*ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್*: *ಪೊಲೀಸರ ಮುಂದೆ ಬಂದ ಪ್ರಪಾತಕ್ಕೆ ತಳ್ಳಿದ್ದನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿ*

ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರದ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (26) ನಿಗೂಢ ಸಾವಿನ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಲೋಹಗಡ್ ಕೋಟೆಯಲ್ಲಿ ಕೇತನ್ ಅವರನ್ನು ಪ್ರಮುಖ ಆರೋಪಿ ಚೇತನ್ ಚೌಧರಿ ಪ್ರಪಾತಕ್ಕೆ ತಳ್ಳಿದ್ದನ್ನು ತಾನು ಕಣ್ಣಾರೆ ಕಂಡಿರುವುದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಘಟನೆ ನಡೆದ ಐದು ದಿನಗಳ ಬಳಿಕ ಈ ಸಾಕ್ಷಿ ಪೊಲೀಸರನ್ನು ಸಂಪರ್ಕಿಸಿರುವುದು ತನಿಖೆಯಲ್ಲಿ ಪ್ರಮುಖ ಬೆಳವಣಿಗೆಯಾಗಿದೆ.
ಜೂನ್ 18ರಂದು ಸ್ನೇಹಿತನ ಕುಟುಂಬದೊಂದಿಗೆ ಸಾಕ್ಷಿಯು ಲೋಹಗಡ್ ಕೋಟೆಗೆ ತೆರಳಿದ್ದರು. ಮೆಟ್ಟಿಲು ಹತ್ತುವ ವೇಳೆ ಕೇತನ್ ಮತ್ತು ಅವರ ಭಾವಿ ಪತ್ನಿ ಸಿಯಾ ಗೋಯಲ್ ಮುಂದೆ ಸಾಗುತ್ತಿದ್ದರೆ, ಚೇತನ್ ಅವರನ್ನು ಹಿಂಬಾಲಿಸುತ್ತಿದ್ದ. ಬೇಸಿಗೆಯಲ್ಲೂ ಚೇತನ್ ಹುಡಿ ಧರಿಸಿದ್ದರಿಂದ ಆತನ ಮುಖ ಸಾಕ್ಷಿಯ ಗಮನದಲ್ಲಿ ಉಳಿದಿತ್ತು. ಕೋಟೆಯ ಮೇಲ್ಭಾಗ ತಲುಪಿದ ಬಳಿಕ ಸಿಯಾ ಸನ್ನೆ ಮಾಡಿದ ತಕ್ಷಣ ಕೇತನ್ ಕಾಲಿಗೆ ಒದ್ದಿದ್ದಳು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದಾದ ಕೆಲವೇ ಕ್ಷಣಗಳಲ್ಲಿ ಚೇತನ್ ಹಿಂದಿನಿಂದ ಓಡಿ ಬಂದು ಕೇತನ್ ಅವರನ್ನು ಪ್ರಪಾತಕ್ಕೆ ತಳ್ಳಿದ್ದಾನೆ ಎಂದು ಸಾಕ್ಷಿ ತಿಳಿಸಿದ್ದಾರೆ. ಘಟನೆ ಬಗ್ಗೆ ಚೇತನ್ನನ್ನು ಪ್ರಶ್ನಿಸಿದಾಗ, ಯಾರಿಗಾದರೂ ವಿಷಯ ತಿಳಿಸಿದರೆ ತನ್ನನ್ನೂ ಕೋಟೆಯಿಂದ ಕೆಳಗೆ ತಳ್ಳಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಹೀಗಾಗಿ ಭಯದಿಂದ ಮತ್ತು ಜ್ವರದಿಂದ ಬಳಲುತ್ತಿದ್ದ ಸಾಕ್ಷಿ ತಕ್ಷಣ ಪೊಲೀಸರನ್ನು ಸಂಪರ್ಕಿಸಿರಲಿಲ್ಲ. ಜೂನ್ 23ರಂದು ಮಾಧ್ಯಮಗಳಲ್ಲಿ ಪ್ರಕರಣದ ವರದಿಗಳನ್ನು ನೋಡಿದ ಬಳಿಕ ಧೈರ್ಯ ಮಾಡಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.
ಸಾಕ್ಷಿಯ ಹೇಳಿಕೆಯ ಜೊತೆಗೆ ಪ್ರಕರಣದ ತನಿಖೆಯಲ್ಲಿ ಪೊಲೀಸರು ದೊಡ್ಡ ಪ್ರಮಾಣದ ಡಿಜಿಟಲ್ ಸಾಕ್ಷ್ಯಗಳನ್ನೂ ಪರಿಶೀಲಿಸಿದ್ದಾರೆ. ಪುಣೆ ಗ್ರಾಮಾಂತರ ಪೊಲೀಸರು 5,053 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದು, ಸುಮಾರು 12 ಟಿಬಿ ಡಿಜಿಟಲ್ ಡೇಟಾ, ಆರು ಮೊಬೈಲ್ ಫೋನ್ಗಳು ಮತ್ತು ಒಂಬತ್ತು ಪೆನ್ಡ್ರೈವ್ಗಳನ್ನು ಪರಿಶೀಲಿಸಿದ್ದಾರೆ. ಡಿಲೀಟ್ ಮಾಡಲಾಗಿದ್ದ ಚಾಟ್ಗಳು ಹಾಗೂ ಐಫೋನ್ ಡೇಟಾ ಅಳಿಸುವ ಕುರಿತು ಗೂಗಲ್ನಲ್ಲಿ ನಡೆಸಿದ್ದ ಹುಡುಕಾಟದ ಮಾಹಿತಿಯನ್ನೂ ವಿಧಿವಿಜ್ಞಾನ ತಂಡ ಮರುಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಯಾ ಗೋಯಲ್, ಚೇತನ್ ಚೌಧರಿ ಮತ್ತು ಆತನ ಸ್ನೇಹಿತ ರಿತೇಶ್ ಹಾಂಗೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ಪ್ರತ್ಯಕ್ಷದರ್ಶಿಯ ಹೇಳಿಕೆ ಹಾಗೂ ಡಿಜಿಟಲ್ ಸಾಕ್ಷ್ಯಗಳು ಪ್ರಕರಣದ ತನಿಖೆಯಲ್ಲಿ ಪ್ರಮುಖ ಅಂಶಗಳಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


