Kannada NewsKarnataka NewsLatestPolitics

*ಮನರೇಗಾ ರದ್ದು ಮಾಡಿ ಕಾರ್ಮಿಕರ ಸ್ವಾಭಿಮಾನದ ಬದುಕು, ಉದ್ಯೋಗದ ಹಕ್ಕನ್ನು ಕಸಿದ ಕೇಂದ್ರ: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: “ಮನರೇಗಾ ಯೋಜನೆಯು ಗ್ರಾಮೀಣ ಭಾಗದ ಕಾರ್ಮಿಕರ ಸ್ವಾಭಿಮಾನದ ಬದುಕು ಹಾಗೂ ಉದ್ಯೋಗದ ಹಕ್ಕು ನೀಡಿತ್ತು. ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಸ್ವಾಭಿಮಾನ ಉಳಿಸಿಕೊಂಡು ಉದ್ಯೋಗ ಕೇಳುವ ಅವಕಾಶ ಮನರೇಗಾ ಯೋಜನೆಯಡಿ ಇತ್ತು. ಜನರ ಈ ಹಕ್ಕನ್ನು ಕೇಂದ್ರ ಬಿಜೆಪಿ ಸರ್ಕಾರ ಕಸಿದುಕೊಂಡಿದೆ” ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ ಅವರು ವಾಗ್ದಾಳಿ ನಡೆಸಿದರು.

ವಿಬಿ ಗ್ರಾಮ್ ಜಿ ವಿರುದ್ಧ ಮುಖ್ಯಮಂತ್ರಿಯವರು ಮಂಡಿಸಿದ ನಿರ್ಣಯವನ್ನು ಬೆಂಬಲಿಸಿ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿ ಡಿಸಿಎಂ ಶಿವಕುಮಾರ್ ಅವರು ಬುಧವಾರ ಮಾತನಾಡಿದರು.

“ಈಗ ಹೊಸ ಕಾಯ್ದೆಯಲ್ಲಿ ಗುತ್ತಿಗೆದಾರನ ಬಳಿ ಕೆಲಸ ಮಾಡಿ ಎಂದು ತಿಳಿಸಿದ್ದಾರೆ. ಪಂಚಾಯಿತಿ ಮಟ್ಟದ‌ ಕೆಲಸಗಳನ್ನು ದೆಹಲಿಯಲ್ಲಿ ಕುಳಿತು ಹೇಗೆ ನಿರ್ಧಾರ ಮಾಡಲಾಗುತ್ತದೆ. ಎಐ ತಂತ್ರಜ್ಞಾನದ ಮೂಲಕ ಎಲ್ಲೆಲ್ಲಿ ಯಾವ ಕೆಲಸ ತೆಗೆದುಕೊಳ್ಳಬೇಕು ಎಂದು ತೀರ್ಮಾನ ಮಾಡುತ್ತಾರಂತೆ. ಇದು ಪ್ರಾಯೋಗಿಕವಾಗಿ ಸಾಧ್ಯವಿಲ್ಲದ ತೀರ್ಮಾನ” ಎಂದರು.

ಮುಖ್ಯಮಂತ್ರಿಯವರು ತಂದಿರುವ ನಿರ್ಣಯಕ್ಕೆ ಬೆಂಬಲ

Home add -Advt

“ಮುಖ್ಯಮಂತ್ರಿಯವರು ವಿಬಿ ಗ್ರಾಮ್ ಜಿ ವಿರುದ್ಧ ತಂದಿರುವ ನಿರ್ಣಯಕ್ಕೆ ಅರ್ಥವಿದೆ. ರೈತರ ವಿರುದ್ಧ ತಂದಿದ್ದ ಕರಾಳ ಕಾಯ್ದೆಗಳನ್ನು ಹಿಂಪಡೆಯುವ ತನಕ ಹೇಗೆ ಹೋರಾಟ ಮಾಡಲಾಯಿತೋ ಅದೇ ರೀತಿ ಮನರೇಗಾ ಬದಲಾವಣೆ ವಿರುದ್ಧ ಅದನ್ನು ಮರುಜಾರಿ ಮಾಡುವ ತನಕ ನಾವು ಹೋರಾಟ ಮಾಡುತ್ತೇವೆ. ನಿರ್ಣಯಕ್ಕೆ ಇಡೀ ಆಡಳಿತ ಪಕ್ಷದ ಶಾಸಕರ ಬೆಂಬಲವಿದೆ. ಬಿಜೆಪಿಯವರಿಗೆ ಇದರ ಬಗ್ಗೆ ಮಾತನಾಡುವ ಹಕ್ಕು ನೀಡಲಾಗಿತ್ತು. ಆದರೆ ಅವರು ಸಭಾತ್ಯಾಗ ಮಾಡಿ ಅದನ್ನು ಕಳೆದುಕೊಂಡಿದ್ದಾರೆ” ಎಂದು ಕುಟುಕಿದರು.

“ಬೇರೆಯವರ ಜಮೀನಿನಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಕೆಯಾಗುತ್ತದೆ ಎಂದಾದರೆ ರೈತರು ಅವರ ಸ್ವಂತ ಜಮೀನಿನಲ್ಲೇ ಕೃಷಿ ಹೊಂಡ ಮಾಡಿಕೊಳ್ಳಬಹುದು, ಮನೆ ಕಟ್ಟಿಕೊಳ್ಳಬಹುದು ಹೀಗೆ ಹಲವಾರು ಕೆಲಸಗಳನ್ನು ಮಾಡಿಕೊಳ್ಳಬಹುದು ಅದನ್ನೂ ಸಹ ನರೇಗಾ ಯೋಜನೆಯಡಿ ತಂದು ರೈತನೇ ಕೂಲಿ ಪಡೆಯಬಹುದು ಎಂದು ಸೋನಿಯಾಗಾಂಧಿ ಅವರ ನೇತೃತ್ವದ ಮನಮೋಹನ್ ಸಿಂಗ್ ಸರ್ಕಾರ ಅವಕಾಶ ನೀಡಿತ್ತು. ಅಂದು ಕೇಂದ್ರ ಸಚಿವರಾಗಿದ್ದವರು ಸಿ.ಪಿ. ಜೋಶಿ” ಎಂದರು.

ಕನಕಪುರ, ರಾಮನಗರಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಪ್ರಶಸ್ತಿ

“2013-18ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನನ್ನದೇ ಕನಕಪುರ ಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ನರೇಗಾ ಕಾಮಗಾರಿಗಳು ನಡೆದವು. ಸುಮಾರು 40 ಸಾವಿರ ಕೃಷಿ ಹೊಂಡಗಳು, 54 ಸಾವಿರ ದನದ ಕೊಟ್ಟಿಗೆ ನಿರ್ಮಾಣ ಮಾಡಲಾಯಿತು, 9,300 ಕ್ಕೂ ಹೆಚ್ಚು ಚರಂಡಿ ಕಾಮಗಾರಿಗಳು, 9 ಸಾವಿರ ಗ್ರಾಮೀಣ ರಸ್ತೆಗಳು, 4,200 ಕ್ಕೂ ಅಧಿಕ ನಾಲಾ ಅಭಿವೃದ್ಧಿ ಕಾಮಗಾರಿ, ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಿಸಲಾಯಿತು. ಇದಕ್ಕೆ ನಾವು ಅವ್ಯವಹಾರ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರ ಐದಾರು ಬಾರಿ ತನಿಖೆ ಮಾಡಿಸಿತು” ಎಂದರು.

“2017 ರಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಅತ್ಯುತ್ತಮ ಕೆಲಸ ಮಾಡಲಾಗಿದೆ ಎಂದು ರಾಮನಗರ ಜಿಲ್ಲೆಗೆ ಪ್ರಶಂಸೆ ನೀಡಿತು. ನನ್ನ ಕನಕಪುರ ಕ್ಷೇತ್ರವು ನರೇಗಾ ಅಡಿ ತೆಗೆದುಕೊಂಡಿದ್ದ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿದ ಕಾರಣಕ್ಕೆ ಇಡೀ ದೇಶದಲ್ಲಿಯೇ ಮೊದಲ ಸ್ಥಾನ ಗಳಿಸಿತು. ನನ್ನನ್ನು ಕರೆದು ಪ್ರಶಸ್ತಿ ನೀಡಬೇಕು ಎಂದು ನಮ್ಮ ತಾಲ್ಲೂಕು ಪಂಚಾಯತಿ ಅಧ್ಯಕ್ಷರನ್ನು ಕರೆದು ಪ್ರಶಸ್ತಿ ನೀಡಲಾಯಿತು. ಅಂದು ಕೆ.ಎಸ್.ಈಶ್ವರಪ್ಪ ಅವರು ಸಚಿವರಾಗಿದ್ದರು” ಎಂದರು.

ಬಿಜೆಪಿ ಆಡಳಿತ ರಾಜ್ಯಗಳಲ್ಲೇ ನೂತನ ಕಾಯ್ದೆ ಜಾರಿ ಅಸಾಧ್ಯ

“ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ನೂತನ ಕಾಯ್ದೆ ಜಾರಿಗೆ ತರಲು ಆಗುವುದಿಲ್ಲ. ಶೇ. 60/40 ಅನುದಾನ ಹಂಚಿಕೆಗೆ ಒಪ್ಪಲು ಆಗುವುದಿಲ್ಲ. ಶೇ.40 ರಷ್ಟು ಅನುದಾನ ಯಾರು ನೀಡಲು ಆಗುತ್ತದೆ. ಸ್ವಂತ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ ಎಂದಾದರೆ ಬೇರೆಯವರ ಜಮೀನಿಗೆ ತೆರಳಿ ಕೆಲಸ ಮಾಡಲು ಸಾಧ್ಯವೇ?” ಎಂದರು.

“ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾ ಯೋಜನೆ ಉದ್ಯೋಗ ಗ್ಯಾರಂಟಿ ನೀಡುತ್ತಿತ್ತು. ಪ್ರತಿಪಕ್ಷ ಬಿಜೆಪಿಗೆ ಕೇಂದ್ರ ಸರ್ಕಾರ ತಂದಿರುವ ಹೊಸ ಕಾನೂನು ಬಗ್ಗೆ ಚರ್ಚೆ‌ ಮಾಡಲು ಬೇಕಾದಷ್ಟು ಅವಕಾಶವಿತ್ತು. ಸದನದಲ್ಲಿ ಬಿಜೆಪಿಯವರಿಗೆ ಹೇಳಲು ಧೈರ್ಯವಿಲ್ಲ. ಹೊರಗೆಯಾದರೂ ಇದರ ಬಗ್ಗೆ ಮಾತನಾಡಲಿ ಎಂಬುದು ನನ್ನ ಅಪೇಕ್ಷೆ” ಎಂದು ವ್ಯಂಗ್ಯವಾಡಿದರು.

“ಕಾಂಗ್ರೆಸ್ ಪಕ್ಷ, ಸರ್ಕಾರ ಮಹಾತ್ಮ ಗಾಂಧಿ ಅವರ ಹೆಸರನ್ನು ಮರಳಿ ತರುವ ತನಕ ಹೋರಾಟ ಮುಂದುವರೆಸಲಿದೆ” ಎಂದು ತಿಳಿಸಿದರು.

ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಅಂಶ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಎಲ್ಲಿ ಪ್ರಸ್ತಾಪಿಸಲಾಗಿದೆ?

ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡುವಾಗ ಮಾತನಾಡಿದ ಶಿವಕುಮಾರ್ ಅವರು, “ಉದ್ಯೋಗ ಖಾತರಿ ಯಾರಿಗಾಗಿ? ಈ ಯೋಜನೆ ನಿಂತಿರುವುದೇ ಗ್ರಾಮೀಣ ಭಾಗದ ಕಾರ್ಮಿಕರ ಸ್ವಾಭಿಮಾನದ ಬದುಕಿಗೆ ಆಧಾರವಾಗಿ ಈ ಯೋಜನೆ ರೂಪಿಸಬೇಕಾಗಿದೆ. ರೈತರು, ಕೃಷಿ ಕಾರ್ಮಿಕರು ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಳ್ಳುವುದಕ್ಕೆ ಈ ಯೋಜನೆ ಇರಬೇಕು. ಗುತ್ತಿಗೆದಾರನ ಕೈ ಕೆಳಗೆ ಹೋಗಿ ಕೆಲಸ ಮಾಡುವುದಕ್ಕೆ ಅಲ್ಲ. ಮನರೇಗಾ ಯೋಜನೆಯಲ್ಲಿ ತನ್ನ ಜಮೀನಿನಲ್ಲಿ ತೋಟಗಾರಿಕೆ ಬೆಳೆ, ಹೂ ಬೆಳೆ, ಸಾಕು ಪ್ರಾಣಿಗಳ ಕೊಟ್ಟಿಗೆ ನಿರ್ಮಾಣಕ್ಕೆ, ತನ್ನ ಜಮೀನು ಮಟ್ಟ ಮಾಡಿಕೊಳ್ಳಲು, ಮನೆ ಕಟ್ಟಿಕೊಳ್ಳಲು, ಇಂಗು ಗುಂಡಿ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ನಮ್ಮ ಉದ್ಯೋಗ ನಮ್ಮ ಹಕ್ಕು ಎಂಬ ಅಂಶ ನೂತನ ವಿಬಿ ಗ್ರಾಮ್ ಜಿ ಯೋಜನೆಯಲ್ಲಿ ಎಲ್ಲಿ ಪ್ರಸ್ತಾಪಿಸಲಾಗಿದೆ ಎಂದು ವಿವರಿಸಿ” ಎಂದು ಆಗ್ರಹಿಸಿದರು.

Related Articles

Back to top button