Belagavi NewsBelgaum NewsKannada NewsKarnataka NewsLatest

*ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಕಾನೂನು ಅರಿವು ಅಗತ್ಯ: ವಿದ್ಯಾರ್ಥಿಗಳಿಗೆ ಜಾಗೃತಿ*

ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ: ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ಡ್ರಗ್ಸ್ ಮುಕ್ತ ಕರ್ನಾಟಕವನ್ನಾಗಿಸುವುದು ಎಲ್ಲರ‌ ಜವಾಬ್ದಾರಿಯಾಗಿದೆ. ಸುತ್ತಮುತ್ತ ಡ್ರಗ್ಸ್ ಚಟುವಟಿಕೆಗಳು ಕಂಡಾಗ KSP App ಮೂಲಕ ಸುಲಭವಾಗಿ ಮಾಹಿತಿ ಒದಗಿಸುವಂತೆ ಮತ್ತು ತುರ್ತು ಪರಿಸ್ಥಿತಿಗೆ 112 ಹಾಗೂ ಡ್ರಗ್ಸ್ ಬಗ್ಗೆ ಮಾಹಿತಿ ನೀಡಲು 1908 ನಂಬರಿಗೆ ಕರೆ ಮಾಡಿದರೆ ಪೊಲೀಸ್ ಇಲಾಖೆ ತಕ್ಷಣ ಕ್ರಮಕ್ಕೆ ಮುಂದಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳುವ ಕಾರ್ಯಕ್ರಮಗಳು ನಡೆದವು.

ಈ ನಿಮಿತ್ತ ಬೆಂಗಳೂರಿನಲ್ಲಿ ‌ನಡೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮತ್ತು ಗೃಹ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಅವರು ಭಾಗವಹಿಸಿದ ಕಾರ್ಯಕ್ರಮದ ನೇರ ಪ್ರಸಾರವನ್ನು ಬೆಳಗಾವಿ ನಗರದ‌ ಜೆಜಿಐ ಸಂಸ್ಥೆಯ ‌ಜೈನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಪರಶುರಾಮ ಪೂಜಾರಿ, ನೇತ್ರಾವತಿ ಪಾಟೀಲ ಅವರು ಉಪಸ್ಥಿತರಿದ್ದು ಅಪರಾಧಗಳ ರೀತಿ ಹಾಗೂ ಅವುಗಳನ್ನು ತಡೆಗಟ್ಟಲು ಜಾರಿಗೊಳಿಸಲಾದ ಕಾನೂನುಗಳ ಬಗ್ಗೆ ಅರಿವು ಮೂಡಿಸಿದರು.

Home add -Advt

ಡ್ರಗ್ಸ್ ಮುಕ್ತ ಸಮಾಜ ಸ್ವಾಸ್ಥ್ಯ ಸಮಾಜದ ಗುರುತು. ಯುವಕರು ಗೊತ್ತಿದ್ದು, ಗೊತ್ತಿಲ್ಲದೆ ಅಪರಾಧಿ ಪ್ರಕರಣಗಳ ಜಾಲದಲ್ಲಿ ಸಿಲುಕಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಹಾಗಾಗದಂತೆ ಎಚ್ಚರ ವಹಿಸಿ ಜೀವನ ನಡೆಸಬೇಕು. ಅಪರಾಧಗಳು ಹೆಚ್ಚಾದಂತೆ ಕಾನೂನುಗಳು ಕಠಿಣ ರೀತಿಯಲ್ಲಿ ಮಾತನಾಡುತ್ತವೆ. ಯುವಕರು ಅಪರಾಧಿ ಸ್ಥಾನದಲ್ಲಿ ನಿಂತು ಕಾನೂನು ಎದುರಿಸಲು ಮುಂದಾದರೆ ಇಡೀ‌ ಜೀವನ ವ್ಯರ್ಥವಾಗುತ್ತದೆ. ಪೋಕ್ಸೊದಂತ ಕಾಯ್ದೆಗಳು ನಾನ್ ಬೆಲೆಬಲ್ ಆಗಿ ಕೆಲಸ ಮಾಡುತ್ತಿವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಪರಶುರಾಮ ಪೂಜಾರಿ ತಿಳಿ ಹೇಳಿದರು.

ಮನುಷ್ಯನಿಗೆ ಬದುಕು ಮುಖ್ಯ. ಅದು‌ ಹಾಳಾಗದಂತೆ ಎಚ್ಚರ ವಹಿಸಿ, ಸಾಧನೆ, ಗುರಿಯತ್ತ ಸಾಗುವ ಮಹದಾಸೆಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಓದಿನತ್ತ ಲಕ್ಷವಿರಲಿ. ಕಾನೂನು ತಿಳಿವಳಿಕೆ ಇರಲಿ ಎಂದು ಇನ್ನೋರ್ವ ಪೊಲೀಸ್ ಇನ್ಸ್ಪೆಕ್ಟರ್ ನೇತ್ರಾವತಿ ಪಾಟೀಲ ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ ಪಾಟೀಲ, ಪದವಿ ಕಾಲೇಜಿನ ಉಪ ಪ್ರಾಚಾರ್ಯ ಪ್ರೊ. ರಾಜೇಶ್ ಪ್ರಭು ಸೇರಿದಂತೆ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Related Articles

Back to top button