ಪ್ರಗತಿವಾಹಿನಿ ಸುದ್ದಿ: ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮಾಚರಣೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ವೇಳೆ ಥಾರ್ ಕಾರ್ ನಾಲ್ಕೈದು ಬಾರಿ ಪಲ್ಟಿಯಾಗಿ ಗದ್ದೆಗೆ ಬಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ನಡೆದಿದೆ.
ಬೆಂಗಳೂರಿನ ನೆಲಮಂಗಲ ತಾಲೂಕಿನ ಕಂಬಾಳು ಗ್ರಾಮದ ಬಳಿ ಈ ಘಟನೆ ನಡೆದಿದೆ. ಪವನ್ ಹಾಗೂ ದೀಪಕ್ ಮೃತಪಟ್ಟ ದುರದೃಷ್ಟಕರ ಯುವಕರು.
ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೂವರನ್ನು ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ರಾತ್ರಿ ಗೆಳೆಯನ ಜನ್ಮದಿನ ಆಚರಿಸಿಕೊಂಡು ಐವರೂ ಥಾರ್ ಜೀಪ್ನಲ್ಲಿ ವಾಪಸ್ ಹೊರಟಿದ್ದರು. ಕಂಬಾಳು ಗ್ರಾಮದ ಕೆರೆ ರಸ್ತೆಯಲ್ಲಿ ಚಲಿಸುತ್ತಿದ್ದಾಗ, ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆಯಿಂದ ನಾಲ್ಕೈದು ಬಾರಿ ಪಲ್ಟಿಯಾಗಿ ಪಕ್ಕದ ಗದ್ದೆಗೆ ಬಿದ್ದಿದೆ. ವಾಹನದ ಅತಿಯಾದ ವೇಗವೇ ಈ ಭೀಕರ ದುರಂತಕ್ಕೆ ಮುಖ್ಯ ಕಾರಣವೆಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ದಾಬಸ್ಪೇಟೆ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




