*ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕೆ ಶ್ರೇಯಸ್ ಆಯ್ಕೆ: ಪೋಷಕರು ಹರ್ಷ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕಿನ ಅಗಸಗಿ ಗ್ರಾಮದ ಬಾಲಕ ಶ್ರೇಯಸ್ ಪಾಟೀಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಕ್ಕೆ ಆಯ್ಕೆಯಾಗಿದ್ದು, ಅಂಡರ್ 15 ಫುಟ್ಬಾಲ್ ಪಂದ್ಯದಲ್ಲಿ ಪಾಲ್ಗೊಳ್ಳಲು ಇಂದು ಇಂಡೋನೇಶ್ಯಾಕ್ಕೆ ಪ್ರಯಾಣ ಬೆಳೆಸಲಿದ್ದಾನೆ.
ಅಗಸಗಿ ಗ್ರಾಮದ ಕಳಗೌಡ ಪಾಟೀಲ ಅವರ ಮೊಮ್ಮಗನೇ ಶ್ರೇಯಸ್ ಈ ಪಾಟೀಲ. ಐದನೇ ತರಗತಿಯಲ್ಲಿ ಓದುತ್ತಿದ್ದಾಗಲೇ ಬೆಂಗಳೂರು ಫುಟ್ಬಾಲ್ ಕ್ಲಬ್‌ಗೆ ಆಯ್ಕೆಯಾಗಿದ್ದ ಈ ಪ್ರತಿಭಾವಂತ ಪೋರ ಕ್ಲಬ್ ಶಾಲೆಯಲ್ಲಿಯೇ 10ನೇ ತರಗತಿಯಲ್ಲೂ ಓದುತ್ತಿದ್ದು, ತರಬೇತಿ ಪಡೆದುಕೊಂಡು ಕ್ರೀಡೆಯಲ್ಲಿ ತನ್ನದೇ ಛಾಫು ಬೆಳೆಸಿಕೊಂಡಿದ್ದಾನೆ.
ಶ್ರೇಯಸ್ ತಂದೆ ನಿಂಗನಗೌಡ ಪಾಟೀಲ ಹಾಗೂ ತಾಯಿ ವಿಜಯಲಕ್ಷ್ಮೀ ಪಾಟೀಲ ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಪುಟ್ಟ ತಂಗಿ ಗೌರಿ ನಾಲ್ಕನೇ ತರಗತಿಯಲ್ಲಿದ್ದಾಳೆ. ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೇಯಸ್ ತಮ್ಮ ತಾಯಿ-ತಂದೆಗಳ ಮಾರ್ಗದರ್ಶನ, ಕುಟುಂಬದ ಪ್ರೋತ್ಸಾಹ ಹಾಗೂ ತಮ್ಮದೇ ಆದ ಕಠಿಣ ಪರಿಶ್ರಮದಿಂದ ಈ ಯಶಸ್ಸನ್ನು ಗಳಿಸಿದ್ದಾನೆ ಎಂದರೆ ತಪ್ಪಾಗಲಾರದು. ಈಗಾಗಲೇ ಅಂಡರ್ 15 ಕರ್ನಾಟಕ ಟೀಂನ ನಾಯಕನಾಗಿ ತಂಡವನ್ನು ಮುನ್ನಡೆಸಿದ ಶ್ರೇಯ ಕೂಡಾ ಈತನದ್ದಾಗಿದೆ.
ಶ್ರೇಯಸ್ ಈ ಮಟ್ಟದ ಸಾಧನೆ ಮಾಡಿದ್ದು ನಮ್ಮ ಮನೆತನಕ್ಕೆ ಮಾತ್ರವಲ್ಲದೆ ನಮ್ಮೂರಿಗೂ ಹೆಮ್ಮೆ ಎಂದು ಎದೆಯುಬ್ಬಿಸಿ ಹೇಳುತ್ತಾರೆ. ಅವನ ಭವಿಷ್ಯವು ಇನ್ನೂ ಉಜ್ವಲವಾಗಲಿ ಎಂದು ಪ್ರೀತಿಯಿಂದ ಹಾರೈಸುತ್ತಾರೆ.
ಇನ್ನು ಶ್ರೇಯಸ್‌ನ ಚಿಕ್ಕಪ್ಪರಾಗಿರುವ ಬಾಳಗೌಡ ಪಾಟೀಲ್ ಕೃಷಿಕರಾಗಿದ್ದು, ಅವರ ಪುತ್ರ ಬಸವರಾಜ್ ಬಾಳಗೌಡ ಪಾಟೀಲ್ ಎಂ.ಎಸ್. ಪದವಿಗಾಗಿ ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇನೊಬ್ಬ ಚಿಕ್ಕಪ್ಪರಾಗಿರುವ ಮಲಗೌಡ ಪಾಟೀಲ್ ಕೆಪಿಸಿಸಿ ಸದಸ್ಯರಾಗಿದ್ದು ಸತೀಶ್ ಜಾರಕಿಹೊಳಿ ಅವರ ಆಪ್ತರಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಪಂದ್ಯದ ತರಬೇತಿ, ಶಿಕ್ಷಣ ಎಂಬ ಕಾರಣಕ್ಕೆ ಶ್ರೇಯಸ್ ಬೆಂಗಳೂರಿನಲ್ಲಿಯೇ ನೆಲೆಸಿದ್ದಾನಾದರೂ ರಜೆ ಸಿಕ್ಕಾಗಲೆಲ್ಲಾ ಅಜ್ಜನನ್ನು ನೋಡುವುದಕ್ಕೆ ಬೆಳಗಾವಿಗೆ ಬರುತ್ತಲೇ ಇರುತ್ತಾನೆ. ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿಯ ಆಗಸಗಿ ಗ್ರಾಮದ ಕೆಂಪು ಬೀರುತ್ತಿರುವ ಶ್ರೇಯಸ್ ಪಾಟೀಲ ನಿಜಕ್ಕೂ ನಮ್ಮೆಲ್ಲರ ಹೆಮ್ಮೆ.




