*174 ಪ್ರಯಾಣಿಕರ ಜೀವ ಉಳಿಸಿದ ಗುಜರಾತ್ ಮೂಲದ ಪೈಲಟ್*: *ಸ್ಮಿತ್ ಮಚ್ಛಾರ್‌ಗೆ ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ*

ಪ್ರಗತಿವಾಹಿನಿ ಸುದ್ದಿ: ಫ್ಲೈದುಬೈ ವಿಮಾನದಲ್ಲಿ ಸಂಭವಿಸಿದ ಗಂಭೀರ ಘಟನೆಯ ವೇಳೆ ಧೈರ್ಯ ಪ್ರದರ್ಶಿಸಿ 174 ಪ್ರಯಾಣಿಕರ ಜೀವ ರಕ್ಷಣೆಗೆ ನೆರವಾದ ಕ್ಯಾಪ್ಟನ್ ಸ್ಮಿತ್ ಮಚ್ಛಾರ್ ಅವರನ್ನು ಗುಜರಾತ್ ಸರ್ಕಾರ ಗೌರವಿಸಲು ನಿರ್ಧರಿಸಿದೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸ್ಮಿತ್ ಮಚ್ಛಾರ್‌ಗೆ ರಾಜ್ಯದ ‘ವಿಶಿಷ್ಟ ಗುಜರಾತ್ ಗರಿಮಾ ಪ್ರಶಸ್ತಿ’ ನೀಡಿ ಗೌರವಿಸುವುದಾಗಿ ಘೋಷಿಸಿದ್ದಾರೆ.
ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಘಟನೆಯ ವೇಳೆ ಸ್ಮಿತ್ ಮಚ್ಛಾರ್ ತೋರಿದ ಧೈರ್ಯಕ್ಕೆ ದೇಶ-ವಿದೇಶಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದರೂ ಪ್ರಯಾಣಿಕರ ಸುರಕ್ಷತೆಗಾಗಿ ಸ್ಮಿತ್ ಮಚ್ಛಾರ್ ಕೈಗೊಂಡ ಕ್ರಮವನ್ನು ಗುಜರಾತ್ ಮುಖ್ಯಮಂತ್ರಿ ಶ್ಲಾಘಿಸಿದ್ದಾರೆ.
ಸ್ಮಿತ್ ಮಚ್ಛಾರ್ ಅವರ ಶೌರ್ಯವನ್ನು ಇಡೀ ಜಗತ್ತು ಗೌರವಿಸುತ್ತಿದೆ ಎಂದು ಭೂಪೇಂದ್ರ ಪಟೇಲ್ ಹೇಳಿದ್ದಾರೆ. ಗುಜರಾತ್‌ನ ಈ ಧೀರ ಪುತ್ರ ತನ್ನ ಧೈರ್ಯದಿಂದ ಭಾರತ ಹಾಗೂ ಗುಜರಾತ್‌ನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿದಿದ್ದಾರೆ ಎಂದು ಸಿಎಂ ಸಾಮಾಜಿಕ ಜಾಲತಾಣದ ಸಂದೇಶದಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಸ್ಮಿತ್ ಮಚ್ಛಾರ್ ಅವರನ್ನು ಶ್ಲಾಘಿಸಿದ್ದಾರೆ. ಕಠಿಣ ಪರಿಸ್ಥಿತಿಯಲ್ಲೂ ನೂರಾರು ಪ್ರಯಾಣಿಕರ ಜೀವ ಉಳಿಸಲು ತೋರಿದ ಸಮಯಪ್ರಜ್ಞೆ ಮತ್ತು ಧೈರ್ಯ ಮಾದರಿಯಾಗಿದೆ ಎಂದು ಫಡ್ನವಿಸ್ ಹೇಳಿದ್ದಾರೆ.
ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಒಟ್ಟಾಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನೆರವಾದುದನ್ನೂ ಫಡ್ನವಿಸ್ ಉಲ್ಲೇಖಿಸಿದ್ದಾರೆ. ಸ್ಮಿತ್ ಮಚ್ಛಾರ್ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಸ್ಮಿತ್ ಮಚ್ಛಾರ್ ಅವರನ್ನು ‘ರಿಯಲ್ ಹೀರೋ’ ಎಂದು ಬಣ್ಣಿಸಿದ್ದಾರೆ. ದೊಡ್ಡ ದುರಂತವನ್ನು ತಪ್ಪಿಸಲು ಸ್ಮಿತ್ ಮಚ್ಛಾರ್ ತೋರಿದ ಧೈರ್ಯವನ್ನು ನೆತನ್ಯಾಹು ಪ್ರಶಂಸಿಸಿದ್ದಾರೆ.
ಸ್ಮಿತ್ ಮಚ್ಛಾರ್ ಅವರ ಕುಟುಂಬದ ಮೂಲ ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಗ್ರಾಮವೊಂದಕ್ಕೆ ಸೇರಿದೆ. ಬಳಿಕ ಕುಟುಂಬ ಮುಂಬೈಗೆ ವಲಸೆ ಬಂದು ಘಾಟ್‌ಕೋಪರ್‌ನಲ್ಲಿ ನೆಲೆಸಿತ್ತು. ಸ್ಮಿತ್ ಪ್ರಸ್ತುತ ದುಬೈನಲ್ಲಿ ವಾಸಿಸುತ್ತಿದ್ದು, ಪತ್ನಿ ಸೋನಲ್ ಅಮ್ರೇಲಿ ಜಿಲ್ಲೆಯ ಸಾವರಕುಂಡ್ಲ ಮೂಲದವರು ಎಂದು ವರದಿಯಾಗಿದೆ.
ಬೋಯಿಂಗ್ 737 ವಿಮಾನಗಳ ಹಾರಾಟದಲ್ಲಿ ಸ್ಮಿತ್ ಮಚ್ಛಾರ್‌ಗೆ 13 ವರ್ಷಕ್ಕೂ ಹೆಚ್ಚು ವಾಣಿಜ್ಯ ವಿಮಾನ ಚಾಲನಾ ಅನುಭವವಿದೆ. 2022ರಿಂದ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಮಿತ್, ಇದಕ್ಕೂ ಮುನ್ನ ಸ್ಪೈಸ್‌ಜೆಟ್‌ನಲ್ಲಿ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಜವಳಿ ಉದ್ಯಮದ ಕುಟುಂಬದಿಂದ ಬಂದ ಸ್ಮಿತ್ ಮಚ್ಛಾರ್, ಮ್ಯಾನೇಜ್‌ಮೆಂಟ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ನಡೆದ ಏವಿಯೇಷನ್ ಸೆಮಿನಾರ್‌ನಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದಿಂದ ಪೈಲಟ್ ಆಗುವ ಪ್ರೇರಣೆ ಪಡೆದು ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟರು ಎಂದು ವರದಿಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




