Belagavi NewsBelgaum NewsKannada NewsKarnataka NewsPolitics

*ನಮ್ಮ ಶಾಸಕರು ಫಾರಿನ್ ಟೂರ್ ಹೋಗಬಾರದಾ: ಬೆಳಗಾವಿಯಲ್ಲಿ ದಿನೇಶ ಗುಂಡುರಾವ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾವುದೂ ಬುಕ್ ಆಗಿಲ್ಲ. ಏನು ಹಾಲಿಡೇಗೆ ನಮ್ಮ ಶಾಸಕರು ಹೋಗಬಾರದಾ..? ಎಲ್ಲರೂ ಕೂಡಿ ಹೋಗಬಹದು, ಬಿಟ್ಟು ಹೋಗಬಹುದು. ಅದೇನು ದೊಡ್ಡ ವಿಷಯ ಅಲ್ಲ ಎಂದು ಗೋವಾದಲ್ಲಿ ರೆಸಾರ್ಟ್ ಬುಕ್ ಆಗಿವೆ ಎಂಬ ವಿಚಾರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡೂರಾವ್ ಪ್ರತಿಕ್ರಿಯೆ ನೀಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಬೈಲಹೊಂಗಲದಲ್ಲಿ‌ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮತ್ತೆ ಫಾರಿನ್ ಟೂರ್ ಗೆ ಶಾಸಕರು ಸಿದ್ಧವಾಗಿದ್ದಾರೆ ಎಂಬುದಕ್ಕೆ ಯಾರು ಹೋಗುತ್ತಿದ್ದಾರೆ ನನಗೆ ಗೊತ್ತಿಲ್ಲ. ವೈಯಕ್ತಿಕ ಟೂರ್ ಹೊರಟರೆ ನಾವೇನು ಹೋಗಬೇಡಿ ಅಂತಾ ಹೇಳುವುದಕ್ಕೆ ಆಗುತ್ತಾ ಎಂದು ದಿನೇಶ ಗುಂಡೂರಾವ ಮರು ಪ್ರಶ್ನಿಸಿದರು.

ಸಿಎಂ ಬದಲಾವಣೆ ಗೊಂದಲಕ್ಕೆ ಹೈಕಮಾಂಡ್ ಯಾಕೆ ಫುಲ್ ಸ್ಟಾಪ್ ಇಡುತ್ತಿಲ್ಲ ಎಂಬುದಕ್ಕೆ, ಯಾರು ಫುಲ್ ಸ್ಟಾಪ್ ಇಟ್ಟಿಲ್ಲ ಎಂದರು. ಇನ್ನು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ದಿನೇಶ್ ಗುಂಡೂರಾವ್ ನಿರಾಕರಿಸಿದರು.

ನಿರಂತರ ಸಿಎಂ ಬದಲಾವಣೆ ಕೂಗಿನಿಂದ ಕಾಂಗ್ರೆಸ್ ನಲ್ಲಿ ಗೊಂದಲ ಮೂಡುತ್ತಿದೆ ಎಂಬುದಕ್ಕೆ, ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಮೊನ್ನೆ ನಡೆದ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವು. ಹಾವೇರಿಯಲ್ಲಿ ಸಾವಿರದ ದಿನದ ಕಾರ್ಯಕ್ರಮವನ್ನೂ ಒಗ್ಗಟ್ಟಾಗಿ ಮಾಡಿದ್ದೇವೆ. ಎಲ್ಲ ಶಾಸಕರು ಒಟ್ಟಾಗಿದ್ದೇವೆ. ಹಾಗಾಗಿ, ಇದರಲ್ಲಿ ಯಾವುದೇ ರೀತಿ ಸರ್ಕಾರದ ಮೇಲೆ ದುಷ್ಪರಿಣಾಮ ಮತ್ತು ಭಿನ್ನಮತವೂ ಇಲ್ಲ. ಅದೇರೀತಿ ಈ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಅಗತ್ಯತೆಯೂ ಇಲ್ಲ ಎಂದು ದಿನೇಶ ಗುಂಡೂರಾವ ಸಮರ್ಥಿಸಿಕೊಂಡರು.

Home add -Advt

ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಸಿಎಂ, ಡಿಸಿಎಂ ಅವರೇ ಹೈಕಮಾಂಡ ಹೇಳಿದ್ದಂತೆ ಕೇಳುತ್ತೇವೆ ಅಂತಾ ಹೇಳಿದ್ದಾರೆ. ಅಷ್ಟು ಹೇಳಿದ ಮುಗಿದು ಹೋಯಿತು. ಈಗ ವಿಚಾರ ಸ್ಟಾಪ್ ಆಗಿದೆ. ಮೈಕ್ ಹಿಡಿದಾಗ ಯಾವುದೋ ಒಂದು ಹೇಳಿಕೆ ಬಂದು ಬಿಡುತ್ತದೆ. ಹಾಗಾಗಿ, ನಮ್ಮಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ದಿನೇಶ ಗುಂಡೂರಾವ ಸ್ಪಷ್ಟಪಡಿಸಿದರು.

ಡಿಕೆಶಿ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಶಾಸಕ ರವಿ ಗಣಿಗ ಹೇಳಿಕೆಗೆ, ಸಿಎಂ, ಡಿಸಿಎಂ ಹೇಳಿಕೆ ಕೊಟ್ಟಮೇಲೆ ಇನ್ನೊಬ್ಬರು ಹೇಳಿಕೆ ಕೊಡುವ ಅಗತ್ಯ ಇಲ್ಲ. ಯಾವುದೇ ಗೊಂದಲ ನಮ್ಮಲ್ಲಿ ಇಲ್ಲ. ಎಲ್ಲ ಶಾಸಕರು, ಸಚಿವರು, ಮುಖಂಡರು ಒಂದಾಗಿದ್ದೇವೆ ಎಂದರು.

ಕರಾವಳಿಯಲ್ಲಿ ಕೋಮುಸಂಘರ್ಷ ಹಿನ್ನೆಲೆಯಲ್ಲಿ ಬಂಡವಾಳ ಹೂಡಿಕೆ ಮಾಡಲು ಕಂಪನಿಗಳು ಹಿಂದೇಟು ಹಾಕುತ್ತಿವೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಆರೋಪಕ್ಕೆ ಪ್ರತಿಕ್ರಿಯಿಸಿದ ದಿನೇಶ ಗುಂಡೂರಾವ, ನಮ್ಮ ಸರ್ಕಾರದ ಬಂದ ಮೇಲೆ ಕರಾವಳಿಯಲ್ಲಿ ಸುಧಾರಣೆ ಸಂಬಂಧ ಹಲವು ಕ್ರಮ ಕೈಗೊಂಡಿದ್ದೇವೆ. ಅಲ್ಲಿ ಈಗ ಶಾಂತಿಯುತ ವಾತಾವರಣ ನಿರ್ಮಾಣವಾಗಿದೆ. ಹೆಚ್ಚು ಬಂಡವಾಳ ಹೂಡಿಕೆ ಮಾಡುವಂತೆ ನಾವು ಸತತ ಪ್ರಯತ್ನ ಮಾಡುತ್ತಿದ್ದೇವೆ. ನಿಷ್ಟಕ್ಷಪಾತವಾಗಿ ನಮ್ಮ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುತ್ತಿದೆ. ಯಾರ ಪರ, ವಿರುದ್ಧವೂ ಇಲ್ಲ. ಯಾರು ಕಾನೂನಿನ ವಿರುದ್ಧವಾಗಿ ಇರುತ್ತಾರೆ, ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಅದರಿಂದ ಬಹಳಷ್ಟು ಸುಧಾರಣೆ ಆಗಿದೆ. ಅದೇರೀತಿ ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದೇವೆ ಎಂದರು.

ಮೊನ್ನೆ ಸಿಎಂ, ಡಿಸಿಎಂ ಕುಮಟೂರಿಗೆ ಬಂದಿದ್ದರು. ಒಂದು ದಿನದ ಕಾರ್ಯಾಗಾತ ಏರ್ಪಡಿಸಲಾಗಿತ್ತು. ಮೂರು ಹೊಸ ಫೈವ್ ಸ್ಟಾರ್ ಹೋಟೆಲ್ ನಿರ್ಮಾಣ ಸೇರಿ ಪ್ರವಾಸೋದ್ಯಮ‌ ಅಭಿವೃದ್ಧಿಗೆ ಅನುಮೋದನೆ ನೀಡಲಾಗಿದೆ. 70 ಕೋಟಿ ಅನುದಾನದಲ್ಲಿ ಕಿಯೋನಿಕ್ಸ್ ಐಟಿ ಕಂಪನಿ ಸ್ಥಾಪನೆಗೂ ಅನುಮೋದನೆ ಸಿಕ್ಕಿದೆ. ಅದರಿಂದ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಕಂಪನಿಗಳನ್ನು ಆಕರ್ಷಿಸಲು ಅವಕಾಶವಿದೆ. ಆದರೆ, ಈ ಕೋಮುವಾದದಿಂದ ಅನೇಕ ಜನರಿಗೆ ಹಿನ್ನೆಡೆ ಆಗುತ್ತಿತ್ತು. ಹಾಗಾಗಿ, ಅಲ್ಲಿಯ ಜನರಿಗೆ ತಿಳಿವಳಿಕೆ ಹೇಳುವ ಪ್ರಯತ್ನ ನಾವು ಮಾಡುತ್ತಿದ್ದೇವೆ. ಸೋಷಿಯಲ್ ಮಿಡಿಯಾ ಮೂಲಕ ದ್ವೇಷ ರಾಜಕಾರಣ ಮಾಡುವ ಕೆಲಸವನ್ನು ಕೆಲ ಸಂಘಟನೆಗಳು ಮಾಡುತ್ತಿವೆ. ಅದಕ್ಕೆಲ್ಲಾ ಇಂತಿಶ್ರೀ ಹಾಕುವ ಕೆಲಸವನ್ನು ನಮ್ಮ ದಕ್ಷ ಪೊಲೀಸ್ ಅಧಿಕಾರಿಗಳು ಮಾಡುತ್ತಿದ್ದಾರೆ. ಸದ್ಯ ಸಾಕಷ್ಟು ಸುಧಾರಣೆ ಆಗುತ್ತಿದೆ. ಆ ಕಾರಣದಿಂದ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ‌. 

Related Articles

Back to top button