*ಬೈಪಾಸ್ ರಸ್ತೆ ಬಿಡ್ಡಿಂಗ್ ಅನುಮೋದಿಸಲು ಕೇಂದ್ರ ಸಚಿವರಲ್ಲಿ ಮನವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಹತ್ತಿರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಕೈಕೊಳ್ಳಬೇಕಾದ ೪/೬ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಬಿಡ್ಡಿಂಗ್ ಪ್ರಕ್ರಿಯೆಗೆ ಅನುಮತಿಸುವ ಕುರಿತಾಗಿ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಅವರು, ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಇವರನ್ನು ನವ-ದೆಹಲಿಯ ನೂತನ ಸಂಸದ ಭವನದ ಅವರ ಕೊಠಡಿಯಲ್ಲಿ ಭೇಟಿ ಮಾಡಿ, ಮನವಿ ಅರ್ಪಿಸಿದರು.
ವಾಹನಗಳ ಸುಗಮ ಸಂಚಾರಕ್ಕಾಗಿ ಬೆಳಗಾವಿ ನಗರಕ್ಕೆ ಹೊಂದಿಕೊಂಡು ಪ್ಯಾಕೇಜ್ -1 / 2 / 3 ರಡಿ ಸುಮಾರು 70 ಕಿ.ಮಿ ಬೈಪಾಸ್ ರಸ್ತೆ ನಿರ್ಮಿಸಬೇಕಿದೆ. ಅದರಂತೆ ಪ್ಯಾಕೇಜ್ -1 ರಡಿ ( Km 11.00 (Goa side) of NH-4A to Km 516.000 (Pune side) of NH-4) ಸುಮಾರು 35 ಕಿ.ಮಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಶೇ: ೮೦% ರಷ್ಟು ಭೂಸ್ವಾಧೀನ ಕಾರ್ಯ ಹಾಗೂ ಶೇ: ೮೮% ರಷ್ಟು ಪರಿಹಾರಧನ ವಿತರಣೆ ಕಾರ್ಯ ಮುಕ್ತಾಯವಾಗಿದೆ.
ಆದರೆ ಪ್ಯಾಕೇಜ್ -1 ರಡಿ ಬರುವ ರಸ್ತೆ ನಿರ್ಮಣ ಕಾರ್ಯ ಪ್ರಾರಂಭಕ್ಕೆ ಪ್ಯಾಕೇಜ್ 2 ಮತ್ತು 3 ರಡಿ ಗುರುತು ಪಡಿಸಿದ ಭೂಸ್ವಾಧೀನ ಕಾರ್ಯ ಮತ್ತು ಪರಿಹಾರ ಧನ ವಿತರಣೆ ಕಾರ್ಯ ಮುಕ್ತಾಯವಾದ ತದನಂತರವಷ್ಟೆ ಎಲ್ಲ ಮೂರು ಪ್ಯಾಕೇಜ್ ದಡಿ ಬರುವ ರಸ್ತೆ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸೂಚಿಸಿದ್ದು ಇದ್ದು, ಇದನ್ನು ಸರಿಪಡಿಸಿ ಬೆಳಗಾವಿ ನಗರದಲ್ಲಿ ವಾಹನ ದಟ್ಟಣೆ ತಡೆಯಲು ಹಾಗೂ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಪ್ಯಾಕೇಜ್-೧ ರಡಿಯ ೩೫ ಕಿಮಿ ರಸ್ತೆ ನಿರ್ಮಾಕ್ಕೆ ‘ಬಿಡ್ಡಿಂಗ್’ ಅಹ್ವಾನಿಸಲು ಅನುಮೋದನೆ ನೀಡಿ, ರಸ್ತೆ ಕಾಮಗಾರಿ ಪ್ರಾರಂಭಕ್ಕೆ ಅನುಕೂಲತೆ ಮಾಡುವಂತೆ ಸಂಸದರು ಪ್ರಸ್ತಾಪಿಸಿದರು.
ಅದರಂತೆ, ಇನ್ನು ಬೆಳಗಾವಿ – ಹುನಗುಂದ – ರಾಯಚೂರು ಮಾರ್ಗವಾಗಿ ನೂತನ ೬-ಲೇನ್ ರಸ್ತೆ ನಿರ್ಮಾಣ ಕಾರ್ಯದಲ್ಲಿ, ಬೆಳಗಾವಿ, ಬೈಲಹೊಂಗಲ, ರಾಮದುರ್ಗ ತಾಲೂಕಿನಡಿ ಬರುವ ಕೆಲವು ಗ್ರಾಮಗಳಲ್ಲಿ ರೈತರು ಅವರ ಹೊಲಗಳಿಗೆ ಹೋಗಲು ಸಂಪರ್ಕ ರಸ್ತೆ ಒದಗಿಸಲಾಗಿಲ್ಲ, ಇದರಿಂದಾಗಿ ರೈತರು ಸಾಕಷ್ಟು ತೊಂದರೆ ಅನುಭವಿಬೇಕಾಗಿದೆ. ಪ್ರಯುಕ್ತ ರೈತರಿಗೆ ಅನುಕೂಲವಾಗಲು ಪ್ರಸ್ತಾಪಿತ ನೂತನ ಮಾರ್ಗದಲ್ಲಿ ಅಗತ್ಯವಾದ ಪ್ರದೇಶದಲ್ಲಿ ಸಂಪರ್ಕ ರಸ್ತೆ ಕಲ್ಪಸಲು ಕ್ರಮವನ್ನು ಕೈಕೊಳ್ಳಲು ಸಹ ಸಂಸದರು ಸಚಿವರಲ್ಲಿ ಮನವಿ ಮಾಡಿದರು.
ಪ್ರಸ್ತಾಪಿತ ಎರಡೂ ಬೇಡಿಕೆಗಳನ್ನು ಸಹಾನುಭೂತಿಯಿಂದ ಅವಲೋಕಿಸಿದ ಕೇಂದ್ರ ಸಚಿವರು, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೀಘ್ರ ಕ್ರಮ ಕೈಕೊಳ್ಳುವ ಬಗ್ಗೆ ಭರವಸೆಯನ್ನು ತಮಗೆ ನೀಡಿರುವ ಕುರಿತು ಜಗದೀಶ ಶೆಟ್ಟರ ತಿಳಿಸಿದ್ದಾರೆ.




