನಿರ್ವಹಣೆಗೆ 13 ಕೋಟಿ ಬಿಡುಗಡೆಗೆ ಮುಖ್ಯಮಂತ್ರಿ ಆದೇಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button