CrimeKannada NewsKarnataka NewsLatest

*ಬೆಂಗಳೂರಲ್ಲಿ ಆನೆ ದಾಳಿ*: *ವಾಕಿಂಗ್ ಹೋಗಿದ್ದ ವ್ಯಕ್ತಿಯ ಜೀವ ತೆಗೆದ ಕಾಡಾನೆ*

ಪ್ರಗತಿವಾಹಿನಿ ಸುದ್ದಿ: ಚಿರತೆ ಓಡಾಟದ ಆತಂಕದ ನಡುವೆಯೇ ಇದೀಗ ಸಿಲಿಕಾನ್‌ ಸಿಟಿ ಮಂದಿ ಆನೆ ಆತಂಕ ಕೂಡ ಶುರುವಾಗಿದೆ. ಬೆಂಗಳೂರಿನ ಮೈಸೂರು ರಸ್ತೆಯ ಅಂಚೆಪಾಳ್ಯದಲ್ಲಿ ಬೆಳ್ಳಂಬೆಳಗ್ಗೆ ಆನೆ ದಾಳಿ ನಡೆಸಿದ್ದು, ವಾಕಿಂಗ್‌ಗೆ ತೆರಳಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದಸ್ದಾರೆ.

ವಾಕಿಂಗ್‌ಗೆ ತೆರಳಿದ್ದ ನಾಗರಾಜ್ (60) ನೆ ದಾಳಿಗೆ ಬಲಿಯಾಗಿದ್ದಾರೆ.  ಇಂದು ಬೆಳಗ್ಗೆ ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗದಲ್ಲಿ 5.30ರ ಸುಮಾರಿಗೆ ಒಂಟಿ ಸಲಗ ಕಾಣಿಸಿಕೊಂಡಿದೆ. ಈ ವೇಳೆ ವಾಕಿಂಗ್‌ಗೆ ಬಂದಿದ್ದ ನಾಗರಾಜ್ ಮೇಲೆ ಏಕಾಏಕಿ ದಾಳಿ ಮಾಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ನಾಗರಾಜ್ ತಮ್ಮ ಮಗಳು ಶೋಭಾ ಅವರೊಂದಿಗೆ ವಾಕಿಂಗ್‌ಗೆ ತೆರಳಿದ್ದರು. ಈ ವೇಳೆ ಆನೆ ಎದುರಾಗುತ್ತಿದ್ದಂತೆ ಶೋಭಾ ಓಡಿ ಹೋಗಿ ಅಪಾಯದಿಂದ ಪಾರಾಗಿದ್ದಾರೆ. ಆದರೆ ತಂದೆಯ ಮೇಲೆ ಆನೆ ದಾಳಿ ನಡೆಸಿದ್ದನ್ನು ಕಣ್ಣಾರೆ ಕಂಡು ಅವರು ಆಘಾತಕ್ಕೊಳಗಾಗಿದ್ದಾರೆ. ಘಟನೆಯ ಬಳಿಕ ಅಂಚೆಪಾಳ್ಯ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಾಗಿದೆ.

ಇದೀಗ ಆನೆ ಜನವಸತಿ ಪ್ರದೇಶಕ್ಕೆ ಹೇಗೆ ಬಂದಿದೆ ಎಂಬುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಜನರು ಮುಂಜಾನೆ ಹಾಗೂ ರಾತ್ರಿ ವೇಳೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.

ಆನೆ ದಾಳಿಯ ಆತಂಕದ ನಡುವೆಯೇ ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಇತ್ತೀಚೆಗೆ ಚಿರತೆ ಓಡಾಟವೂ ಜನರನ್ನು ಭಯಕ್ಕೀಡು ಮಾಡಿತ್ತು. ಬನಶಂಕರಿ 6ನೇ ಹಂತ ಹಾಗೂ ಕರಿಯಣ್ಣಪಾಳ್ಯ ಸಮೀಪ ಚಿರತೆ ಕಾಣಿಸಿಕೊಂಡಿದ್ದು, ರಾತ್ರಿ ಮತ್ತು ಮುಂಜಾನೆ ವೇಳೆ ಅದರ ಓಡಾಟ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಬೋನುಗಳನ್ನು ಅಳವಡಿಸಿ ಕಾರ್ಯಾಚರಣೆ ನಡೆಸಿತ್ತು.

ಒಂದೆಡೆ ಚಿರತೆ, ಮತ್ತೊಂದೆಡೆ ಆನೆ ಪ್ರತ್ಯಕ್ಷವಾಗಿರುವುದು ನಗರ ಹೊರವಲಯದ ಜನರಲ್ಲಿ ವನ್ಯಜೀವಿ ಆತಂಕ ಹೆಚ್ಚಿಸಿದೆ. ಇದೀಗ ಅಂಚೆಪಾಳ್ಯದಲ್ಲಿ ನಡೆದ ದಾಳಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುಂದಿನ ಕ್ರಮದತ್ತ ಗಮನ ಹರಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button