Belagavi NewsBelgaum NewsKannada NewsKarnataka NewsPolitics

*ಅಸಮರ್ಪಕ ರಸ್ತೆ ಕಾಮಗಾರಿ ಖಂಡಿಸಿ ಕರೆ ನೀಡಿದ್ದ ಖಾನಾಪುರ ಬಂದ್ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಪಣಜಿ ರಾಷ್ಟ್ರೀಯ ಹೆದ್ದಾರಿ ಎಂದೇ ಕರೆಯಲ್ಪಡುವ ಪಟ್ಟಣದ ಹೊರವಲಯದ ಗೋವಾ ಕ್ರಾಸ್ ನಿಂದ ಮರಾಠಾ ಮಂಡಳ ಕಾಲೇಜ್ ವರೆಗಿನ ಹೆದ್ದಾರಿಯಲ್ಲಿ ಗುತ್ತಿಗೆದಾರರು ನಡೆಸಿರುವ ಅಸಮರ್ಪಕ ಕಾಮಗಾರಿಯನ್ನು ಖಂಡಿಸಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಭಾಗದ ನಾಗರಿಕರು, ವ್ಯಾಪಾರಸ್ಥರು, ಸಾರ್ವಜನಿಕರು ಗುರುವಾರ ಕರೆ ನೀಡಿದ್ದ ಖಾನಾಪುರ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿಗೊಂಡಿದೆ.

ಬಂದ್ ಹಿನ್ನೆಲೆಯಲ್ಲಿ ಇಡೀ ದಿನ ಪಟ್ಟಣದಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು. ಬಂದ್ ಗೆ ಸ್ಥಳೀಯ ವ್ಯಾಪಾರಸ್ಥರು, ವಾಣಿಜ್ಯ ಉದ್ಯಮಿಗಳು, ವಿವಿಧ ಸಂಘ-ಸಂಸ್ಥೆಗಳು, ಹೋಟೆಲ್ ಮಾಲೀಕರು, ದಿನಸಿ ವರ್ತಕರು ಸೇರಿದಂತೆ ಹಲವರ ಬೆಂಬಲ ಲಭಿಸಿತ್ತು. 

ಶಾಲಾ ಕಾಲೇಜುಗಳು, ಬ್ಯಾಂಕ್ ಸರ್ಕಾರಿ ಕಚೇರಿಗಳು, ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಹೊರತುಪಡಿಸಿ ಉಳಿದ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಳಿಸಿ ಬಂದ್ ಆಚರಿಸಲಾಯಿತು.

ಗುರುವಾರ ಬೆಳಗ್ಗೆ ಶಿವಸ್ಮಾರಕ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಕೈಗೊಂಡರು. ಶಿವಸ್ಮಾರಕ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿದರು. ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ರಸ್ತೆ ದುರವಸ್ಥೆಗೆ ಕಾರಣರಾದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮತ್ತು ಕಾಮಗಾರಿಯ ಗುತ್ತಿಗೆದಾರರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Home add -Advt

ಮನವಿ ಸಲ್ಲಿಸಿ ಮಾತನಾಡಿದ ಪ್ರತಿಭಟನಾಕಾರರು, “ಹೆದ್ದಾರಿ ಕಾಮಗಾರಿ ಕುಂಟುತ್ತ ಸಾಗುತ್ತಿದೆ, ಗುತ್ತಿಗೆದಾರರು ಅಲ್ಲಲ್ಲಿ ರಸ್ತೆಯನ್ನು ಅಗೆದು ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ್ದಾರೆ, ಮೀನು ಮಾರುಕಟ್ಟೆ ಬಳಿ ಸೇತುವೆ ನಿರ್ಮಾಣದ ಕಾಮಗಾರಿಗಾಗಿ ರಸ್ತೆಯನ್ನು ಅಗೆದ ಕಾರಣ ನಾಲ್ಕು ತಿಂಗಳಿಂದ ಈ ಮಾರ್ಗದಲ್ಲಿ ಬಸ್ ಸೇರಿದಂತೆ ವಾಹನ ಸಂಚಾರ ಸ್ಥಗಿತವಾಗಿದೆ. ಮಾಚರ್್ 10 ರ ಒಳಗಾಗಿ ಒಂದು ಬದಿಯ ಕಾಮಗಾರಿಯನ್ನು ಪೂರ್ಣವಾಗಿ ಮುಗಿಸಿಕೊಡಬೇಕು. ಮೀನು ಮಾರುಕಟ್ಟೆ ಬಳಿ ಮುಖ್ಯ ರಸ್ತೆ ಕಾಮಗಾರಿಗೆ ಕಾನೂನು ಅಡಚಣೆ ಇದ್ದಲ್ಲಿ ಖಾನಾಪುರ ನಕಾಶೆಯಲ್ಲಿ ನಮೂದು ಇರುವ ನಾವಿ ರಸ್ತೆಯನ್ನು ನಿರ್ಮಿಸಿಕೊಡಬೇಕು. ಗೋವಾ ಕ್ರಾಸ್ ನಿಂದ ಇದೇ ರಸ್ತೆ ಮೂಲಕ ಖಾನಾಪುರ ಬಸ್ ಸ್ಟ್ಯಾಂಡ್ ವರೆಗೆ ಮತ್ತು ಬಸ್ ಸ್ಟ್ಯಾಂಡ್ ನಿಂದ ಗಾಂಧಿನಗರ, ಕೋರ್ಟ್ ಮಾರ್ಗವಾಗಿ ಬೆಳಗಾವಿ ಕಡೆಗೆ ಬಸ್ ಗಳು ಸಂಚರಿಸಲು ಅನುಕೂಲ ಮಾಡಿಕೊಡಬೇಕು. ಇದಕ್ಕೆ ತಪ್ಪಿದಲ್ಲಿ ಮಾ.11ರಿಂದ ಉಗ್ರ ಹೋರಾಟ ಮಾಡಲಾಗುತ್ತದೆ” ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿದ ತಹಸೀಲ್ದಾರ್ ದುಂಡಪ್ಪ ಕೋಮಾರ ಮತ್ತು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಂತೋಷ ಕುರಬೆಟ್ ಹಾಗೂ ಇತರರು ಪ್ರತಿಭಟನಾಕಾರರ ಜೊತೆ ಪಟ್ಟಣದ ಮೀನು ಮಾರುಕಟ್ಟೆ ಬಳಿಯ ಸ್ಥಗಿತಗೊಂಡಿದ್ದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಬಳಿಕ ತಹಸೀಲ್ದಾರ್ ಗುತ್ತಿಗೆದಾರರನ್ನು ಸಂಪರ್ಕಿಸಿ ಒಂದು ವಾರದ ಒಳಗೆ ಒಂದು ಭಾಗದ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಬಗ್ಗೆ ಮತ್ತು ರಸ್ತೆಯ ವಿವಿಧೆಡೆ ಇರುವ ಅಡಚಣೆಗಳನ್ನು ದೂರಗೊಳಿಸುವಂತೆ ಸೂಚಿಸಿದರು. ಮಧ್ಯಾಹ್ನದ ಬಳಿಕ ಶಾಸಕ ವಿಠ್ಠಲ ಹಲಗೇಕರ ಅಧಿಕಾರಿಗಳ ಸಭೆ ನಡೆಸಿ ಈ ವಿಷಯವಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಿದರು. ಶಾಸಕರು ಮತ್ತು ತಹಸೀಲ್ದಾರರಿಂದ ಕಾಮಗಾರಿಗೆ ಇರುವ ಅಡಚಣೆಗಳನ್ನು ದೂರಗೊಳಿಸಿ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.  

ಈ ಸಂದರ್ಭದಲ್ಲಿ ಮಹಾಂತೇಶ ರಾಹೂತ, ಶಿವಶಂಕರ ಕಟ್ಟಿಮನಿ, ಆದರ್ಶ ರಾಹೂತ, ವಿನೋದ ಉಂಡಿ, ಮಲ್ಲೇಶಿ ಪೋಳ ಸೇರಿದಂತೆ ಹಾಗೂ ಸ್ಥಳೀಯರು ಇದ್ದರು.

Related Articles

Back to top button