*ಲಾರಿ ಹರಿದು 70 ವರ್ಷದ ವ್ಯಕ್ತಿ ಸಾವು: ಅಥಣಿಯಲ್ಲಿ ಭೀಕರ ಅಪಘಾತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಥಣಿ ಪಟ್ಟಣದ ಶಿವಯೋಗಿ ವೃತ್ತದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 70 ವರ್ಷದ ವೃದ್ಧರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ರುದ್ರಗೌಡ ನಿವಲಗಿ (70) ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ರುದ್ರಗೌಡ ಅವರು ರಸ್ತೆ ದಾಟುತ್ತಿದ್ದಾಗ ವಿಜಯಪುರ ಕಡೆಯಿಂದ ಸರಕು ತುಂಬಿಕೊಂಡು ಬರುತ್ತಿದ್ದ 10 ಚಕ್ರದ ಲಾರಿ ಡಿಕ್ಕಿ ಹೊಡೆದು ಹರಿದಿದೆ ಎನ್ನಲಾಗಿದೆ.
ಲಾರಿಗೆ ಬ್ರೇಕ್ ಫೇಲ್ ಆಗಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು, ಇದೇ ವೇಳೆ ಬೈಕ್ ಸವಾರನ ಮೇಲೂ ಲಾರಿ ಹರಿದಿದೆ ಎಂದು ತಿಳಿದುಬಂದಿದೆ. ಅಪಘಾತದ ತೀವ್ರತೆಗೆ ರುದ್ರಗೌಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಶಿವಯೋಗಿ ವೃತ್ತದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಹಾಗೂ ಲಾರಿ ಚಾಲಕನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ. ಘಟನೆ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


