*ಮತ್ತೆ ಮುಂದೂಡಲ್ಪಟ್ಟ ಸಚಿವ ಸಂಪುಟ ವಿಸ್ತರಣೆ: ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತೆ ವಿಳಂಬವಾಗಿದೆ. ಇಂದೇ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ನೂತನ ಸಚಿವರ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಈಗ ಇನ್ನೂ ಎರಡು ಮೂರು ದಿನ ಮುಂದೂಡಿಕೆಯಾಗಲಿದೆ ಎನ್ನಲಾಗಿದೆ.
ಹೈಕಮಾಂಡ್ ನಾಯಕರ ಅಲಭ್ಯತೆಯಿಂದಾಗಿ ನೂತನ ಸಚಿವರ ಪಟ್ಟಿಗೆ ಅಂಕಿತ ಹಾಕುವುದು ವಿಳಂಬವಾಗುತ್ತಿದೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಲಿದ್ದು, ವಾರಾಂತ್ಯದಲ್ಲಿ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರೊಂದಿಗೆ ಅಂತಿಮ ಸುತ್ತಿನ ಚರ್ಚೆ ನಡೆಸುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಂಧನದ ಬೆಳವಣಿಗೆಯಿಂದ ಸಂಪುಟ ವಿಸ್ತರಣೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಿದರು. ಸಂಪುಟ ವಿಸ್ತರಣೆಯನ್ನು ಮುಂದೂಡಲು ಇಷ್ಟವಿಲ್ಲ. ಆದರೂ, ಅಂತಿಮ ತೀರ್ಮಾನವು ಹೈಕಮಾಂಡ್ ಲೆಕ್ಕಾಚಾರದಂತೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಸಂಪುಟ ವಿಸ್ತರಣೆ ವೇಳೆ ಹಿರಿಯರು ಮತ್ತು ಕಿರಿಯರಿಗೆ ಸಮಾನ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಸಚಿವ ಸ್ಥಾನಕ್ಕೆ ಅರ್ಹರಾದ ಅನೇಕರು ಇದ್ದು, ಸಾಧ್ಯವಾದಷ್ಟು ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಆಶಯವಿದೆ ಎಂದರು.




