Karnataka NewsLatestPolitics

*ಶಾಶ್ವತ ನಿವಾಸಿ ಪ್ರಮಾಣಪತ್ರ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದು ಯಾರು? ಆರ್.ಅಶೋಕ್ ಪ್ರಶ್ನೆ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ‘ಮನೆ ಬಾಗಿಲಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (PRC)’ ವಿತರಣೆಗೆ ಚಾಲನೆ ನೀಡಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಸರ್ಕಾರ ಇದನ್ನು ಆಡಳಿತ ಸುಧಾರಣೆ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆಯಾದರೂ, ಇದು ಮೂಲತಃ ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಕ್ರಮ ಎಂಬುದನ್ನು ರಾಜ್ಯದ ಜನರು ಅರಿಯಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.

ಇಷ್ಟಕ್ಕೂ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದು ಯಾರು? ಎಂದು ಆರ್.ಅಶೋಕ್ ಪ್ರಶ್ನಿಸಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನ ಅಧಿಕಾರದ ಮಿತಿಯನ್ನು ಮೀರಿ ನಡೆದುಕೊಳ್ಳುತ್ತಿರುವುದು ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಯುತ್ತಿರುವ ಈ ಸಂದರ್ಭದಲ್ಲಿ ಇಂತಹ ಪ್ರಮಾಣಪತ್ರಗಳನ್ನು ಮನೆ ಮನೆಗೆ ವಿತರಿಸುವ ಆತುರ ಏಕೆ? ಇದರ ಹಿಂದೆ ಇರುವ ಉದ್ದೇಶವೇನು? ಅಕ್ರಮ ವಲಸಿಗರು ಅಥವಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳಲು ಈ ಸರ್ಕಾರ ಬಾಗಿಲು ತೆರೆಯುತ್ತಿದೆಯೇ ಎಂಬ ಅನುಮಾನಗಳು ಸಹಜವಾಗಿ ಮೂಡುತ್ತಿವೆ. ರಾಷ್ಟ್ರೀಯ ಭದ್ರತೆ ಮತ್ತು ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆಗೆ ಧಕ್ಕೆ ತರುವ ಯಾವುದೇ ಕ್ರಮವನ್ನು ಬಿಜೆಪಿ ಸಹಿಸುವುದಿಲ್ಲ.

ಕಂದಾಯ ಇಲಾಖೆಯ ಮೂಲಕ ಈ ಪ್ರಮಾಣಪತ್ರ ವಿತರಣೆಗೆ ಮುಂದಾಗಿರುವುದು ಭ್ರಷ್ಟಾಚಾರ, ನಕಲಿ ದಾಖಲೆಗಳ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗಕ್ಕೆ ಅವಕಾಶ ಕಲ್ಪಿಸುವ ಅಪಾಯಕಾರಿ ನಿರ್ಧಾರವಾಗಿದೆ. ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ರಾಜ್ಯದ ಭವಿಷ್ಯವನ್ನು ಪಣಕ್ಕಿಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ತಕ್ಷಣ ನಿಲ್ಲಿಸಬೇಕು ಎಂದಿದ್ದಾರೆ.

Home add -Advt

ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೆ ಪರಿಣಾಮ ಬೀರುವ ಯಾವುದೇ ಕ್ರಮವನ್ನು ನಾವು ಒಪ್ಪುವುದಿಲ್ಲ. ಆಡಳಿತದ ಹೆಸರಿನಲ್ಲಿ ಸಂವಿಧಾನವನ್ನು ಉಲ್ಲಂಘಿಸಲು ಯಾರಿಗೂ ಅಧಿಕಾರವಿಲ್ಲ.

ಈ ಸಂವಿಧಾನಬಾಹಿರ ‘ಶಾಶ್ವತ ನಿವಾಸಿ ಪ್ರಮಾಣಪತ್ರ’ (PRC) ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ, ಸರ್ಕಾರ ಹೊರಡಿಸಿರುವ ಪ್ರಸ್ತಾವನೆಯನ್ನು ಹಿಂಪಡೆಯಬೇಕು ಎಂದು ನಾನು ಮತ್ತೊಮ್ಮೆ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ.

ಸಂವಿಧಾನದ ಆಶಯಗಳು, ಕನ್ನಡಿಗರ ಹಕ್ಕುಗಳು ಮತ್ತು ದೇಶದ ಆಂತರಿಕ ಭದ್ರತೆಯ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಈ ಸಂವಿಧಾನ ಬಾಹಿರ ನಡೆ ವಿರುದ್ಧ ನಾವು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಹೋರಾಡುತ್ತೇವೆ. ರಾಷ್ಟ್ರೀಯ ಭದ್ರತೆಗೆ ಮಾರಕವಾಗಿರುವ ಇದರ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜನಾಂದೋಲನ ಕಟ್ಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Related Articles

Back to top button