*ಏಕಕಾಲಕ್ಕೆ 24 ಗ್ರಾಮ ಪಂಚಾಯತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ *

ಪ್ರಗತಿವಾಹಿನಿ ಸುದ್ದಿ: ಅನುದಾನಗಳ ದುರ್ಬಳಕೆ ಆರೋಪ, ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿರುವ ಆರೋಪದ ಮೇಲೆ ಧಾರವಾಡ ಜಿಲ್ಲೆಯ 24 ಗ್ರಾಮ ಪಂಚಾಯತಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿರುವ ಘಟನೆ ನಡೆದಿದೆ.
ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇರ ಉಸ್ತುವಾರಿಯಲ್ಲಿ ಈ ಬೃಹತ್ ಬೇಟೆ ನಡೆದಿದೆ. ಲೋಕಾಯುಕ್ತದ ಹಲವು ಇನ್ಸ್‌ಪೆಕ್ಟರ್‌ಗಳನ್ನೊಳಗೊಂಡ ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಿ, ಅತ್ಯಂತ ರಹಸ್ಯವಾಗಿ 24 ಸ್ಥಳಗಳಿಗೂ ಏಕಕಾಲಕ್ಕೆ ರವಾನಿಸಲಾಗಿತ್ತು.
ಇಂದು ಬೆಳ್ಳಂ ಬೆಳಗ್ಗೆ ಧಾರವಾಡ ಜಿಲ್ಲೆಯಾದ್ಯಂತ ಒಟ್ಟು 24 ಗ್ರಾಮ ಪಂಚಾಯಿತಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿದ್ದು, ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ತಬ್ಬಿಬ್ಬಾಗಿ ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ಭೀತಿ ಸೃಷ್ಟಿಸಿದೆ.
ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಲಂಚದ ಬೇಡಿಕೆ ಇಡಲಾಗುತ್ತಿದೆ ಮತ್ತು ಸರ್ಕಾರದ ಕೋಟ್ಯಾಂತರ ರೂಪಾಯಿಗಳ ಅಭಿವೃದ್ಧಿ ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಜನಸಾಮಾನ್ಯರಿಂದ ಸರಣಿ ದೂರುಗಳು ಸಲ್ಲಿಕೆಯಾಗಿದ್ದವು. ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ನೈಜ ಕಾಮಗಾರಿಗಳನ್ನು ನಡೆಸದೆಯೇ, ಕೇವಲ ಕಾಗದದ ಮೇಲೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಂಪೂರ್ಣ ಹಣವನ್ನು ಲೂಟಿ ಮಾಡಲಾಗಿದೆ ಎಂಬ ಆಘಾತಕಾರಿ ಆರೋಪಗಳು ಕೇಳಿಬಂದಿವೆ.
ಈ ಲಿಖಿತ ದೂರುಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ವಿಭಾಗವು, ಗುಪ್ತವಾಗಿ ದಾಳಿಗೆ ಸಕಲ ಸಿದ್ಧತೆ ಮಾಡಿಕೊಂಡು ಈ ಯಶಸ್ವಿ ಆಪರೇಷನ್ ನಡೆಸಿದೆ.
ಇದರೊಂದಿಗೆ ಗ್ರಾಮೀಣ ಭಾಗದಲ್ಲಿ ಮಾಡಲಾಗಿರುವ ರಸ್ತೆ ಚರಂಡಿ ಇತ್ಯಾದಿ ಅಭಿವೃದ್ಧಿ ಕೆಲಸಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆಕ್ಷೇಪಗಳೂ ಇವೆ. ಈ ಹಿನ್ನೆಲೆಯಲ್ಲಿ ಕಚೇರಿಗಳಿಗೆ ನುಗ್ಗಿದ ಅಧಿಕಾರಿಗಳ ತಂಡವು ಅಭಿವೃದ್ಧಿ ಯೋಜನೆಗಳ ಫೈಲ್‌ಗಳು, ಹಣಕಾಸು ವಹಿವಾಟಿನ ರಸೀದಿಗಳು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸಿದೆ.
ಸದ್ಯ ಪಂಚಾಯಿತಿ ಕಚೇರಿಗಳಲ್ಲಿ ಕಡತಗಳ ಪರಿಶೀಲನೆ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು ಈ ಪರಿಶೀಲನೆ ಸಂಪೂರ್ಣ ಮುಗಿದ ಬಳಿಕವಷ್ಟೇ ನಡೆದಿರುವ ಒಟ್ಟು ಅಕ್ರಮಗಳು ಹಾಗೂ ಸಿಕ್ಕಿಬಿದ್ದ ಅಧಿಕಾರಿಗಳ ಕರಾಳ ಮುಖದ ಸಂಪೂರ್ಣ ವಿವರ ಹೊರಬರಬೇಕಿದೆ.



