
ಪ್ರಗತಿವಾಹಿನಿ ಸುದ್ದಿ: ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬ ತನ್ನ ಮೂರು ಮಕ್ಕಳಲ್ಲಿ 6 ವರ್ಷದ ಮಗಳನ್ನು ಕೊಂದು ಹಾಕಿದ್ದಾನೆ.
ಕೊಲೆಯಾದ ಬಾಲಕಿಯನ್ನು ಪ್ರಾಚಿ (6), ಹತ್ಯೆಗೈದ ಆರೋಪಿ ತಂದೆಯನ್ನು ಪಾಂಡುರಂಗ ಕೊಂಡ್ಮಂಗಳೆ (28) ಎಂದು ಗುರುತಿಸಲಾಗಿದೆ. ಈತ ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೆರೂರ್ ಗ್ರಾಮದ ನಿವಾಸಿಯಾಗಿದ್ದಾನೆ. ಮಗಳನ್ನು ಕೊಲೆ ಮಾಡಲು ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್ ಕಾಲುವೆಗೆ ನೂಕಿ ಹತ್ಯೆ ಮಾಡಿದ್ದಾನೆ.
ನಿಜಾಮಾಬಾದ್ ಪೊಲೀಸರು ಪ್ರಕರಣದ ಆರೋಪಿ ಪಾಂಡುರಂಗ ಮತ್ತು ಗ್ರಾಮದ ಸರಪಂಚ್ ಗಣೇಶ್ ರಾಮಚಂದ್ರ ಶಿಂಧೆಯನ್ನು ಬಂಧಿಸಿದ್ದಾರೆ.
ಗ್ರಾಮದಲ್ಲಿ ಸೆಲೂನ್ ನಡೆಸುತ್ತಿದ್ದ ಪಾಂಡುರಂಗ ಮುಂಬರುವ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದ. ಅವನಿಗೆ ಮೂರು ವರ್ಷದ ಗಂಡು ಮಗು ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳಿದ್ದರು. ಇದರಿಂದ ಮಹಾರಾಷ್ಟ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಎರಡು ಮಕ್ಕಳ ನಿಯಮ ಇರುವುದರಿಂದ ಸ್ಪರ್ಧಿಸಲು ಅನರ್ಹನಾಗಿದ್ದ. ಈ ವಿಚಾರವನ್ನು ಸ್ನೇಹಿತ ಮತ್ತು ಗ್ರಾಮದ ಪ್ರಸ್ತುತ ಸರಪಂಚ್ ಗಣೇಶ್ ಶಿಂಧೆ ಜೊತೆ ಚರ್ಚಿಸಿ ಅವಳಿ ಮಕ್ಕಳಲ್ಲಿ ಹಿರಿಯ ಮಗಳು ಪ್ರಾಚಿಯನ್ನು ಎಲ್ಲಾದರೂ ಬಿಟ್ಟು ಬರಲು ಯೋಚಿಸಿದ್ದ. ಬಳಿಕ ಅವಳು ವಾಪಸ್ ಬಂದರೆ ತೊಂದರೆ ಆಗುತ್ತದೆ ಎಂದು ತೆಲಂಗಾಣಾದ ಕಾಲುವೆಗೆ ತಳ್ಳಿ ಆಕಸ್ಮಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದ.
ಅಲ್ಲಿಯೇ ಸಮೀಪದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರಿಗೆ ನೀರಿಗೆ ಏನೋ ಬಿದ್ದ ಶಬ್ಧ ಕೇಳಿ, ಬಂದು ನೋಡಿದಾಗ ಬಾಲಕಿಯ ಮೃತದೇಹ ಪತ್ತೆಯಾಗಿತ್ತು. ಇದಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬಾಲಕಿಯ ಫೋಟೋ ವೈರಲ್ ಆಗಿತ್ತು. ಇದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸಿದ್ದರು.




